ಸಾರಾಂಶ
ಕಳೆದ ಮೂರು ದಿನಗಳಿಂದ ಉಡುಪಿ, ಕುಂದಾಪುರಗಳಲ್ಲಿ ಬಳಕೆದಾರರು ತಮ್ಮ ಎಲ್‌ಪಿಜಿ ಪೂರೈಕೆ ಏಜೆನ್ಸಿ ಮುಂದೆ ಕೆವೈಸಿ ಮಾಡಿಸಲು ಸಾರದಿ ಸಾಲಲ್ಲಿ ನಿಲ್ಲುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
‘ಕೇಂದ್ರ ಸರ್ಕಾರ ಮತ್ತೆ ಎಲ್ ಪಿಜಿ ಬಳಕೆದಾರರಿಗೆ ಸಬ್ಸಿಡಿ ನೀಡುತ್ತಿದೆ, ಅದನ್ನು ಪಡೆಯಲು ಎಲ್ ಪಿಜಿ ಸಂಪರ್ಕಕ್ಕೆ (ಕೆವೈಸಿ) ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ಜೋಡಿಸಬೇಕು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ವದಂತಿ ತೀವ್ರ ಗೊಂದಲಕ್ಕೆ ಕಾರಣವಾಗಿದೆ.ಕಳೆದ ಮೂರು ದಿನಗಳಿಂದ ಉಡುಪಿ, ಕುಂದಾಪುರಗಳಲ್ಲಿ ಬಳಕೆದಾರರು ತಮ್ಮ ಎಲ್‌ಪಿಜಿ ಪೂರೈಕೆ ಏಜೆನ್ಸಿ ಮುಂದೆ ಕೆವೈಸಿ ಮಾಡಿಸಲು ಸಾರದಿ ಸಾಲಲ್ಲಿ ನಿಲ್ಲುತ್ತಿದ್ದಾರೆ.
ಆದರೆ, ಆಹಾರ ಮತ್ತು ಪಡಿತರ ಪೂರೈಕೆ ಇಲಾಖೆಯ ಅಧಿಕಾರಿಗಳು ಸಬ್ಸಿಡಿ ನೀಡುವ ಬಗ್ಗೆ ಸರ್ಕಾರದಿಂದ ಯಾವುದೇ ಸುತ್ತೋಲೆ ಬಂದಿಲ್ಲ. ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಲ್ಲಿ ಎಲ್‌ಪಿಜಿ ಸಂಪರ್ಕ ಪಡೆದವರಿಗೆ ಕೆವೈಸಿ ಮಾಡಿಸಲು ಸೂಚಿಸಲಾಗಿದೆ. ಅವರಷ್ಟೇ ಕೆವೈಸಿ ಮಾಡಿಸಿದರೇ ಸಾಕು ಎಂದು ಸ್ಪಷ್ಟಪಡಿಸಿದ್ದಾರೆ.ಆದರೂ ಜನರಲ್ಲಿ ಗೊಂದಲ ಕಡಿಮೆಯಾಗಿಲ್ಲ. ಉಡುಪಿಯಲ್ಲಿ ಗುರುವಾರವೂ ಬಳಕೆದಾರರು ಆಧಾರ್, ಬ್ಯಾಂಕ್ ಪಾಸ್ ಬುಕ್ ಗಳ ಝೆರಾಕ್ಸ್ ಪ್ರತಿಗಳನ್ನು ಹಿಡಿದು ಎಲ್ ಪಿಜಿ ಏಜೆನ್ಸಿಗಳ ಮುಂದೆ ಕೆವೈಸಿ ಮಾಡಿಸಲು ಸಾಲುಗಟ್ಟಿದ್ದು ಕಂಡುಬಂತು.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕೇಂದ್ರ ಸರ್ಕಾರ ಎಲ್ ಪಿಜಿ ಗೆ ಸಬ್ಸಿಡಿ ನೀಡಬಹುದು, ಆದ್ದರಿಂದ ಯಾವುದಕ್ಕೂ ಕೆವೈಸಿ ಮಾಡಿಸಿದರೆ ಒಳ್ಳೆಯ ಎಂಬ ನಿರೀಕ್ಷೆಯನ್ನು ಕೆಲವು ಬಳಕೆದಾರರು ವ್ಯಕ್ತಪಡಿಸಿದ್ದಾರೆ.ಸಬ್ಸಿಡಿ ಬಗ್ಗೆ ಗೊತ್ತಿಲ್ಲ, ಆದರೆ ಉಜ್ವಲ ಯೋಜನೆ ಫಲಾನುಭವಿಗಳಿಗೆ ಕೆವೈಸಿಗೆ ಸೂಚನೆ ಬಂದಿದೆ. ಉಳಿದವರು ಕೆವೈಸಿ ಮಾಡಿಸುವುದರಿಂದ ಯಾವುದೇ ತೊಂದರೆ ಇಲ್ಲ, ಮುಂದೆ ಬೇಕಾಗಬಹುದು ಎಂಬ ಕಾರಣಕ್ಕೆ ಬಂದವರೆಲ್ಲರ ಕೆವೈಸಿ ಮಾಡಿಸುತ್ತಿದ್ದೇವೆ ಎಂದು ಏಜೆನ್ಸಿಯ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.