ಆಕಸ್ಮಿಕ ಘಟನೆಯಲ್ಲಿ ಅನಾಥಳಾಗಿದ್ದ ಲೂಸಿ ಸಾಲ್ಡಾನಾ ಶಾಲಾ ಮಕ್ಕಳಲ್ಲಿಯೇ ಬಳಗ ಕಂಡ ಬದುಕಿನ ಬಂಡಿ ಈಗ ಚಲನಚಿತ್ರ..!

| Published : Dec 15 2024, 02:05 AM IST / Updated: Dec 15 2024, 04:55 AM IST

ಆಕಸ್ಮಿಕ ಘಟನೆಯಲ್ಲಿ ಅನಾಥಳಾಗಿದ್ದ ಲೂಸಿ ಸಾಲ್ಡಾನಾ ಶಾಲಾ ಮಕ್ಕಳಲ್ಲಿಯೇ ಬಳಗ ಕಂಡ ಬದುಕಿನ ಬಂಡಿ ಈಗ ಚಲನಚಿತ್ರ..!
Share this Article
  • FB
  • TW
  • Linkdin
  • Email

ಸಾರಾಂಶ

ಆಕಸ್ಮಿಕ ಘಟನೆಯಲ್ಲಿ ಅನಾಥಳಾಗಿದ್ದ ಲೂಸಿ ಸಾಲ್ಡಾನಾ ಶಾಲಾ ಮಕ್ಕಳಲ್ಲಿಯೇ ಬಂಧು-ಬಳಗ ಕಂಡಿದ್ದಾರೆ. ಹೀಗಾಗಿ ಮರು ಮದುವೆ ಆಗದೆ ಮತ್ತೆ ಅವರ ಮನೆಗೆ ಹೋಗದೆ ಶಾಲಾ ಮಕ್ಕಳೇ ತನ್ನ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

ಧಾರವಾಡ:  ನಿವೃತ್ತಿ ನಂತರ ಸರ್ಕಾರಿ ನೌಕರರು ತಮಗೆ ಬರುವ ಲಕ್ಷಗಟ್ಟಲೇ ಪಿಂಚಣಿ ಹಣವನ್ನು ಹೇಗೆಲ್ಲಾ ಆನಂದಿಸಬೇಕು ಎಂದು ಚಿಂತಿಸುತ್ತಾರೆ. ಆದರೆ, ಈ ಮಹಾ ಮಾತೆ, ಸಮಾಜ ಸೇವಕಿ, ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನಾ, ತಾವು ಶಿಕ್ಷಕಿ ಆಗಿದ್ದಾಗಿನಿಂದಲೂ, ನಿವೃತ್ತಿಯಾದರೂ ತಮ್ಮ ದುಡಿಮೆಯ ಬಹುತೇಕ ಹಣವನ್ನು ಸ್ವಹಿತಾಸಕ್ತಿಗೆ ಬಳಸದೇ ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಮೂಲಕ ಅಕ್ಷರತಾಯಿ ಎಂದೇ ಖ್ಯಾತಿ ಪಡೆದಿದ್ದಾರೆ.

ಇದೀಗ ಅವರ ಬದುಕು ಆಧಾರಿತ ಸಿನಿಮಾವೊಂದನ್ನು ಸಂಪನ್ಮೂಲ ಶಿಕ್ಷಕ ಬಾಬಾಜಾನ ಮುಲ್ಲಾ ನೇತೃತ್ವದ ತಂಡವು ಹೊರ ತಂದಿದೆ. ಭಾನುವಾರ ಮಧ್ಯಾಹ್ನ 2.30ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬದುಕಿನ ಬಂಡಿ ಬಿಡುಗಡೆಗೂ ಸಿದ್ಧವಾಗಿದೆ. ಒಂದುವರೆ ಗಂಟೆಯ ಚಿತ್ರ ಇದಾಗಿದ್ದು, ಚಿತ್ರದ ಪಾತ್ರಧಾರಿಗಳೆಲ್ಲರೂ ಶಿಕ್ಷಕರೇ ಎಂಬುದು ವಿಶೇಷ. ಹವ್ಯಾಸಿ ಕಲಾವಿದ ಶಿಕ್ಷಕ ಬಳಗ, ಶಾಲಾ-ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅಭಿನಯಿಸಿ ಸಮಾಜಕ್ಕೆ ಮಾದರಿ ವ್ಯಕ್ತಿತ್ವವನ್ನು ಈ ಚಲನಚಿತ್ರದ ಮೂಲಕ ಪರಿಚಿಯಿಸುವ ಕೆಲಸವಾಗಿದೆ.

ಯಾರೀ ಈ ಲೂಸಿ ಸಾಲ್ಡಾನಾ:

ನಾಲ್ಕು ವರ್ಷದವಳಿದ್ದಾಗ ರೈಲಿನಲ್ಲಿ ಮುಂಬೈಗೆ ಹೋಗುವಾಗ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪಾಲಕರಿಂದ ತಪ್ಪಿಸಿಕೊಳ್ಳುವ ಲೂಸಿ ಸಾಲ್ಡಾನಾ, ರೈಲು ಸಿಬ್ಬಂದಿ ಜತೆ ಬೆಳೆದು 12ನೇ ವಯಸ್ಸಿಗೆ ಮದುವೆಯಾಗುತ್ತಾರೆ. ದುರದೃಷ್ಟವಶಾತ್‌ ಕೆಲವೇ ದಿನಗಳಲ್ಲಿ ಪತಿ ಕಳೆದುಕೊಂಡು ಮತ್ತೆ ಅನಾಥರಾಗುತ್ತಾರೆ. ತಮ್ಮ ತಂದೆ-ತಾಯಿ ಸ್ಮರಣೆ ಇದ್ದರೂ ಅವರ ಬಳಿ ಹೋಗದೇ ಶಿಕ್ಷಕಿಯಾಗಿ ಸ್ವಾವಬಂಬಿ ಜೀವನ ನಡೆಸುವ ಸಾಲ್ಡಾನಾ, ಮಕ್ಕಳಿಗೆ ಪಾಠ ಹೇಳಿ ದುಃಖ ಮರೆಯುತ್ತಾರೆ. 2000ರಲ್ಲಿ ಸರ್ಕಾರಿ ಶಾಲೆಗೆ ದತ್ತಿ ಆರಂಭಿಸಿರುವ ಅವರು ಈ ವರೆಗೆ 109 ಶಾಲೆಗಳಿಗೆ ಅಂದಾಜು ₹70 ಲಕ್ಷದಷ್ಟು ದತ್ತಿ ನೀಡಿದ್ದಾರೆ.

ಇವರ ಕಾರ್ಯ ಮೆಚ್ಚಿ 2018ರಲ್ಲಿ ಕನ್ನಡಪ್ರಭ, ಸುವರ್ಣ ಸುದ್ದಿ ವಾಹಿನಿ ಕೊಡಮಾಡಿದ ಸುವರ್ಣ ಸಾಧಕಿಯಿಂದ ಹಿಡಿದು ಇದೇ ವರ್ಷ ರಾಜ್ಯ ಸರ್ಕಾರ ಸುವರ್ಣ ಮಹೋತ್ಸವ ಪ್ರಶಸ್ತಿ ವರೆಗೂ ಸಾಲ್ಡಾನಾ ಅವರ ಕೈಂಕೈರ್ಯಕ್ಕೆ ಹತ್ತಾರು ಪ್ರಶಸ್ತಿಗಳು ಸಂದಿವೆ. ಇದೀಗ ಚಿತ್ರವೊದನ್ನು ಬಿಡುಗಡೆ, ಪ್ರದರ್ಶನಕ್ಕೆ ಸಿದ್ಧವಾಗಿದ್ದು ಈ ಕುರಿತು ಸಹ ನಿರ್ದೇಶಕ ವೈ.ಬಿ. ದ್ಯಾಪೂರ ಕನ್ನಡಪ್ರದೊಂದಿಗೆ ಮಾತನಾಡಿದ್ದಾರೆ. ವೈ.ವಿ. ಕಡಕೋಳ ಕೃತಿಯಲ್ಲದೇ, ಲೂಸಿ ಸಾಲ್ಡಾನಾ ಅವರೊಂದಿಗೆ ಎರಡು ಗಂಟೆ ಸಂದರ್ಶನ ಮಾಡಿದ್ದು, ಜೀವನದ ಮುಖ್ಯ ಘಟ್ಟಗಳನ್ನು, ರೋಚಕ ಘಟನೆಗಳನ್ನು ಸಂಗ್ರಹಿಸಿ ಸಿನಿಮಾ ತೆಗೆಯಲಾಗಿದೆ ಎಂದರು.

ಮಹಮ್ಮದ ಯೂಸೂಫ್‌ ಮುಲ್ಲಾ ಛಾಯಾಗ್ರಹಣ, ಮಹಾದೇವ ಬಸರಕೋಡ ಗೀತ ಸಂಯೋಜನೆ, ಪವನ ಕುಲಕರ್ಣಿ ಎಡಿಟಿಂಗ್‌, ಮಲ್ಲನಗೌಡ ಪಾಟೀಲ ನೃತ್ಯ ಸಂಯೋಜನೆ, ವೈಭವ ಭಟ್‌ ಧ್ವನಿ ಗ್ರಹಣ ಮತ್ತು ಸಂಗೀತ ನೀಡಿದ್ದಾರೆ.

ಈ ಚಿತ್ರ ಹೊರ ಬರಲು ಹಲವು ಶಿಕ್ಷಕರ ಸಂಘಟನೆಗಳು, ಇಲಾಖೆ ಅಧಿಕಾರಿಗಳು, ಸಮಸ್ತ ಶಿಕ್ಷಕ ಬಳಗ ಸಹಕಾರ ನೀಡಿದ್ದು, ನವರಸ ಸ್ನೇಹಿತರ ವೇದಿಕೆ, ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಜತೆಗೂಡಿ ಚಿತ್ರ ಬಿಡುಗಡೆ ಹಾಗೂ ಪ್ರದರ್ಶನವನ್ನು ಆಯೋಜಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿ ಎಂದು ಚಿತ್ರ ನಿರ್ದೇಶಕ ಬಾಬಾಜಾನ ಮುಲ್ಲಾ ಮನವಿ ಮಾಡಿದರು. ಆಕಸ್ಮಿಕ ಘಟನೆಯಲ್ಲಿ ಅನಾಥಳಾಗಿದ್ದ ನಾನು ಶಾಲಾ ಮಕ್ಕಳಲ್ಲಿಯೇ ಬಂಧು-ಬಳಗ ಕಂಡೆ. ಹೀಗಾಗಿ ಮರು ಮದುವೆ ಆಗಲಿಲ್ಲ. ಮತ್ತೆ ನಮ್ಮನೆಗೆ ಹೋಗಲಿಲ್ಲ. ಶಾಲಾ ಮಕ್ಕಳೇ ನನ್ನ ಆಸ್ತಿ. ಹೀಗಾಗಿ ನನ್ನ ದುಡಿಮೆ ಬಹುತೇಕ ಭಾಗ ಅವರ ಶಿಕ್ಷಣಕ್ಕೆ ನೀಡಿದ್ದು, ಸಮಾಜದಿಂದ ಪಡೆದುಕೊಂಡಿದ್ದನ್ನು ಮರಳಿ ಸಮಾಜಕ್ಕೆ ಕೊಟ್ಟಿದ್ದೇನೆ ಅಷ್ಟೇ ಎಂದು ಲೂಸಿ ಸಾಲ್ಡಾನಾ ಹೇಳಿದರು.