ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕಾಮ ಮತ್ತು ಕ್ರೋಧಗಳು ಅಪರಾಧಗಳಿಗೆ ಕಾರಣವಾಗಿದೆ. ಶ್ರೀ ಭಗವದ್ಗೀತಾ ಪಠಣ ಮಾಡುವ ಮೂಲಕ ಅದರಿಂದ ಹೊರಬರುವ ಉಪಾಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ತಿಳಿಸಿದರು.ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವದ್ಗೀತಾ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಭಗವದ್ಗೀತಾ ಒಂದು ಮಹತ್ವದ ಹಾಗೂ ತುಂಬಾ ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ. ಸುಮಾರು 100ಕ್ಕೂ ಹೆಚ್ಚು ಜೈಲಿನ ನಿವಾಸಿಗಳಿಗೆ ಭಗವದ್ಗೀತೆಯ ಒಂಭತ್ತನೆಯ ಅಧ್ಯಾಯದ ಶ್ಲೋಕಗಳನ್ನು ಒಂದು ವಾರಗಳ ಕಾಲ ಹೇಳಿಕೊಡಲಾಯಿತು. ಜೊತೆಗೆ ಅಲ್ಲಿನ ಕೈದಿಗಳಿಗೆ ಭಗವದ್ಗೀತೆಯ ಪುಸ್ತಕಗಳನ್ನು ವಿತರಿಸಿ, ಶ್ರೀಗಳು ಆಶೀರ್ವಚನ ನೀಡಿದರು.
ಭಗವದ್ಗೀತೆಯಲ್ಲಿ ಭಗವಂತ ಕಾಮ ಮತ್ತು ಕ್ರೋಧಗಳು ಅಪರಾಧಕ್ಕೆ ಕಾರಣ ಎಂಬುದನ್ನು ಸವಿವರವಾಗಿ ಹೇಳಿದ್ದಾನೆ. ಕಾಮ ಎಂದರೆ ಆಸೆ ಕ್ರೋಧ ಎಂದರೆ ದ್ವೇಷ. ಅತಿಯಾದ ಆಸೆ ಮತ್ತು ದ್ವೇಷಗಳು ಮನುಷ್ಯ ಅಪರಾಧವನ್ನು ಮಾಡಲು ಪ್ರಮುಖ ಕಾರಣ ಎಂದು ಹೇಳಿದರು.ತಾನು ಒಮ್ಮೆಲೆ ಹಣ ಗಳಿಸಬೇಕು, ಶ್ರೀಮಂತನಾಗಬೇಕು ಎಂಬ ಅತಿಯಾದ ಆಸೆಯಿಂದ ಕಳ್ಳತನ, ದರೋಡೆಗಳನ್ನು ಮಾಡುತ್ತಾನೆ. ಯಾವುದಾದರೂ ಅಧರ್ಮದ ಮಾರ್ಗವನ್ನು ಹಿಡಿಯುತ್ತಾನೆ. ಯಾರದೋ ಮೇಲಿನ ದ್ವೇಷದಿಂದ ಮಾಡಬಾರದ ಕೆಲಸಗಳನ್ನು ಮಾಡುತ್ತಾನೆ. ಇದೇ ಅಪರಾಧಕ್ಕೆ ಕಾರಣ. ಅಪರಾಧಕ್ಕೆ ಕಾರಣವಾದ ಅತಿಯಾದ ಆಸೆ ಮತ್ತು ದ್ವೇಷಗಳನ್ನು ಬಿಡುವ ಕೆಲವು ಉಪಾಯಗಳನ್ನು ಭಗವದ್ಗೀತೆ ಕೊಡುತ್ತದೆ. ಭಗವದ್ಗೀತೆಯ ಶ್ಲೋಕಗಳನ್ನು ನಿತ್ಯ ಪಠಣ ಮಾಡುವುದರಿಂದ ಮನಸು ಶಾಂತಗೊಂಡು ಒಳ್ಳೆಯ ಚಿಂತನೆಗಳು ಬರುತ್ತವೆ. ಇದರಿಂದ ಅಪರಾಧ ಪ್ರವೃತ್ತಿ ಕಡಿಮೆಯಾಗುತ್ತದೆ. ಮಾನವೀಯ ಮೌಲ್ಯಗಳು ಬೆಳೆಯುತ್ತವೆ ಎಂದು ಬೋಧಿಸಿದರು.
ತಿಲಕರು ಜೈಲಿನಲ್ಲಿ ಇದ್ದುಕೊಂಡೇ ಗೀತಾ ರಹಸ್ಯ ಎಂಬ ಭಗವದ್ಗೀತೆಯ ಮೇಲಿನ ಒಂದು ಅದ್ಭುತ ಗ್ರಂಥ ಬರೆದರು. ಅರವಿಂದರು ಜೈಲಿನಲ್ಲಿ ಇದ್ದುಕೊಂಡೇ ತಮ್ಮ ಯೋಗಸಾಧನೆಯ ಮೂಲಕ ಜೈಲಿನಿಂದ ಹೊರ ಬರುವಾಗ ಮಹರ್ಷಿಗಳಾದರು. ಮಹಾತ್ಮ ಗಾಂಧೀಜಿಯಂತಹ ಅನೇಕ ನೇತಾರರು ಜೈಲಿನ ವಾಸ ಅನುಭವಿಸಿದರು. ಹೀಗೆ ಜೈಲು ವಾಸಿಗಳಿಗೆ ಇಂತಹ ಮಹಾತ್ಮರು ಒಳ್ಳೆಯ ನಿದರ್ಶನ ನೀಡಿದ್ದಾರೆ. ಇಂತವರನ್ನು ತಮ್ಮ ಜೀವನದಲ್ಲಿ ಆದರ್ಶವಾಗಿರಿಸಿಕೊಂಡು ಅವರನ್ನು ಅನುಸರಿಸುವ ಹಾಗೆ ಆಗಬೇಕು. ಭಗವದ್ಗೀತೆಯಂತಹ ಧರ್ಮ ಗ್ರಂಥಗಳನ್ನು ಸರಿಯಾಗಿ ಬಳಸಿಕೊಳ್ಳುವುದರ ಮೂಲಕ ಜೈಲಿನಲ್ಲಿರುವವರಿಗೆ ಅವರ ಜೀವನವನ್ನು ತಿದ್ದಿಕೊಳ್ಳಲು ಒಳ್ಳೆಯ ಅವಕಾಶ ಇದೆ ಎಂದರು. ಭಗವದ್ಗೀತೆಯು ಒಳ್ಳೆಯ ನಡತೆಗಳ ಪಟ್ಟಿಯನ್ನು ತುಂಬಾ ಕೊಡುತ್ತದೆ. ಅಂತಹ ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಬದುಕು ಸುಖಕರವಾಗಿ ಸಾಗುತ್ತದೆ ಎಂದರು.ಭಗವದ್ಗೀತಾ ಅಭಿಯಾನದ ಪಶಿಕ್ಷಣ ಪ್ರಮುಖ ಶ್ರೀರಾಮ ಭಟ್ ಅವರು ಏಳು ದಿನಗಳ ಕಾಲ ಕೈದಿಗಳಿಗೆ ಶ್ಲೋಕ ಹೇಳಿಕೊಟ್ಟರು.
ಕಾರಾಗೃಹದ ಅಧೀಕ್ಷಕ ಕೊಟ್ರೇಶ ಸೇರಿದಂತೆ ಪ್ರಮುಖ ಕಾರಾಗೃಹದ ಸಿಬ್ಬಂದಿಗಳು ಉಪಸ್ಥಿತರಿದ್ದರು.