ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಾಹಿತ್ಯ ರಚನೆ ಜನಪರವಾಗಿರಬೇಕು. ಸಾಮಾನ್ಯ ಓದುಗನಿಗೂ ಅರ್ಥವಾಗಬೇಕು. ಬೆರೆಸಿ ಬರೆಯದೇ ಬೆರೆತು ಬರೆಯಬೇಕು. ಜೀವನಾನುಭವದಿಂದ ರಚಿತವಾದ ಸಾಹಿತ್ಯ ಅನುಗಾಲವೂ ಜೀವಂತವಾಗಿರುತ್ತದೆ ಎಂದು ಸಾಹಿತಿ ಬಸವರಾಜ ಗಾರ್ಗಿ ಹೇಳಿದರು.ಜಿಲ್ಲಾ ಲೇಖಕಿಯರ ಸಂಘದ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತಿತ್ತಲಾಗಿ ಸಾಕಷ್ಟು ಮಹಿಳೆಯರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಅದಕ್ಕೆ ಬೆಳಗಾವಿ ಜಿಲ್ಲೆಯೂ ಹೊರತಲ್ಲ ಕತೆ ಕಾವ್ಯ ಕಾದಂಬರಿ ಹಾಸ್ಯ ವಿಡಂಬನೆ ಮಕ್ಕಳ ಸಾಹಿತ್ಯದಲ್ಲಿ ಮೊದಲಾದ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿದ್ದು, ಸತ್ವಯುತ ರಚನೆಗಳು ಹೊರಬರಬೇಕಾಗಿದೆ. ಈ ನಿಟ್ಟಿನಲ್ಲಿ ಲೇಖಕಿಯರು ಪ್ರಯತ್ನ ಮಾಡಬೇಕಾದ ಅಗತ್ಯವಿದೆ. ಲೇಖಕಿಯರು ಲೇಖಕರಿಗಿಂತ ಉತ್ತಮವಾದ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಲೇಖಕ ಸಮಾಜದ ಅನಧಿಕೃತ ಶಾಸಕ. ಜನಸಾಮಾನ್ಯರ ತವಕ ತಲ್ಲಣಗಳು ಕೃತಿಯಲ್ಲಿ ಅನಾವರಣಗೊಳ್ಳಬೇಕು. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ರಾಜ್ಯಕ್ಕೆ ಮಾದರಿಯಾಗಿದ್ದು ರಜತಮಹೋತ್ಸವದತ್ತ ಸಾಗುತ್ತಿರುವುದು ಹೆಮ್ಮೆಯ ವಿಷಯ. 25 ರ ಸಂಭ್ರಮ ಅರ್ಥಪೂರ್ಣವಾಗಬೇಕು ಎಂದು ತಿಳಿಸಿದರು.ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಚಟುವಟಿಕೆಗಳಿಗೆ ಸದಸ್ಯರೇ ಜೀವಾಳ. ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಕಾರ್ಯಗಳನ್ನು ಸಂಘದಿಂದ ಹಮ್ಮಿಕೊಂಡು ಕಾರ್ಯವ್ಯಾಪ್ತಿ ವಿಸ್ತರಿಸುವ ಕುರಿತು ಯೋಚಿಸಲಾಗುತ್ತಿದೆ ಮತ್ತಷ್ಟು ದತ್ತಿಗಳನ್ನು ಸ್ಥಾಪಿಸಿ ಉದಯೋನ್ಮುಖ ಲೇಖಕಿಯರನ್ನು ಪ್ರೋತ್ಸಾಹಿಸಲಾಗುವುದು ಎಂದರು.
ದತ್ತಿ ದಾನಿಗಳಾದ ಜ್ಯೋತಿ ಬದಾಮಿ, ಇಂದಿರಾ ಮೋಟೆಬೆನ್ನೂರ, ಡಾ.ಹೇಮಾ ಸೋನೊಳ್ಳಿ, ರೋಹಿಣಿ ಯಾದವಾಡ. ಸುಧಾ ಪಾಟೀಲ. ಪ್ರಭಾ ಪಾಟೀಲ ಮಾತನಾಡಿದರು.ದೀಪಿಕಾ ಚಾಟೆ, ವಿದ್ಯಾ ಹುಂಡೇಕರ, ಡಾ.ಗುರುದೇವಿ ಹುಲೆಪ್ಪನವರಮಠ, ರಂಜಿತಾ ಮಹಾಜನ, ಪದ್ಮಜಾ ಉಮರ್ಜಿ, ಪಾರ್ವತಿ ಪಿಟಗಿ, ರಾಜೇಶ್ವರಿ ಹೆಗಡೆ ಅವರಿಗೆ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಸಂಘದ ಸಂಸ್ಥಾಪಕ ಅಧ್ಯಕ್ಷೆ ಆಶಾ ಕಡಪಟ್ಟಿ ಮತ್ತು ಲಿಂಗಾಯತ ಮಹಿಳಾ ಸಂಘದ ಅಧ್ಯಕ್ಷೆ ಶೈಲಜಾ ಭಿಂಗೆ, ಆಕಾಶವಾಣಿ ಕಲಾವಿದ ಶ್ರೀರಂಗ ಜೋಶಿ ಸಂತೋಷ ನಾಯ್ಕ ಉಪಸ್ಥಿತರಿದ್ದರು. ಡಾ.ಭಾರತಿ ಮಠದ ಸ್ವಾಗತಿಸಿದರು. ಲೀಲಾ ಚೌಗಲೆ ವಂದಿಸಿದರು. ಅನ್ನಪೂರ್ಣ ಹಿರೇಮಠ ನಿರೂಪಿಸಿದರು.