ಸಾರಾಂಶ
ಸಾಗರ: ಹನ್ನೆರಡನೆಯ ಶತಮಾನದಲ್ಲಿ ಆನೆಯಂತೆ ನಡೆದಾಡಿದ ಬಸವಾದಿ ಶಿವ ಶರಣರು ಅಶಕ್ತರಿಗೆ ಬದುಕುವ ದಾರಿ ತೋರಿಸಿಕೊಟ್ಟರು. ಅಂತಹ ಗಜ ಸಮೂಹದಲ್ಲಿ ಒಂಟಿ ಸಲಗದಂತೆ ಮುನ್ನಡೆದವರು ಮಾಚಿದೇವರು ಎಂದು ಉಪನ್ಯಾಸಕ ಎಲ್.ಎಂ.ಹೆಗಡೆ ಅಭಿಪ್ರಾಯಪಟ್ಟರು.
ಸಾಗರ: ಹನ್ನೆರಡನೆಯ ಶತಮಾನದಲ್ಲಿ ಆನೆಯಂತೆ ನಡೆದಾಡಿದ ಬಸವಾದಿ ಶಿವ ಶರಣರು ಅಶಕ್ತರಿಗೆ ಬದುಕುವ ದಾರಿ ತೋರಿಸಿಕೊಟ್ಟರು. ಅಂತಹ ಗಜ ಸಮೂಹದಲ್ಲಿ ಒಂಟಿ ಸಲಗದಂತೆ ಮುನ್ನಡೆದವರು ಮಾಚಿದೇವರು ಎಂದು ಉಪನ್ಯಾಸಕ ಎಲ್.ಎಂ.ಹೆಗಡೆ ಅಭಿಪ್ರಾಯಪಟ್ಟರು.
ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಉಪನ್ಯಾಸ ನೀಡಿದರು.ಮಾಚಿದೇವ, ಮಾಚಿ, ಮಾಚರಸ, ಮಾಚಿದೇವರು, ಮಾಚಿತಂದೆ, ವೀರಗಂಟಿ, ಮುಂತಾದ ಹೆಸರುಗಳಿಂದ ಅಂದಿನ ಸಮಾಜದಲ್ಲಿ ಕರೆಯಲ್ಪಡುತ್ತಿದ್ದ ಮಾಚಯ್ಯನವರು ತಮ್ಮ ಹೆಸರಿನಲ್ಲಿಯೇ ಕಾಯಕವನ್ನು ಹೆಮ್ಮೆಯಿಂದ ಸೇರಿಸಿಕೊಂಡಿದ್ದರು ಎಂದು ತಿಳಿಸಿದರು.
ಮಾಚಿದೇವರು ಕಲ್ಯಾಣದ ಶರಣ ಸಮುದಾಯಕ್ಕೆ ಗಣಾಚಾರದ ಗುಟ್ಟು ಪರಿಚಯಿಸಿದರು. ಬಸವಾದಿ ಪ್ರಮುಖರ ಮರಣ ನಂತರ ಬಿಜ್ಜಳನ ರಾಜ್ಯದಲ್ಲಿ ಎದುರಾದ ದಂಗೆಯನ್ನು ಮಾಚಯ್ಯ ಸಮರ್ಥವಾಗಿ ಎದುರಿಸಿ ಶರಣ ಸಮುದಾಯದ ಉಳಿವಿಗೆ ಕಾರಣರಾಗುತ್ತಾರೆ. ಅಲ್ಲದೆ ವಚನ ಸಾಹಿತ್ಯದ ಜೀರ್ಣೋದ್ಧಾರಕ್ಕೆ ಈತನೇ ಕಾರಣಿಪುರಷನೆಂದರೂ ತಪ್ಪಾಗದು. ಕಾಯಕ ನಿಷ್ಠೆ, ಗುರು ಕಲಿದೇವರ ಮಾರ್ಗದರ್ಶನದಲ್ಲಿ ಸಕಲ ವಿದ್ಯಾ ಪಾರಂಗತನಾಗಿದ್ದ ಮಾಚಯ್ಯ, ಬಸವಣ್ಣ, ಸಿದ್ಧರಾಮೇಶ್ವರ, ಅಕ್ಕಮಹಾದೇವಿ, ಅಲ್ಲಮ ಪ್ರಭು, ಚನ್ನಬಸವಣ್ಣ ಮುಂದಾದ ವಚನಕಾರರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದು ಹೇಳಿದರು.ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಎಮ್.ಎಸ್.ಕೊಟ್ರಪ್ಪ, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಪೇಟೆ ಠಾಣೆ ಪಿಎಸ್ಐ ಸಾಗರ್ಕರ್, ಮಡಿವಾಳ ಸಮಾಜದ ನೌಕರರ ಸಂಘದ ಅಧ್ಯಕ್ಷ ಕೆ.ಎಚ್.ದಿವಾಕರ, ಕಾರ್ಯದರ್ಶಿ ವೆಂಕಟೇಶ, ಉಪನ್ಯಾಸಕ ಬಂಗಾರಪ್ಪ, ನಿರ್ದೇಶಕರುಗಳಾದ ಶಿವಮೂರ್ತಿ, ವಿಘ್ನೇಶ್ವರ, ಸತೀಶ, ಗಣೇಶ, ಕೆ.ಜಿ. ಸಂತೋಷ, ವೀರಪ್ಪ, ಗುತ್ಯಪ್ಪ, ಶ್ರೀನಿವಾಸ ಹಾಜರಿದ್ದರು.