ಸಾರಾಂಶ
Macro grant for start of aviation: Minister Khandre
-ಮ್ಯಾಕ್ರೋ ಯೋಜನೆಯಡಿಯಲ್ಲಿ ವೆಚ್ಚ ಭರಿಸುವ ಪ್ರಸ್ತಾವನೆ, ಸಿಎಸ್‌ಗೆ ಪತ್ರ
------ಕನ್ನಡಪ್ರಭ ವಾರ್ತೆ, ಬೀದರ್
ಬೀದರ್ ನಗರದಿಂದ ರಾಜಧಾನಿ ಬೆಂಗಳೂರಿಗೆ ನಾಗರಿಕ ವಿಮಾನ ಯಾನ ಸೇವೆ ಪುನಾರಂಭಿಸಲು ಹೆಚ್ಚುವರಿಯಾಗಿ ಬೇಕಾಗಿರುವ ಅನುದಾನವನ್ನು ಜಿಲ್ಲೆಗೆ ಹಂಚಿಕೆಯಾದ ಮ್ಯಾಕ್ರೋ ಯೋಜನೆಯಡಿಯಲ್ಲಿ ಭರಿಸಲು ಉದ್ದೇಶಿಸಿದ್ದು ಅದರ ಪ್ರಸ್ತಾವನೆಯನ್ನು ಅನುಮೋದಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.ಈ ಕುರಿತು ಪತ್ರ ಬರೆದಿರುವ ಅವರು, ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಗಡಿ ಜಿಲ್ಲೆ ಬೀದರ್‌ನ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳಿದ್ದು, ಕೇಂದ್ರ ಸರ್ಕಾರದ "ಉಡಾನ್ ಯೋಜನೆಯಡಿ ಬೀದರ್‌ದಲ್ಲಿರುವ ಭಾರತೀಯ ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನ ಯಾನ ಮಂತ್ರಾಲಯದಡಿ ಬೆಂಗಳೂರಿನಿಂದ ಬೀದರ್ ನಗರಕ್ಕೆ ಸಂಪರ್ಕ ಕಲ್ಪಿಸುವ ನಾಗರಿಕ ವಿಮಾನಯಾನ ಸೇವೆಯು ಕಳೆದ 9 ತಿಂಗಳಿಂದ ಸ್ಥಗಿತಗೊಂಡಿದ್ದು, ಇದರಿಂದ ಈ ಭಾಗದ ಸಾರ್ವಜನಿಕರಿಗೆ ಹಾಗೂ ವಿದೇಶಿ ಪ್ರವಾಸಿಗರಿಗೆ ಭಾರಿ ಅನಾನುಕೂಲ ಉಂಟಾಗುತ್ತಿರುತ್ತದೆ ಎಂದು ತಿಳಿಸಿದ್ದಾರೆ.ಬೀದರ್ ನಗರಕ್ಕೆ ಸ್ಥಗಿತಗೊಂಡಿರುವ ವಿಮಾನ ಸೇವೆಯನ್ನು ಪುನಾರಂಭ ಮಾಡುವ ಕುರಿತು ಈಗಾಗಲೇ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ನವದೆಹಲಿಯ ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗಿದ್ದು, ಖಾಸಗಿ ಸಂಸ್ಥೆಗಳು ವಿಮಾನಯಾನ ಸೇವೆ ಅಲಭ್ಯದಿಂದ ಉಂಟಾಗುವ ನಷ್ಟವನ್ನು ಸರ್ಕಾರದಿಂದ ಭರಿಸಲು ಕೋರಿರುತ್ತಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.ಗಡಿಭಾಗದ ಜಿಲ್ಲೆಯಾದ ಬೀದರ್‌ಗೆ “ವಿಮಾನಯಾನ ಸೇವೆ " ಒದಗಿಸುವುದು ಅತ್ಯವಶ್ಯವಾಗಿದ್ದು, ಸದರಿ ಸೇವೆ ಆರಂಭಿಸಲು ಹೆಚ್ಚುವರಿಯಾಗಿ ಬೇಕಾಗಿರುವ ಒಂದು ವರ್ಷದ ವಿಮಾನಯಾನಕ್ಕೆ ಬೇಕಾಗುವ 15ಕೋಟಿ ರು.ಗಳ ಅನುದಾನವನ್ನು ಬೀದರ್ ಜಿಲ್ಲೆಗೆ ಹಂಚಿಕೆಯಾದ ಮ್ಯಾಕ್ರೋ ಯೋಜನೆಯಡಿಯಲ್ಲಿ ಭರಿಸಲು ಉದ್ದೇಶಿಸಿರುವುದರಿಂದ "ವಿಮಾನಯಾನ ಸೇವೆ " ಪ್ರಾರಂಭದ ಪ್ರಸ್ತಾವನೆಯನ್ನು ಅನುಮೋದಿಸುವಂತೆ ಕೋರಿದ್ದಾರೆ.----ಫೈಲ್ 15ಬಿಡಿ5