ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಮದ್ದೂರು ಬಂದ್ ಯಶಸ್ವಿ

| Published : Aug 23 2025, 02:00 AM IST

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಮದ್ದೂರು ಬಂದ್ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಧರ್ಮ ನಿಂದನೆ, ಅಪಪ್ರಚಾರ ಖಂಡಿಸಿ ಭಕ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮದ್ದೂರು ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬಂದ್ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಪಟ್ಟಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಹಲವೆಡೆ ಎಲ್ಲಾ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ವರ್ತಕರು ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದರು. ವ್ಯಾಪಾರ ವಹಿವಾಟು ಬೆಳಗ್ಗೆಯಿಂದ ಸಂಜೆವರೆಗೂ ಸಂಪೂರ್ಣ ಸ್ಥಗಿತಗೊಂಡಿತ್ತು.

ಸರ್ಕಾರಿ ಕಚೇರಿಗಳು, ಬ್ಯಾಂಕ್, ಆಸ್ಪತ್ರೆ, ಶಾಲಾ ಕಾಲೇಜುಗಳು, ಚಿತ್ರ ಮಂದಿರಗಳು, ಮೆಡಿಕಲ್ ಶಾಪ್ ಹಾಗೂ ಅಗತ್ಯ ವಸ್ತುಗಳ ಮಾರಾಟ ಎಂದಿನಂತೆ ಕಾರ್ಯ ನಿರ್ವಹಿಸಿದವು. ಸಾರಿಗೆ ಮತ್ತು ಖಾಸಗಿ ಬಸ್ ಸಂಚಾರ ಮಾಮೂಲಿಯಾಗಿತ್ತು. ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು ನಡೆಯಿತು.

ಬಂದ್ ಹಿನ್ನೆಲೆಯಲ್ಲಿ ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶಿವಕುಮಾರ್, ಪಿಎಸ್ಐಗಳಾದ ಮಂಜುನಾಥ್, ಭೀಮಪ್ಪ ಬಾಣಸಿ, ಪ್ರಕಾಶ್, ಮೋಹನ್ ರೆಡ್ಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ಜರುಗದೆ ಬಂದ್ ಶಾಂತಿಯುತವಾಗಿತ್ತು.

ಅಪಪ್ರಚಾರದ ವಿರುದ್ಧ ಬೃಹತ್ ಪ್ರತಿಭಟನೆ, ಆಕ್ರೋಶ:

ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಧರ್ಮ ನಿಂದನೆ, ಅಪಪ್ರಚಾರ ಖಂಡಿಸಿ ಭಕ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಅರೆ ತಿಪ್ಪೂರು ಜೈನ ಮಠದ ಪೀಠಾಧ್ಯಕ್ಷ ಸಿದ್ಧಾಂತ ಕೀರ್ತಿ ಭಟ್ಟಾಚಾರ್ಯ ನೇತೃತ್ವದಲ್ಲಿ ಶ್ರೀ ಉಗ್ರನರಸಿಂಹ ಸ್ವಾಮಿ ದೇವಾಲಯದ ಆವರಣದಿಂದ ಮೆರವಣಿಗೆ ನಡೆಸಿದ ಪುಣ್ಯಕ್ಷೇತ್ರ ಸಂರಕ್ಷಣಾ ಮತ್ತು ಹಿಂದೂ ರಕ್ಷಣಾ ಸಮಿತಿ, ಹಿಂದೂ ಜಾಗರಣ, ಜನಜಾಗೃತಿ ವೇದಿಕೆ, ಆರ್ ಎಸ್ ಎಸ್, ಧರ್ಮಸ್ಥಳ ಸಮಿತಿ, ನಾಡಪ್ರಭು ಒಕ್ಕಲಿಗರ ಸಂಘ, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ದೇಗುಲದ ಆವರಣದಿಂದ ಭಗವಧ್ವಜಗಳನ್ನು ಹಿಡಿದು ಪ್ರಮುಖ ಬೀದಿಗಳ ಮುಖಾಂತರ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು.

ನಂತರ ಕಚೇರಿ ಎದುರಿನ ಬೆಂಗಳೂರು- ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಸಂಘಟನೆಗಳ ಕಾರ್ಯಕರ್ತರು ಮತ್ತು ಭಕ್ತರು, ಧರಣಿ ನಡೆಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ತೀವ್ರವಾಗಿ ಖಂಡಿಸಿದರು.

ಧರ್ಮದ ಉಳಿವಿಗೆ ನಾವೆಲ್ಲರೂ ಕೈಜೋಡಿಸುವ ಮೂಲಕ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ರಕ್ಷಣೆಗೆ ನಿಲ್ಲುತ್ತೇವೆ ಎಂದು ಸಾಮೂಹಿಕ ವಾಗ್ದಾನ ಮಾಡಿದರು.

ಈ ವೇಳೆ ಮಾತನಾಡಿದ ಜೈನ ಮಠದ ಪೀಠಾಧ್ಯಕ್ಷ ಸಿದ್ಧಾಂತ ಕೀರ್ತಿ ಭಟ್ಟಾಚಾರ್ಯ ಅವರು, ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಕ್ಷೇತ್ರಗಳಿಗೆ ಅಪಾರ ಗೌರವ ಸ್ಥಾನಮಾನಗಳಿವೆ. ಧರ್ಮಸ್ಥಳದಂತಹ ಶ್ರದ್ಧಾ ಕೇಂದ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಇಡೀ ಭಾರತೀಯ ಹಿಂದೂಗಳು ತಲೆತಗ್ಗಿಸುವ ವಿಚಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೂ ಜನಾಂಗದ ಯಾವುದೇ ವ್ಯಕ್ತಿ, ಧರ್ಮ ಕ್ಷೇತ್ರಗಳ ಬಗ್ಗೆ ಅಪಪ್ರಚಾರವಾದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶನದೊಂದಿಗೆ ಧರ್ಮ ರಕ್ಷಣೆಗೆ ಮುಂದಾಗಬೇಕು. ಹಿಂದೂ ಧರ್ಮದ ಕುರಿತು ಕೇವಲವಾಗಿ ಮಾತನಾಡುವುದು ಸಹಜವಾಗಿದೆ. ಸರ್ಕಾರ ಹಿಂದೂಗಳು ಮತ್ತು ಧರ್ಮದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರಾದ ಸಿ.ಕೆ.ಸತೀಶ್, ಕೆ.ಟಿ.ನವೀನ, ಎಂ.ಸಿ.ಸಿದ್ದು, ಪಿ.ಮಲ್ಲೇಶ್, ಕದಲೂರು ಯೋಗಾನಂದ, ನೈದಿಲೆ ಚಂದ್ರು, ವೀರಭದ್ರಸ್ವಾಮಿ, ಎಂ.ಸತೀಶ್, ತೀರ್ಥಾಚಾರ್, ಶ್ವೇತಾ ಅಶೋಕ್, ಎಂ.ಪಿ.ಲಿಂಗೇಗೌಡ, ಡಾ.ಬಿ.ಕೃಷ್ಣ, ವಿ.ಟಿ.ರವಿಕುಮಾರ್. ಪ್ರಿಯಾಂಕ ಅಪ್ಪುಗೌಡ ಸೇರಿ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

----------

ಮದ್ದೂರು ಬಂದ್ ಗೆ ವಕೀಲರ ಬೆಂಬಲ:

ಮದ್ದೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಮದ್ದೂರು ಬಂದ್ ಮತ್ತು ಪ್ರತಿಭಟನೆಗೆ ಬೆಂಬಲಿಸಿ ಪಟ್ಟಣದ ವಕೀಲರು ಶುಕ್ರವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು. ಹಿರಿಯ ವಕೀಲ ಟಿ.ನಾಗರಾಜು ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ವಕೀಲರು, ಧರ್ಮಸ್ಥಳದ ವಿರುದ್ಧದ ಅಪಪ್ರಚಾರವನ್ನು ತೀವ್ರವಾಗಿ ಖಂಡಿಸಿದರು. ಉದ್ದೇಶ ಪೂರ್ವಕವಾಗಿ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ವ್ಯಕ್ತಿಗಳನ್ನು ಕಾನೂನು ಚೌಕಟ್ಟಿನಲ್ಲಿ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ವಕೀಲರು ಸಾಮೂಹಿಕವಾಗಿ ಆಗ್ರಹಪಡಿಸಿದರು.

ನಂತರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಧರ್ಮಸ್ಥಳದ ಭಕ್ತರು ಹಿಂದೂಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ಸರ್ವಾನುಮತದ ತೀರ್ಮಾನ ಕೈಗೊಂಡರು.

ಪ್ರತಿಭಟನೆಯಲ್ಲಿ ಹಿರಿಯ ವಕೀಲ ಎಚ್.ಮಾದೇಗೌಡ, ಎಂ.ಎಂ.ಪ್ರಶಾಂತ್, ಎಂ.ಎನ್.ಚಂದ್ರಶೇಖರ್, ಉಮೇಶ್, ಎಂ.ಸಿ.ಮಹೇಶ್, ಶಿವಲಿಂಗಯ್ಯ, ಎಂ.ಮಹೇಶ ಮತ್ತಿತರರು ಪಾಲ್ಗೊಂಡಿದ್ದರು.