ಸಾರಾಂಶ
ಮಾದಿಗ ಮಹಾಸಭಾವು ಪಕ್ಷಾತೀತವಾಗಿ ಮಾದಿಗ ಸಮುದಾಯದ ಮುಖಂಡರನ್ನು ಬೆಂಬಲಿಸುತ್ತಿದೆ.
ಹೊಸಪೇಟೆ: ಲೋಕಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯದ ನಾಯಕರಾದ ಗೋವಿಂದ ಕಾರಜೋಳ ಚಿತ್ರದುರ್ಗ ಎಸ್.ಸಿ. ಮೀಸಲು ಕ್ಷೇತ್ರದಿಂದ ಮತ್ತು ರಮೇಶ್ ಜಿಗಜಿಣಗಿ ವಿಜಯಪುರ ಎಸ್.ಸಿ. ಮೀಸಲು ಕ್ಷೇತ್ರದಿಂದ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಾದಿಗ ಮಹಾಸಭಾದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾದಿಗ ಸಮಾಜದ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಮಾದಿಗ ಮಹಾಸಭಾವು ಪಕ್ಷಾತೀತವಾಗಿ ಮಾದಿಗ ಸಮುದಾಯದ ಮುಖಂಡರನ್ನು ಬೆಂಬಲಿಸುತ್ತಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಗೋವಿಂದ ಕಾರಜೋಳ ಮತ್ತು ವಿಜಯಪುರ ಲೋಕಸಭಾದಿಂದ ರಮೇಶ್ ಜಿಗಜಿಣಗಿ ಅವರನ್ನು ಗೆಲ್ಲಿಸಿರುವುದಕ್ಕೆ ಮತದಾರರನ್ನು ಅಭಿನಂದಿಸುವೆ ಎಂದರು.ಗೋವಿಂದ ಕಾರಜೋಳ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದರೆ ಮಾದಿಗ ಸಮುದಾಯಕ್ಕೆ ಬಲತಂದಂತಾಗುತ್ತದೆ. ಮಾದಿಗ ಸಮುದಾಯವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವುದರಿಂದ ನಮ್ಮ ಸಮುದಾಯದವರನ್ನು ಕೇಂದ್ರ ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಮಾದಿಗ ಸಮುದಾಯದ ಮುಖಂಡರಾದ ಶೇಶು, ಎ.ಬಸವರಾಜ್, ರಾಜು, ಮಹಾಂತೇಶ್, ಶ್ರೀನಿವಾಸ್, ಸಿ.ಆರ್.ಭರತ್‌ಕುಮಾರ್, ಕರಿಯಪ್ಪ, ಹನುಮಂತಪ್ಪ, ಮರಿದಾಸ್, ಪಂಪಾಪತಿ, ಮಾರೇಶ, ಮಲ್ಲಪ್ಪ, ಜೆ.ಬಿ.ರಾಘವೇಂದ್ರ, ಓಬಳೇಶ, ರವಿ, ರಾಜೇಶ, ಯರಿಸ್ವಾಮಿ, ಈರಣ್ಣ ಮತ್ತಿತರರಿದ್ದರು.