ಮಡಿಕೇರಿ ದಸರಾ ಸಮಿತಿ ಸಭೆ : ಖರ್ಚುವೆಚ್ಚ ಬಗ್ಗೆ ಪೂರಕ ಮಾಹಿತಿ ನೀಡಲು ಎಡವಿದ ಹಿನ್ನೆಲೆ ಗೊಂದಲ

| Published : Aug 24 2024, 01:31 AM IST / Updated: Aug 24 2024, 11:51 AM IST

ಮಡಿಕೇರಿ ದಸರಾ ಸಮಿತಿ ಸಭೆ : ಖರ್ಚುವೆಚ್ಚ ಬಗ್ಗೆ ಪೂರಕ ಮಾಹಿತಿ ನೀಡಲು ಎಡವಿದ ಹಿನ್ನೆಲೆ ಗೊಂದಲ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ಸಂಜೆ ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಲೆಕ್ಕಪತ್ರ ಮಂಡನೆ ಸಭೆ ತೀವ್ರ ಚರ್ಚೆಗೆ ಕಾರಣವಾಯಿತು. 

  ಮಡಿಕೇರಿ :  ಕಳೆದ ಬಾರಿ ನಡೆದ ಮಡಿಕೇರಿ ದಸರಾ ಜನೋತ್ಸವದ ಲೆಕ್ಕಪತ್ರ ಮಂಡನೆ ಸಭೆ ಗೊಂದಲಮಯವಾಗಿತ್ತು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ಸಂಜೆ ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಲೆಕ್ಕಪತ್ರ ಮಂಡನೆ ಸಭೆ ತೀವ್ರ ಚರ್ಚೆಗೆ ಕಾರಣವಾಯಿತು. ದಸರಾ ಉತ್ಸವದಲ್ಲಿ ಆಗಿರುವ ಖರ್ಚುವೆಚ್ಚ ಬಗ್ಗೆ ಪೂರಕ ಮಾಹಿತಿ ನೀಡಲು ದಸರಾ ಸಮಿತಿ ಎಡವಿದ ಹಿನ್ನೆಲೆಯಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು.

ದಸರಾ ಸಮಿತಿ ಖಜಾಂಚಿ ಅರುಣ್ ಶೆಟ್ಟಿ ದಸರಾ ಉತ್ಸವದ ಲೆಕ್ಕಪತ್ರ ಮಂಡಿಸಿದರು. ಸರ್ಕಾರದಿಂದ ಬಂದ ಅನುದಾನ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ದಸರಾ ಉಪ ಸಮಿತಿಯ ಅನೇಕ ಕಾರ್ಯಕರ್ತರು ಈ ಲೆಕ್ಕ ಸರಿಯಿಲ್ಲ. ಮಂಟಪಗಳಿಗೆ ಮಾತ್ರ ಜಿಎಸ್‌ಟಿ ಕೇಳುತ್ತೀರಿ, ಆದರೆ ನೀವು ಖಾಸಗಿಯಾಗಿ ಹಣ ಸಂಗ್ರಹಿಸಿದ ಮಾಹಿತಿ ಸಮರ್ಪಕವಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಯುವ ದಸರಾ ಸಂಚಾಲಕ ಕವನ್ ಮಾತನಾಡಿ, ನಮಗೆ ಯುವ ದಸರಾ ಆಯೋಜನೆಯ ಹಣವನ್ನೇ ನೀಡದೆ ವಂಚಿಸಲಾಗಿದೆ ಎಂದು ತಮ್ಮ ಸಿಟ್ಟು ಹೊರ ಹಾಕಿದರು. ಇದಕ್ಕೆ ಉತ್ತರಿಸಿದ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಯುವ ದಸರಾವನ್ನು ಇಬ್ಬರ ನಿರ್ವಹಣೆಗೆ ವಹಿಸಿದ್ದೆವು. ಹೀಗಾಗಿ ಮೊದಲೇ ಆದ ಒಪ್ಪಂದದಂತೆ ದಸರಾ ಸಮಿತಿಯಿಂದ ಯಾವುದೇ ಅನುದಾನ ನೀಡಬೇಕಾಗಿಲ್ಲ. ನೀವು ಖಾಸಗಿಯಾಗಿ ಸಂಗ್ರಹಿಸಿದ ಹಣದ ಲೆಕ್ಕಚಾರವನ್ನೇ ಕೊಟ್ಟಿಲ್ಲ ಎಂದು ಹೇಳಿದರು.

ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಪ್ರತಿಕ್ರಿಯಿಸಿ, ನೀವು ಎಷ್ಟು ಹಣ ಸಂಗ್ರಹಿಸಿದ್ದೀರಾ, ಇದುವರೆಗೆ ಕೂಡ ದಸರಾ ಸಮಿತಿಗೆ ಮಾಹಿತಿ ನೀಡದೆ ಈಗ ನಮ್ಮ ಮೇಲೆ ದೂರು ಹಾಕುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಈ ನಡುವೆ ದಸರಾ ಸಮಿತಿ ಪದಾಧಿಕಾರಿ ಸವಿತಾ ಮಾತನಾಡಿ, ಲೆಕ್ಕ ಪರಿಶೋಧಕರ ಸಹಿ ಇಲ್ಲದ ಹಾಗೂ ಲೆಕ್ಕ ಪರಿಶೋಧನೆಗೆ ಒಳಪಡದ ಈ ಮಂಡನೆ ನಿಯಮ ಪ್ರಕಾರ ಒಪ್ಪಲು ಸಾಧ್ಯವಿಲ್ಲ. ಬೆಂಗಳೂರಿಗೆ ದಸರಾ ಸಮಿತಿಯವರು ಹೋಗಿ ಬರಲು ರು.80 ಸಾವಿರ ಎಂದು ನಮೂದಿಸಲಾಗಿದೆ. ಮೂರು ಬಾರಿ ಕಾರಿನಲ್ಲಿ ಹೋಗಿ ಬರಲು ರು.80 ಸಾವಿರ ಅಗತ್ಯವಿದೆಯೇ. ಊಟದ ವೆಚ್ಚ ರು.1 ಲಕ್ಷ ಎಂದು ತೋರಿಸಲಾಗಿದ್ದು, ಇದು ಎಂತಹ ಊಟ ಎಂದು ಪ್ರಶ್ನಿಸಿದರು.

ಇದಕ್ಕೆ ಹಲವರು ಧ್ವನಿಗೂಡಿಸಿ, ಮದುವೆಯಲ್ಲಿ ಊಟ ಮಾಡಿದರೂ ಕೂಡ ಇಷ್ಟು ವೆಚ್ಚ ಆಗುವುದಿಲ್ಲ. ಮೂರು ದಿನದ ಊಟಕ್ಕೆ ಒಂದು ಲಕ್ಷ ವೆಚ್ಚ ರುಪಾಯಿ ವೆಚ್ಚ ಮಾಡಿದ್ದೀರಲ್ಲಾ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಖಜಾಂಚಿ ಅರುಣ್ ಶೆಟ್ಟಿ, ದಸರಾ ಸಮಿತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಎಷ್ಟು ಜನ ಊಟ ಮಾಡಿದ್ದಾರೆಂದು ಲೆಕ್ಕವಿಟ್ಟುಕೊಳ್ಳಲು ಆಗುವುದಿಲ್ಲ. ಆದರೆ ಮೂರು ದಿನದ ವೆಚ್ಚ ಇಷ್ಟು ಆಗಿದೆ ಎಂದು ಹೇಳಿದರು.

ಎಲ್ಲವನ್ನೂ ಸಂಶಯ ದೃಷ್ಟಿಯಿಂದ ನೋಡುವುದು ಸರಿಯಲ್ಲ. ದಸರಾ ಸಮಿತಿಯಲ್ಲಿ ಕೈಯಿಂದ ಹಣ ಖರ್ಚು ಮಾಡಿ ಕೆಲಸ ಮಾಡಿದ ಅವರ ಪಾಡು ಅವರಿಗೆ ಮಾತ್ರ ಗೊತ್ತಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಲೆಕ್ಕಪತ್ರ ಅನುಮೋದಿಸಲು ಸಾಧ್ಯವೇ ಇಲ್ಲ ಎಂದು ಸಭೆಯಲ್ಲಿ ಅನೇಕರು ಗದ್ದಲ ಎಬ್ಬಿಸಿದರು. ಈ ಸಂದರ್ಭ ಸಭೆ ಗೊಂದಲಮಯವಾಯಿತು. ಈ ವೇಳೆ ಅನಿತಾ ಪೂವಯ್ಯ ಮೌನಕ್ಕೆ ಜಾರಿದಾಗ ಇದನ್ನು ಅನೇಕರು ಖಂಡಿಸಿದರು.

ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಮಾತನಾಡಿ, ಲೆಕ್ಕ ಸಮರ್ಪಕವಾಗಿದೆ. ನಾವು ದುರುಪಯೋಗ ಮಾಡಿಲ್ಲ. ಆದರೆ ಮಾಹಿತಿ ನೀಡುವಾಗ ಲೋಪವಾಗಿರಬಹುದು ಎಂದಾಗ ಅನೇಕರು ನೀವು ದುರುಪಯೋಗ ಮಾಡಿದ್ದೀರಿ ಎಂದು ನಾವು ಹೇಳುತ್ತಿಲ್ಲ. ಆದರೆ ಸರಿಯಾದ ಮಾಹಿತಿ ನೀಡಿಲ್ಲ ಎಂಬುದೇ ನಮ್ಮ ಪ್ರಶ್ನೆ ಎಂದರು.

ಅಂತಿಮವಾಗಿ ಗೌರವಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಸರಿಯಾದ ಬೈಲಾ ರಚನೆಯಾಗದಿರುವುದೇ ಇಂತಹ ಗೊಂದಲಕ್ಕೆ ಕಾರಣವಾಗಿದೆ. ಪ್ರಶ್ನಿಸುವುದು ತಪ್ಪಲ್ಲ. ಆದರೆ ಸಮಿತಿಯಲ್ಲಿ ಇಲ್ಲದವರೂ ಕೂಡ ಬಂದು ಗದ್ದಲ ಎಬ್ಬಿಸುವುದು ಸರಿಯಲ್ಲ. ಇದಕ್ಕೆಲ್ಲ ಪರಿಹಾರ ಎಂಬಂತೆ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೈಲಾವನ್ನು ಸದ್ಯದಲ್ಲೇ ನೂತನವಾಗಿ ರಚಿಸುತ್ತೇವೆ ಎಂದರು.

ಸೂಕ್ತ ಬೈಲಾ ರಚನೆ ಬಳಿಕ ದಸರಾ ಸಭೆಗಳು ನಿಯಮ ಪ್ರಕಾರ ನಡೆಯುತ್ತದೆ. ಆಗ ಲೆಕ್ಕಪತ್ರ ಮಂಡನೆಯಾಗುತ್ತದೆ. ಮುಂದಿನ ದಿನಗಳಲ್ಲಿ ಲೆಕ್ಕಪರಿಶೋಧಕರಿಂದ ಸೂಕ್ತ ರೀತಿಯಲ್ಲಿ ಲೆಕ್ಕಪತ್ರ ಮಂಡಿಸಲಾಗುವುದು ಎಂದಾಗ ಈ ಸಲಹೆಗೆ ಎಲ್ಲರೂ ಒಪ್ಪಿಗೆ ನೀಡಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ ನಾವು ಪಾರದರ್ಶಕವಾಗಿ ಲೆಕ್ಕಪತ್ರ ನೀಡಿದ್ದೇವೆ. ಆದರೆ ಪೂರ್ಣ ಮಾಹಿತಿ ನೀಡದಿರುವ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಆದ್ದರಿಂದ ಮುಂದಿನ ಕೆಲವೇ ದಿನಗಳಲ್ಲಿ ದೃಢೀಕರಿಸಿದ ಲೆಕ್ಕಪತ್ರ ಮಂಡಿಸಿ ಸಭೆ ನಡೆಸಲಾಗುವುದು ಎಂದು ಹೇಳಿದರು.

ನಗರಸಭೆಯ ಪೌರಾಯುಕ್ತ ವಿಜಯ್, ಪ್ರಮುಖರಾದ ಸತೀಶ್ ಪೈ, ಜಿ. ಚಿದ್ವಿಲಾಸ್, ಮಹೇಶ್ ಜೈನಿ, ಸಬಿತಾ, ಸವಿತಾ ರಾಕೇಶ್, ಶ್ವೇತ ಪ್ರಶಾಂತ್, ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ವಿವಿಧ ದಸರಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ರಾಮ ಮಂದಿರದಲ್ಲಿ ಪೂಜೆ ಸಲ್ಲಿಕೆ:

ಮಡಿಕೇರಿ ದಸರಾ ಜನೋತ್ಸವ 2024ರ ಹಿನ್ನೆಲೆಯಲ್ಲಿ ದಸರಾ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಪದ್ಧತಿಯಂತೆ ಶುಕ್ರವಾರ ನಗರದ ಪೇಟೆ ಶ್ರೀ ರಾಮಮಂದಿರದಲ್ಲಿ ದಸರಾ ಸಮಿತಿಯ ಪ್ರಮುಖರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.