ಸಾರಾಂಶ
ಚನ್ನಪಟ್ಟಣದಲ್ಲಿ ರಾಜ್ಯ ಸರ್ಕಾರ ಬೃಹತ್ ಉದ್ಯೋಗ ಮೇಳ ಆಯೋಜಿಸುವುದಾಗಿ ಘೋಷಿಸಿದೆ. ಆಗಸ್ಟ್ 30ರಂದು ಮೇಳೆ ನಡೆಸುವುದಾಗಿ ಸಚಿವ ಡಾ। ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದಲ್ಲಿ ಸಾಲು ಸಾಲು ಸಭೆ, ಸಮಾವೇಶಗಳನ್ನು ಮಾಡಿದ ಬೆನ್ನಲ್ಲೇ ಇದೀಗ, ಚನ್ನಪಟ್ಟಣದಲ್ಲಿ ರಾಜ್ಯ ಸರ್ಕಾರ ಬೃಹತ್ ಉದ್ಯೋಗ ಮೇಳ ಆಯೋಜಿಸುವುದಾಗಿ ಘೋಷಿಸಿದೆ. ಆಗಸ್ಟ್ 30ರಂದು ಮೇಳೆ ನಡೆಸುವುದಾಗಿ ಸಚಿವ ಡಾ। ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮೇಳದ ವಿವರ ಹಂಚಿಕೊಂಡ ಸಚಿವರು, ‘ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳ ಯಶಸ್ವಿಯಾದ ಹಿನ್ನೆಲೆಯಲ್ಲಿ ಎಲ್ಲ ಕಡೆಯೂ ಮೇಳ ಆಯೋಜಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು. ಅದರಂತೆ ಆ. 30ರಂದು ಚನ್ನಪಟ್ಟಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ನಿರುದ್ಯೋಗ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು’ ಎಂದರು.
ಹಾಗೆಯೇ, ಬೆಂಗಳೂರಿನ ಶಿವಾಜಿನಗರದ 100 ಹಾಸಿಗೆಗಳ ಸಾಮರ್ಥ್ಯದ ಅತ್ಯಾಧುನಿಕ ಚರಕ ಆಸ್ಪತ್ರೆಯು ಸೆ. 1ರಂದು ಉದ್ಘಾಟನೆಯಾಗಲಿದೆ. ರೋಗಿಗಳಿಗೆ ಅಗತ್ಯ ಸೇವೆ ನೀಡಲು ಆಸ್ಪತ್ರೆ ಸಜ್ಜಾಗಿದೆ ಎಂದರು.