ಸಾರಾಂಶ
ಶಿರಸಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಜಿಲ್ಲಾ ರೈತ ಸಂಘದ ಶಿರಸಿ ಘಟಕದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಈ ವರ್ಷ ಅತಿಯಾದ ಮಳೆ ಸುರಿದ ಕಾರಣದಿಂದ ರೈತರು ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಅತಿಯಾದ ಮಳೆಯಿಂದ ಹಳ್ಳ- ಕೊಳ್ಳಗಳು ಒಡೆದು ಕೃಷಿ ಜಮೀನಿನ ಮೇಲೆ ಕಲ್ಲು, ಮಣ್ಣು ಕಸದ ರಾಶಿ ತಂದು ಹಾಕಿ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗದೆ ಹಾನಿ ಉಂಟಾಗಿದೆ.ಬಿತ್ತನೆ ಮಾಡಿದ ಶುಂಠಿ, ಜೋಳ ಬೆಳೆಗಳು ಅತಿಯಾದ ಮಳೆಯಿಂದ ಕೊಳೆರೋಗ ಉಂಟಾಗಿ ಬಹುಪಾಲು ಬೆಳೆನಷ್ಟವಾಗಿದೆ. ರೈತರ ಬೆಳೆಗಳಿಗೆ ಕಾಡುಪ್ರಾಣಿಗಳ ದಾಳಿಯಿಂದ ಹಾನಿಯುಂಟಾಗಿ ಅನೇಕ ರೀತಿಯ ಸಮಸ್ಯೆ ಉಂಟಾಗುತ್ತಿದೆ. ಬಾಳೆ, ಜೋಳ, ಭತ್ತ ಬೆಳೆಗಳಿಗೆ ಕಾಡುಹಂದಿ, ಕಾಡುಕೋಣ, ಮಂಗನ ಕಾಟ ಹಾಗೆ ಅಡಕೆ, ಬಾಳೆಕಾಯಿಗಳಿಗೆ ಮಂಗನ ಕಾಟದಿಂದ ಜಿಲ್ಲೆಯ ರೈತರು ಸಾಕಷ್ಟು ಹಾನಿ ಅನುಭವಿಸುತ್ತಿದ್ದಾರೆ.
ಕೃಷಿ ಜಮೀನನ್ನು ಕೃಷಿಕರಲ್ಲದವರು ಖರೀದಿಸಲು ನೀಡಿರುವ ಅವಕಾಶವನ್ನು ತೆಗೆದುಹಾಕಿ, ಕೃಷಿ ಜಮೀನನ್ನು ಉಳಿಸಬೇಕು. ವಿದ್ಯುತ್ ಖಾಸಗೀಕರಣವನ್ನು ಮಾಡುವ ಒಳಸಂಚು ಸರ್ಕಾರಗಳು ರೂಪಿಸುತ್ತಿದ್ದು, ಅದನ್ನು ತಕ್ಷಣ ಕೈಬಿಡಬೇಕು. ಈ ಹಿಂದೆ ನೀರಾವರಿ ಸೌಲಭ್ಯಕ್ಕೆ ರೈತರಿಗೆ ವಿದ್ಯುತ್ ಸಂಪರ್ಕವನ್ನು ಇಪ್ಪತ್ತು ಸಾವಿರಗಳಿಗೆ ನೀಡುತ್ತಿದ್ದುದ್ದನ್ನು ಈಗ ಲಕ್ಷಾಂತರ ರುಪಾಯಿಗೆ ಏರಿಸಿರುವ ರೈತ ವಿರೋಧಿ ಧೋರಣೆ ಕೈಬಿಡಬೇಕು.ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡುವುದನ್ನು ಕೈಬಿಟ್ಟು ರೈತರಿಗೆ ಈಗಿರುವಂತೆ ಉಚಿತ ವಿದ್ಯುತ್ತನ್ನು ಮುಂದುವರಿಸಬೇಕು. ಕಳೆದ ವರ್ಷ ಅಡಕೆಗೆ ತುಂಬಿದ ವಿಮಾ ಹಣವನ್ನು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀಡುವ ಮೂಲಕ ಕೃಷಿಯಿಂದ ಕಷ್ಟದಲ್ಲಿ ಜೀವನ ನಡೆಸುತ್ತಿರುವ ರೈತರಿಗೆ ಸರ್ಕಾರ ನೇರವಾಗಿ ಪರಿಹಾರ ನೀಡುವ ಮೂಲಕ ರೈತರ ರಕ್ಷಣೆ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದರು.ಮನವಿ ಸಲ್ಲಿಸುವ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ರಾಜೇಂದ್ರ ನಾಯ್ಕ ಕಾಯಿಗುಡ್ಡೆ, ಕಾರ್ಯದರ್ಶಿ ಮಹೇಶ ಕೆ.ಎಂ. ಕಂಡ್ರಾಜಿ, ಜಿಲ್ಲಾ ಸಮಿತಿ ಸದಸ್ಯರಾದ ಎಸ್.ಎಫ್. ನಾಯ್ಕ ಕಾಯಿಗುಡ್ಡೆ, ಧೀರೇಂದ್ರ ಗೌಡ, ರಮೇಶ ಗೌಡ, ಪಿ.ಟಿ. ನಾಯ್ಕ ಕಂಡ್ರಾಜಿ, ಮಾದೇವ ನಾಯ್ಕ, ದಿನಕರ ಗೌಡ, ಶಶಿ ನಾಯ್ಕ ಅಂಡಗಿ, ಎನ್.ಟಿ. ನಾಯ್ಕ ಮತ್ತಿತರರು ಇದ್ದರು.x