ಒತ್ತುವರಿ ತೆರವು ವಿರೋಧಿಸಿ ಬೃಹತ್ ಹೋರಾಟ

| Published : Aug 24 2024, 01:30 AM IST

ಸಾರಾಂಶ

ಶೃಂಗೇರಿ, ರೈತರ ಒತ್ತುವರಿ ತೆರವು, ಅರಣ್ಯ ಇಲಾಖೆಯ ದೌರ್ಜನ್ಯ ವಿರೋಧಿಸಿ ಶೃಂಗೇರಿಯಲ್ಲಿ ಆಗಸ್ಟ್ 26 ರಂದು ಬಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಹೇಳಿದರು.

- ಆಗಸ್ಟ್ 26 ರಂದು ಶೃಂಗೇರಿ ಬಿಜೆಪಿಯಿಂದ ಪ್ರತಿಭಟನೆ । ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾಹಿತಿ

ಕನ್ನಡಪ್ರಭ ವಾರ್ತೆ ಶೃಂಗೇರಿ

ರೈತರ ಒತ್ತುವರಿ ತೆರವು, ಅರಣ್ಯ ಇಲಾಖೆಯ ದೌರ್ಜನ್ಯ ವಿರೋಧಿಸಿ ಶೃಂಗೇರಿಯಲ್ಲಿ ಆಗಸ್ಟ್ 26 ರಂದು ಬಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಒತ್ತುವರಿ ತೆರವು ವಿರೋಧಿಸಿ ಇತ್ತಿಚಿಗೆ ಕೊಪ್ಪದಲ್ಲಿ ಪಕ್ಷಾತೀತವಾಗಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶೃಂಗೇರಿ ಕ್ಷೇತ್ರ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗಿತ್ತು. ಆದರೂ ಕೂಡ ಅರಣ್ಯ ಸಚಿವರ ಸೂಚನೆಯಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಒತ್ತುವರಿ ತೆರವಿಗೆ ಆದೇಶ ನೀಡಿದ್ದಾರೆ.

ಜೀವನೋಪಾಯಕ್ಕಾಗಿ ಹಿಂದಿನಿಂದಲೂ ರೈತರು ಅಲ್ಪಸ್ವಲ್ಪ ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹ ರೈತರ ಒತ್ತುವರಿ ತೆರವುಗೊಳಿಸಿ ಅವರನ್ನು ಸರ್ಕಾರ ಬೀದಿ ಪಾಲು ಮಾಡಲು ಹೊರಟಿದೆ . ಹೊಸ ಆದೇಶದಂತೆ ರೈತರಿಗೆ ಮತ್ತೆ ಆತಂಕವಾಗಿದೆ. ಇದರಲ್ಲಿ ಕ್ಷೇತ್ರದ ವಿಫಲತೆ ಎದ್ದು ಕಾಣುತ್ತಿದೆ. ಸರ್ಕಾರ, ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಅರಣ್ಯ ಸಚಿವರಿಗೆ ಮಲೆನಾಡಿನ ವಾಸ್ತವಿಕತೆ ಬಗ್ಗೆ ಅರಿವಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿ ಮಾಡಿಲ್ಲ. ಆಕ್ಷೇಪಣೆ ಸಲ್ಲಿಸಲು ರಾಜ್ಯಗಳಿಗೆ 90 ದಿನಗಳ ಗಡುವು ನೀಡಿದೆ. ಅವಧಿ ಮುಗಿಯುತ್ತಾ ಬಂದರೂ ಕಡತವನ್ನು ಮೂಲೆಗೆಸೆದು, ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದೆಂದು ಸರ್ಕಾರ ನಿರ್ಧರಿಸಿದಂತಿದೆ.ಗ್ರಾಮಗಳ ಸ್ಥಿತಿಗತಿ, ಗ್ರಾಮಸಭೆಯ ಮೂಲಕ ನಿರ್ಧಾರವಾಗುತ್ತದೆ. ಈ ವರದಿ ಆಧರಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲು ಮುಂದಾಗಬೇಕು.

ಆ.26 ಸೋಮವಾರದಂದು ಬೆಳಿಗ್ಗೆ 10 ಗಂಟೆಗೆ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಸಂತೇ ಮಾರುಕಟ್ಟೆ ಬಳಿ ಸಮಾವೇಶಗೊಂಡು ಪ್ರತಿಭಟೆನೆ ನಡೆಸಲಾಗುವುದು ಎಂದು ತಿಳಿಸಿದರು. ಪಕ್ಷದ ಮುಖಂಡರಾದ ತಲಗಾರು ಉಮೇಶ್, ಕೆ.ಎಂ. ಶ್ರೀನಿವಾಸ್, ಡಿ.ಸಿ.ಶಂಕರಪ್ಪ, ಶಿವಶಂಕರ್, ಅಂಗುರುಡಿ ದಿನೇಶ್ ಮತ್ತಿತರರು ಇದ್ದರು.

----

23 ಶ್ರೀ ಚಿತ್ರ 4- ಡಿ.ಎನ್.ಜೀವರಾಜ್