ಸಾರಾಂಶ
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈರುಳ್ಳಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದ್ದು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈರುಳ್ಳಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದ್ದು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಡಿ.ಎಸ್.ಹಳ್ಳಿ, ಜೋಡಿಚಿಕ್ಕೇನಹಳ್ಳಿ, ತೋಪುರಮಾಳಿಗೆ, ದ್ಯಾಮವ್ವನಹಳ್ಳಿ, ಕಾಸವರಹಟ್ಟಿ, ದಂಡಿನಕುರುಬರಹಟ್ಟಿ, ನರೇನಾಳ್, ಜೆ.ಎನ್.ಕೋಟೆ, ಎಣ್ಣೆಗೆರೆ ಇನ್ನು ಮುಂತಾದ ಗ್ರಾಮಗಳಲ್ಲಿ ಬೆಳೆ ಹಾನಿಯಾಗಿರುವ ಈರುಳ್ಳಿ ಪ್ರದರ್ಶಿಸಿದ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷದ ಬರಗಾಲವನ್ನೆ ರೈತರು ಇನ್ನು ಸುಧಾರಿಸಿಕೊಳ್ಳಲು ಆಗದೆ ಸಾಲಗಾರರಾಗಿದ್ದಾರೆ. ಆರಂಭದಲ್ಲಿ ಉತ್ತಮ ಮಳೆಯಾಯಿತಾದರೂ ಕಳೆದ ಇಪ್ಪತ್ತು ದಿನಗಳಿಂದ ಸುರಿದ ಮಳೆಗೆ ಈರುಳ್ಳಿ ಹಾಗೂ ಇನ್ನಿತರೆ ತೋಟಗಾರಿಕೆ ಬೆಳೆಗಳು ಕೊಳೆತು ನಾಶವಾಗಿವೆ. ಕೃಷಿಗಾಗಿ ಸಾಲ ಮಾಡಿರುವ ರೈತ ಒಕ್ಕಲುತನಕ್ಕೆ ಹಾಕಿದ ಬಂಡವಾಳವೂ ಕೈಗೆ ಸಿಗದೆ ಕಂಗಾಲಾಗಿದ್ದಾನೆ. ತಕ್ಷಣವೆ ಬೆಳೆ ಸಮೀಕ್ಷೆ ನಡೆಸಿ ಹಾನಿಗೊಳಗಾಗಿರುವ ರೈತರಿಗೆ ಬೆಳೆ ಪರಿಹಾರ ಕೊಡಬೇಕು. ಬೆಳೆವಿಮೆಗೊಳಪಟ್ಟವರಿಗೆ ತಡ ಮಾಡದೆ ಬೆಳೆ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.
ತಾಲೂಕಿನಲ್ಲಿ ಹೆಚ್ಚಾಗಿ ಖುಷ್ಕಿ ಜಮೀನುಗಳಲ್ಲಿ ಸೂರ್ಯಕಾಂತಿ ಬೆಳೆದಿದ್ದು, ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಗೆ ಖರೀದಿಸಿ ಜಿಲ್ಲಾಡಳಿತ ರೈತರ ನೆರವಿಗೆ ಮುಂದಾಗಬೇಕೆಂದು ಆಗ್ರಹಿಸಿದರು. ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಮುಖಂಡ ಕೆ.ಟಿ.ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಬಿ.ಇ.ಮಂಜುನಾಥ, ರಾಮರೆಡ್ಡಿ, ಮಹಂತೇಶ್‍ರೆಡ್ಡಿ, ರಾಜಶೇಖರ್, ರಾಮರೆಡ್ಡಿ, ಪರಶಿವಣ್ಣ, ಪ್ರವೀಣ, ಮಾರುತಿ, ಸದಾಶಿವ, ನಾಗರಾಜ್‍ರೆಡ್ಡಿ, ಸುರೇಶ್‍ರೆಡ್ಡಿ, ಕೃಷ್ಣಪ್ಪ, ಲೋಕೇಶ, ಶಶಿಧರ, ಕೇಶವರೆಡ್ಡಿ, ಹರಳಯ್ಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.