ಸಾರಾಂಶ
ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ರು.2 ಕೋಟಿ ಅನುದಾನವನ್ನು ಸರ್ಕಾರದಿಂದ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ರು.2 ಕೋಟಿ ಅನುದಾನವನ್ನು ಸರ್ಕಾರದಿಂದ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಜಗದೀಶ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮಡಿಕೇರಿ ದಸರಾ ದಶಮಂಟಪ ಸಮಿತಿ ಸಭೆಯಲ್ಲಿ ಮಂಟಪಗಳಿಗೆ ಹಾಗೂ ಕರಗಗಳಿಗೂ ಹೆಚ್ಚಿನ ಅನುದಾನ ನೀಡಬೇಕು. ಈ ಹಿನ್ನೆಲೆಯಲ್ಲಿ ದಸರಾ ಸಮಿತಿಯಿಂದ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡುವಂತೆ ಮನವಿ ಮಾಡಲಾಯಿತು.
ದಸರಾದ ಕೊನೆಯ ದಿನ ನಡೆಯುವ ಶೋಭಾಯಾತ್ರೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಹೊಸ ನಿಯಮ ಹೇರುವುದು ಸರಿಯಲ್ಲ. ಕೊನೆಯ ಕ್ಷಣದಲ್ಲಿ ಪೊಲೀಸ್ ಇಲಾಖೆಯಿಂದ ನಮಗೆ ನಿರ್ಬಂಧ ಹಾಕಿದರೆ ನಾವು ದಸರಾ ಸಮಿತಿಯೊಂದಿಗೆ ಈ ಬಾರಿ ಕೈಜೋಡಿಸುವುದಿಲ್ಲ ಎಂದು ಸಭೆಯಲ್ಲಿ ಪ್ರಮುಖರು ಹೇಳಿದರು.
ಮಡಿಕೇರಿ ನಗರದಲ್ಲಿ ಸಾಕಷ್ಟು ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದೆ. ದಸರಾ ದಿನ ಸಮೀಪೀಸಿದಂತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತದೆ. ದಸರಾಗೆ ಬರುವ ಅನುದಾನವನ್ನು ರಸ್ತೆಗೆ ಬಳುಸುವುದು ಬೇಡ. ಇದಕ್ಕೆ ನಗರಸಭೆಯಲ್ಲಿ ಪ್ರತ್ಯೇಕ ಅನುದಾನವಿದ್ದು, ಆದಷ್ಟು ಬೇಗ ಅದನ್ನು ಬಳಸಿ ರಸ್ತೆ ರಿಪೇರಿ ಕೆಲಸ ಮಾಡಬೇಕೆಂದು ಪ್ರಮುಖರು ಒತ್ತಾಯಿಸಿದರು.
ಗುಂಡಿ ಬಿದ್ದಿರುವ ರಸ್ತೆಗಳಿಂದ ಮಂಟಪಗಳು ಸಂಚರಿಸುವಾಗ ಸಮಸ್ಯೆಯಾಗುತ್ತದೆ. ಗಾಂಧಿ ಮೈದಾನದ ರಸ್ತೆಯಲ್ಲಿ ಶೋಭಾಯಾತ್ರೆಯ ದಿನದಂದು ಅಂಗಡಿ ಮಳಿಗೆಗಳಿಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು.
ಶೋಭಾಯಾತ್ರೆಯ ಸಂದರ್ಭ ಡಿ.ಜೆ ಬಳಕೆಗೆ ನಿರ್ಬಂಧ ಹೇರುವುದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತಗೊಂಡಿತು. ಗಾಂಧಿ ಮೈದಾನದಲ್ಲಿ ರಾತ್ರಿ ಕಾರ್ಯಕ್ರಮ ಮಾಡುವಾಗ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಮಂಟಪದಲ್ಲಿ ಡಿಜೆ ಬಳಸಿದರೆ ಸಮಸ್ಯೆಯಾಗುತ್ತದೆ ಎಂದು ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ದಶ ಮಂಟಪ ಸಮಿತಿ ಮಾಜಿ ಅಧ್ಯಕ್ಷ ರಂಜಿತ್ ಮಾತನಾಡಿ ನಗರಸಭೆಗೆ ಅಧ್ಯಕ್ಷರ ಸ್ಥಾನ ತೆರವಾಗಿರುವುದರಿಂದ ಈ ಬಾರಿ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಇರುವ ಸಾಧ್ಯತೆಯಿದೆ. ಆದ್ದರಿಂದ ಮಡಿಕೇರಿ ದಸರಾ ಬಗ್ಗೆ ಅವರಿಗೆ ಮನವರಿಕೆ ಮಾಡಿ ಪದ್ಧತಿಯಂತೆ ದಸರಾ ನಡೆಸುವಂತಾಗಬೇಕೆಂದು ಹೇಳಿದರು.
ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ದಸರಾ ಸಮಿತಿ ಅಧ್ಯಕ್ಷ ರವಿ ಮಾತನಾಡಿ, ಈ ಬಾರಿ ರಾಜಾಸೀಟು ರಸ್ತೆಯ ಎರಡು ಬದಿಯಲ್ಲೂ ಕೂಡ ಅಂಗಡಿ ಮಳಿಗೆ ತೆರವುಗೊಳಿಸಬೇಕು. ಕಳೆದ ಬಾರಿ ಅಂಗಡಿ ಮಳಿಗೆ ಇದ್ದ ಹಿನ್ನೆಲೆ ನಮ್ಮ ಮಂಟಪಕ್ಕೆ ಸಮಸ್ಯೆಯಾಗಿದೆ. ಈ ಬಾರಿ ರು.5 ಲಕ್ಷ ಮಂಟಪಕ್ಕೆ ಹಾಗೂ ರು.3 ಲಕ್ಷ ಕರಗಕ್ಕೆ ನೀಡುವ ಮೂಲಕ ಸರ್ಕಾರದ ಅನುದಾನ ಹೆಚ್ಚು ಮಾಡುವಂತೆ ಅವರು ಮನವಿ ಮಾಡಿದರು.
ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಮುಖರಾದ ಜಗದೀಶ್, ಸುಕುಮಾರ್, ಸದಾಮುದ್ದಪ್ಪ, ಪ್ರಭು ರೈ, ಡಿಶು, ಬಿ.ಎಂ. ರಾಜೇಶ್, ಅರುಣ್ ಶೆಟ್ಟಿ ಮತ್ತಿತರರು ಹಾಜರಿದ್ದರು.