ಮಡಿಕೇರಿ: 27,28ರಂದು ಗೌಡ ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾವಳಿ

| Published : Apr 04 2024, 01:02 AM IST

ಸಾರಾಂಶ

27, 28ರಂದು ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ‘ಗೌಡ ಸಮುದಾಯದವರಿಗೆ ಮುಕ್ತ ಮಹಿಳಾ ಟೆನ್ನಿಸ್ ಬಾಲ್‌ ಕ್ರಿಕೆಟ್‌ ಪಂದ್ಯಾಟ’ ನಡೆಯಲಿದೆ. ಕೊಡಗು ಗೌಡ ಯುವವೇದಿಕೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಸಂದರ್ಭದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಜನಾಂಗದ ಮಹಿಳೆಯರಿಗಾಗಿ ಈ ಪಂದ್ಯಾಟ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜನಾಂಗದ ಮಹಿಳೆಯರಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಪಂದ್ಯಾವಳಿಯ ಗೌರವ ಸಲಹೆಗಾರ ಮೂಟೇರ ಪುಷ್ಪಾವತಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 27,28ರಂದು ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ‘ಗೌಡ ಮುಕ್ತ ಮಹಿಳಾ ಟೆನ್ನಿಸ್ ಬಾಲ್‌ ಕ್ರಿಕೆಟ್‌ ಪಂದ್ಯಾಟ’ ನಡೆಯಲಿದೆ ಎಂದರು. ಜಿಲ್ಲೆಯ ಗೌಡ ಜನಾಂಗದವರನ್ನು ಒಟ್ಟುಗೂಡಿಸಿ ಅನೇಕ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಕೊಡಗು ಗೌಡ ಯುವವೇದಿಕೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಸಂದರ್ಭದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಜನಾಂಗದ ಮಹಿಳೆಯರಿಗಾಗಿ ಈ ಪಂದ್ಯಾಟ ಆಯೋಜಿಸಲಾಗಿದೆ ಎಂದರು.

ಗೌಡ ಜನಾಂಗದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಕ್ರೀಡಾಪಟುಗಳಾಗಿ ತಮ್ಮ ತಮ್ಮ ತಂಡ ರಚಿಸಿಕೊಂಡು ಯಾವುದೇ ವಯಸ್ಸಿನ ಮಿತಿ ಇಲ್ಲದ ೫ ಓವರ್‌ಗಳ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದೆ. ಒಂದು ತಂಡದಲ್ಲಿ ಗರಿಷ್ಠ ೯ ಆಟಗಾರರು ಇರಬೇಕು. ಓವರ್ ಆರ್ಮ್ ಬೌಲಿಂಗ್‌ನೊಂದಿಗೆ ಥೋ ಬೌಲಿಂಗ್‌ಗೂ ಅವಕಾಶ ಇರುತ್ತದೆ. ಟೆನ್ನಿಸ್ ಬಾಲ್ ಕ್ರಿಕೆಟ್‌ನ ಇನ್ನಿತರ ಎಲ್ಲಾ ನಿಯಮಗಳನ್ನೂ ಅಳವಡಿಸಲಾಗಿರುತ್ತದೆ ಎಂದು ವಿವರಿಸಿದರು.

ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ೨೦ ಸಾವಿರ ರು., ದ್ವಿತೀಯ ಬಹುಮಾನ ೧೦ ಸಾವಿರ ರು. ಹಾಗೂ ತೃತೀಯ ಬಹುಮಾನ ೫ ಸಾವಿರ ರು. ಇರುತ್ತದೆ. ವೈಯಕ್ತಿಕ ಬಹುಮಾನಗಳಾದ ವುಮೆನ್ ಆಫ್‌ದ ಟೂರ್ನಮೆಂಟ್, ವುಮೆನ್ ಆಫ್‌ದ ಮ್ಯಾಚ್, ಬೆಸ್ಟ್ ಬ್ಯಾಟರ್, ಬೆಸ್ಟ್ ವಿಕೆಟ್ ಕೀಪರ್ ಸೇರಿದಂತೆ ಹಲವು ಬಹುಮಾನಗಳನ್ನೂ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ನೊಂದಾಣಿಗಾಗಿ ಪರಿಚನ ಶೋನಿ ಶರತ್ ೭೬೭೬೪೫೨೧೦೭, ಪುದಿಯನೆರವನ ರೇವತಿ ರಮೇಶ್ ೯೬೬೩೨೫೪೮೨೯ ಹಾಗೂ ಮೂಟೇರ ಪುಷ್ಪಾವತಿ ೬೩೬೨೮೧೪೬೫೯ ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಪಂದ್ಯಾವಳಿ ಸಂಚಾಲಕಿ ಪುದಿಯನೆರವನ ರೇವತಿ ರಮೇಶ್‌ ಮಾತನಾಡಿ, ಹೆಸರು ನೋಂದಾಯಿಸಲು ಏ. ೨೨ ಕಡೆಯ ದಿನವಾಗಿದೆ. 27,28ರಂದು ಮೊದಲಿಗೆ ಗ್ರಾಮವಾರು ಸಾಂಸ್ಕೃತಿಕ ಪೈಪೋಟಿ ನಡೆಯುತ್ತದೆ. ಈ ಪಂದ್ಯಾಟ ನಡೆಸಿಕೊಡಲು ಈಗಾಗಲೇ ಒಂದು ಅನುಭವಿ ತಂಡವನ್ನು ರಚಿಸಲಾಗಿದ್ದು, ಸಂಚಾಲಕರಾಗಿ ಪುದಿಯನೆರವನ ರೇವತಿ ರಮೇಶ್, ಗೌರವ ಸಲಹೆಗಾರರಾಗಿ ಮೂಟೇರ ಪುಷ್ಪಾವತಿ, ಸಹ ಸಂಚಾಲಕರಾಗಿ ಚೊಕ್ಕಾಡಿ ಪ್ರೇಮ ರಾಘವಯ್ಯ, ತಳೂರು ಉಷಾರಾಣಿ, ದುಗ್ಗಳ ಕಾವ್ಯಾ ಕಪಿಲ್, ಕುದುಕುಳಿ ಇಂದಿರಾ ಭರತ್, ಪಡನೋಳನ ಪವಿತ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್, ಮಹಿಳಾ ಕ್ರಿಕೆಟ್ ಕಪ್ ಸಹಸಂಚಾಲಕಿ ಚೊಕ್ಕಾಡಿ ಪ್ರೇಮ ರಾಘವಯ್ಯ ಹಾಗೂ ದುಗ್ಗಳ ಕಾವ್ಯ ಕಪಿಲ್ ಸುದ್ದಿಗೋಷ್ಠಿಯಲ್ಲಿದ್ದರು.