ಮಡಿಕೇರಿ-ಮಂಗಳೂರು ಹೆದ್ದಾರಿ ಬರೆ ಕುಸಿತ ಆತಂಕ

| Published : May 17 2024, 12:31 AM IST / Updated: May 17 2024, 02:11 PM IST

ಸಾರಾಂಶ

ಮಳೆಗಾಲದಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಗಾಗ್ಗೆ ಬರೆ ಕುಸಿತ ಉಂಟಾಗುವುದು ಸಾಮಾನ್ಯವಾಗಿದ್ದು, ಸಂಚಾರಕ್ಕೆ ತೊಡಕಾಗುವುದು ಮಾತ್ರ ತಪ್ಪುವುದಿಲ್ಲ. ಪ್ರತಿ ಬಾರಿ ಕಾಡುವ ಈ ಸಮಸ್ಯೆ ತಪ್ಪಬೇಕಾದರೆ ಸುಮಾರು 21 ಕಡೆಗಳಲ್ಲಿ ತಡೆಗೋಡೆ ಕಾಮಗಾರಿ ಆಗಬೇಕಾಗಿದೆ.

ವಿಘ್ನೇಶ್ ಎಂ. ಭೂತನಕಾಡು

 ಮಡಿಕೇರಿ : ಮಳೆಗಾಲದಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಗಾಗ್ಗೆ ಬರೆ ಕುಸಿತ ಉಂಟಾಗುವುದು ಸಾಮಾನ್ಯವಾಗಿದ್ದು, ಸಂಚಾರಕ್ಕೆ ತೊಡಕಾಗುವುದು ಮಾತ್ರ ತಪ್ಪುವುದಿಲ್ಲ. ಪ್ರತಿ ಬಾರಿ ಕಾಡುವ ಈ ಸಮಸ್ಯೆ ತಪ್ಪಬೇಕಾದರೆ ಸುಮಾರು 21 ಕಡೆಗಳಲ್ಲಿ ತಡೆಗೋಡೆ ಕಾಮಗಾರಿ ಆಗಬೇಕಾಗಿದೆ.

ಸಂಪಾಜೆ ಸಮೀಪದ ಕೊಯನಾಡಿನಲ್ಲಿ 2013ರಲ್ಲಿ ಭಾರಿ ಪ್ರಮಾಣದಲ್ಲಿ ರಸ್ತೆ ಕುಸಿತ ಉಂಟಾಗಿತ್ತು. ಹಲವು ದಿನಗಳ ಬಳಿಕ ರಸ್ತೆ ಮರು ನಿರ್ಮಾಣ ಮಾಡಲಾಯಿತು. ಆದರೆ 2018ರ ಈಚೆಗೆ ಭಾರಿ ಮಳೆಯಿಂದಾಗಿ ಪ್ರಕೃತಿ ವಿಕೋಪ ಉಂಟಾಗಿ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಬರೆ ಕುಸಿತವಾಗಿ ಸಂಪರ್ಕದಲ್ಲಿ ವ್ಯತ್ಯಯ ಉಂಟಾಯಿತು.

ಹೆದ್ದಾರಿಯ ಕರ್ತೋಜಿ, ಮದೆನಾಡು, ಕೊಯನಾಡು, ಸಂಪಾಜೆ, ಎರಡನೇ ಮೊಣ್ಣಂಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿ ಬಾರಿ ಮಳೆಗಾಲದ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಬರೆ ಕುಸಿತ ಉಂಟಾಗಿ, ಇದರಿಂದ ಸಮಸ್ಯೆಯಾಗಿದೆ.

ಮಡಿಕೇರಿ- ಮಂಗಳೂರು ಹೆದ್ದಾರಿಯ ಕಾಟಕೇರಿಯಿಂದ ಸಂಪಾಜೆಯ ವರೆಗೆ ಸುಮಾರು 21 ಕಡೆಗಳಲ್ಲಿ ಬರೆ ಕುಸಿತ ಉಂಟಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದ ಇಲ್ಲಿ ತಡೆಗೋಡೆ ನಿರ್ಮಿಸಲು ರು.90 ಕೋಟಿಯ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು, ಇನ್ನಷ್ಟೇ ಕೆಲಸ ಆರಂಭವಾಗಬೇಕಿದೆ. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಆದ್ದರಿಂದ ಈ ಕಾಮಗಾರಿ ಮಳೆ ಮುಗಿದ ಬಳಿಕ ಶುರುವಾಗುವ ಸಾಧ್ಯತೆಯಿದೆ.

ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಕುಸಿಯುವ ಭೀತಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಹೆದ್ದಾರಿ ಬಂದ್ ಮಾಡುವುದು ಸಾಮಾನ್ಯವಾಗುತ್ತದೆ. ಆದರೆ ಈ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಸುಮಾರು 7 ಕೋಟಿ ರು. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ತಡೆಗೋಡೆಗೆ ಹಾಕಿದ್ದ ಸ್ಲ್ಯಾಬ್‌ಗಳು ಉಬ್ಬಿ ಬೀಳುವ ಆತಂಕ ಎದುರಾಗಿದೆ.

ಬರೆ ಕುಸಿತ, ಅಂತರ್ಜಲ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬೆಟ್ಟದ ಪ್ರದೇಶದಿಂದ ಕೂಡಿದೆ. ಇದರಿಂದ ಮಳೆಗಾಲದಲ್ಲಿ ಗುಡ್ಡದ ಮೇಲಿಂದ ನೀರು ಹರಿದು ಬರೆ ಕುಸಿತ ಉಂಟಾಗುತ್ತದೆ. ಮೇಲ್ಭಾಗದಲ್ಲಿ ಬರೆ ಕುಸಿತವಾದರೆ ಕೆಲ ಭಾಗದಲ್ಲಿ ಅಂತರ್ಜಲ ಮಟ್ಟ ಏರಿಕೆಯಿಂದಾಗಿ ಮಣ್ಣು ಸಡಿಲಗೊಂಡು ರಸ್ತೆಯ ಮೇಲೆಯೇ ಕುಸಿತವಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಸಮಸ್ಯೆ ಸಾಮಾನ್ಯವಾಗಿರುತ್ತದೆ.

ಸಿದ್ಧತೆ ಮಾಡಿದ್ದೇವೆ:

ಜೂನ್ ತಿಂಗಳಿನಿಂದ ಮಳೆ ಆರಂಭವಾಗುವ ಹಿನ್ನೆಲೆಯಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿಯ ಕಾಟಕೇರಿಯಿಂದ ಸಂಪಾಜೆಯ ವರೆಗೆ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿದೆ. ಆದರೂ ಹೆಚ್ಚು ಮಳೆಯಾದರೆ ಬರೆ ಕುಸಿಯುವುದರಿಂದ ಮಣ್ಣು ತೆರವು ಮಾಡಲು ಎಲ್ಲ ಸಿದ್ಧತೆಗಳನ್ನು ಈಗಲೇ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಹೆದ್ದಾರಿ ಅಧಿಕಾರಿಗಳು.

ಮಡಿಕೇರಿ-ಮಂಗಳೂರು ಹೆದ್ದಾರಿಯ ಕಾಟಕೇರಿಯಿಂದ ಸಂಪಾಜೆ ವರೆಗೆ ಇತ್ತೀಚೆಗೆ ಡಾಂಬರೀಕರಣ ಮಾಡಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ 21 ಕಡೆಗಳಲ್ಲಿ ಬರೆ ಕುಸಿಯುವ ಸ್ಥಳ ಎಂದು ಗುರುತು ಮಾಡಲಾಗಿದ್ದು, ಅಲ್ಲಿಗೆ ತಡೆಗೋಡೆ ನಿರ್ಮಿಸಬೇಕು. ಮಳೆಗಾಲದಲ್ಲಿ ಬರೆ ಕುಸಿತವಾದರೆ ಕೂಡಲೇ ರಸ್ತೆ ಸಂಚಾರ ಬಂದ್ ಆಗದಂತೆ ಕೆಲಸ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ.

-ಗಿರೀಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ ಮಡಿಕೇರಿ.