ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಆಯೋಜಿಸಿದ್ದ ನೀನಾಸಂ ತಿರುಗಾಟ ನಾಟಕಗಳು ಇತ್ತೀಚೆಗೆ ಯಶಸ್ವಿಯಾಗಿ ಪ್ರದರ್ಶನಗೊಂಡವು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಆಯೋಜಿಸಿದ್ದ ನೀನಾಸಂ ತಿರುಗಾಟ ನಾಟಕಗಳು ಇತ್ತೀಚೆಗೆ ಯಶಸ್ವಿಯಾಗಿ ಪ್ರದರ್ಶನಗೊಂಡವು. ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಡಾ. ಎಂ. ಗಣೇಶ್ ನಿರ್ದೇಶನದಲ್ಲಿ ಮೊದಲ ದಿನದ ನಾಟಕ ‘ಹೃದಯದ ತೀರ್ಪು’ ಬಾನು ಮುಷ್ತಾಕ್ ಅವರ ಕಥೆಯನ್ನು ಆಧರಿಸಿದ ರಂಗಪ್ರಸ್ತುತಿ. ಒಂದು ವಿಶಿಷ್ಟ ಸಾಂಸಾರಿಕ ವೃತ್ತಾಂತವನ್ನು ಬಿಂಬಿಸುವ ಈ ನಾಟಕ ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ಪರಿಸರದೊಳಗೆ ಸಾಗುತ್ತಲೇ ಅದರ ಎಲ್ಲೆಗಳನ್ನು ಮೀರಿ ಹೆಣ್ಣಿನ ನೋಟಗಳ ಮುಖಾಂತರ ಅನನ್ಯ ವಾದ ಮಾನವೀಯ ಬಿಕ್ಕಟ್ಟುಗಳನ್ನು ರಂಗದ ಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿತು.ಎರಡನೇ ದಿನ ಪ್ರದರ್ಶನಗೊಂಡ ‘''''''''ಅವತರಣಮ್ ಭ್ರಾಂತಾಲಯಮ್’ ಜಿ. ಶಂಕರ ಪಿಳ್ಳೆ ರಚಿಸಿ, ನಾ. ದಾಮೋದರ ಶೆಟ್ಟಿ ಅನುವಾದಿಸಿ, ಶಂಕರ ವೆಂಕಟೇಶ್ವರನ್ ನಿರ್ದೇಶಿಸಿದ ನಾಟಕ. ಮಾನವನ ಅನಿಶ್ಚಿತತೆ ಮತ್ತು ಅಸಂಬದ್ಧತೆಯನ್ನು ತೆರೆದಿಡುತ್ತ, ಬದುಕಿನ ಅರ್ಥಹೀನತೆಗೆ ಒಂದು ಇತ್ಯಾತ್ಮಕ ಮುದ್ರೆ ಸಿಗಬೇಕೆಂಬ ಹಂಬಲ ಈ ಪ್ರಯೋಗದ್ದು. ನಟರ ಅತ್ಯುತ್ತಮ ಅಭಿನಯದಿಂದ ನಾಟಕಗಳು ಪ್ರೇಕ್ಷಕರ ಮನ ಗೆದ್ದವು.