ಸಾರಾಂಶ
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಧ್ವಜ ದಿನಾಚರಣೆ ಜಾಥಾಗೆ ಪೊಲೀಸ್ ಉಪ ಅಧೀಕ್ಷಕ ಮಹೇಶ್ ಕುಮಾರ್ ಹಸಿರು ನಿಶಾನೆ ಹಾರಿಸುವುದರ ಮೂಲಕ ಉದ್ಘಾಟಿಸಿದರು. ಮಡಿಕೇರಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿಯ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಧ್ವಜ ದಿನಾಚರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಧ್ವಜ ದಿನಾಚರಣೆ ಜಾಥಾಗೆ ಪೊಲೀಸ್ ಉಪ ಅಧೀಕ್ಷಕ ಮಹೇಶ್ ಕುಮಾರ್ ಹಸಿರು ನಿಶಾನೆ ಹಾರಿಸುವುದರ ಮೂಲಕ ಉದ್ಘಾಟಿಸಿದರು.ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿಯ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಧ್ವಜ ದಿನಾಚರಣೆ ನಡೆಯಿತು.
ಜಾಥಾ ಖಾಸಗಿ ಹಳೆ ಬಸ್ ನಿಲ್ದಾಣ ದವರೆಗೆ ಘೋಷಣೆಗಳೊಂದಿಗೆ ಸಾಗಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ 180 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಸಂಸ್ಥೆಯ ಆಯುಕ್ತರು, ಪದಾಧಿಕಾರಿಗಳು ಭಾಗವಹಿಸಿದ್ದರು.ನಂತರ ಸಂಸ್ಥೆಯಲ್ಲಿ ನಡೆದ 75 ನೇ ವರ್ಷದ ಧ್ವಜ ದಿನಾಚರಣೆಯಲ್ಲಿ ಮಡಿಕೇರಿ ತಹಸೀಲ್ದಾರ್ ಪ್ರವೀಣ್ ಧ್ವಜ ಬಿಡುಗಡೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳ ಗೀತಗಾಯನಕ್ಕೆ ಶುಭ ಕೋರಿದರು.
ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆ ನಡೆಸಲಾಯಿತು. ಇದರಲ್ಲಿ ಜಿಲ್ಲೆಯ 6 ಸ್ಥಳೀಯ ಸಂಸ್ಥೆಯ ಕಬ್, ಬುಲ್ ಬುಲ್, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್, ರೇಂಜರ್ಸ್ ತಂಡಗಳು ಭಾಗವಹಿಸಿದ್ದವು. ಪ್ರತಿ ವಿಭಾಗದಲ್ಲಿ ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳು ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಗೆ ಭಾಗವಹಿಸಲು ತಿಳಿಸಲಾಯಿತು.
ಸಭಾಧ್ಯಕ್ಷ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ವಿಜೇತ ತಂಡಗಳನ್ನು ಅಭಿನಂದಿಸಿದರು. ಜಿಲ್ಲಾ ಸ್ಕೌಟ್ ಆಯುಕ್ತ ಜಿಮ್ಮಿ ಸಿಕ್ವೇರಾ, ಗೈಡ್ ಆಯುಕ್ತೆ ರಾಣಿ ಮಾಚಯ್ಯ, ಸ್ಕೌಟ್ ತರಬೇತಿ ಆಯುಕ್ತ ರಂಜಿತ್ ಕೆ.ಯು., ಗೈಡ್ ತರಬೇತಿ ಆಯುಕ್ತ ಮೈಥಿಲಿ ರಾವ್, ಸ್ಥಾನಿಕ ಆಯುಕ್ತ ಮುತ್ತಪ್ಪ, ಜಿಲ್ಲಾ ಕಾರ್ಯದರ್ಶಿ ವಸಂತಿ, ಸಂಪಾಜೆ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಉಷಾರಾಣಿ, ಜಿಲ್ಲಾ ಸಂಘಟಕಿ ದಮಯಂತಿ, ಗೈಡ್ ಸಹಾಯಕ ಆಯುಕ್ತರಾದ ಸುಲೋಚನ, ವಿರಾಜಪೇಟೆ ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿ ಜಾಜಿ ಹಾಗೂ ವಿವಿಧ ಶಾಲೆಗಳ ಸ್ಕೌಟ್ ಮತ್ತು ಗೈಡ್ ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಇದ್ದರು.