ಸಾರಾಂಶ
ದೇಶದ ಸೈನಿಕರಿಗೆ ಮತ್ತಷ್ಟು ಬಲ ಬರಲಿ ಎಂದು ಸರ್ಕಾರದ ಆದೇಶದಂತೆ ಸಾಮೂಹಿಕ ಪ್ರಾರ್ಥನೆ ನಡೆಸಿದರು. ದೇಶದಲ್ಲಿ ಶಾಂತಿ ನೆಲೆಸುವುದಕ್ಕಾಗಿ ಸೈನಿಕರು ಹೋರಾಡುತ್ತಿದ್ದಾರೆ. ಅವರಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಅವರ ಕೆಲಸಕ್ಕೆ ಇನ್ನಷ್ಟು ಶಕ್ತಿ ಬರಲಿ ಎಂದು ಪ್ರಾರ್ಥನೆ ಮಾಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆ ಮತ್ತು ಭಾರತೀಯ ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕು ಎಂದು ಕೊಡಗಿನ ವಿವಿಧ ಮಸೀದಿಗಳಲ್ಲಿ ಮುಸಲ್ಮಾನರು ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ದೇಶದ ಸೈನಿಕರಿಗೆ ಮತ್ತಷ್ಟು ಬಲ ಬರಲಿ ಎಂದು ಸರ್ಕಾರದ ಆದೇಶದಂತೆ ಸಾಮೂಹಿಕ ಪ್ರಾರ್ಥನೆ ನಡೆಸಿದರು. ದೇಶದಲ್ಲಿ ಶಾಂತಿ ನೆಲೆಸುವುದಕ್ಕಾಗಿ ಸೈನಿಕರು ಹೋರಾಡುತ್ತಿದ್ದಾರೆ. ಅವರಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಅವರ ಕೆಲಸಕ್ಕೆ ಇನ್ನಷ್ಟು ಶಕ್ತಿ ಬರಲಿ ಎಂದು ಪ್ರಾರ್ಥನೆ ಮಾಡಿದರು.
ನಗರದ ಬದ್ರಿಯಾ ಮಸೀದಿಯಲ್ಲಿ ಕೂಡ ಮುಸಲ್ಮಾನ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳಾದ ಹಾಫಿಲ್ ನೌಫಾಲ್ ಸಕಾಫಿ ನೇತೃತ್ವದಲ್ಲಿ ದೇಶದ ಶಾಂತಿ ಸೌಹಾರ್ದತೆಗಾಗಿ ಮತ್ತು ಭಾರತೀಯ ಸೇನೆಯ ಸೈನಿಕರ ಒಳಿತಿಗಾಗಿ ಮುಸಲ್ಮಾನರು ಪ್ರಾರ್ಥಿಸಿದರು.ಈ ಸಂದರ್ಭ ಮಾತನಾಡಿದ ಬದ್ರಿಯಾ ಮಸೀದಿ ಅಧ್ಯಕ್ಷ ಅಮೀನ್ ಮೊಹಿಸಿನ್, ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಭಾರತೀಯ ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕು ಮತ್ತು ಶ್ರೇಯೋಭಿವೃದ್ಧಿಯಾಗಬೇಕೆಂದು ಸರ್ವ ಮುಸಲ್ಮಾನರು ಇಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ.ದೇಶವನ್ನು ಬಲಪಡಿಸುವ ನಿಟ್ಟಿನಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು, ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಒಗ್ಗಟ್ಟನ್ನು ಕಾಯ್ದುಕೊಳ್ಳಲು ಪ್ರಾರ್ಥಿಸಲಾಯಿತು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತಿಯ ಸೈನಿಕರು ದಾಳಿ ನಡೆಸಿದ್ದು, ಆಪರೇಷನ್ ಸಿಂದೂರ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಆ ಮೂಲಕ ಭಾರತ ಯಾವುದೇ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಿದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದರು.ಸೈನ್ಯದ ದಂಡಾಧಿಕಾರಿಗಳು ರಾಷ್ಟ್ರಬದ್ಧತೆ ಹಾಗೂ ಧೈರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದರಿಂದ ಭಾರತದ ಜನತೆಗೆ ಹೆಚ್ಚಿನ ಶಕ್ತಿ ಮತ್ತು ಧೈರ್ಯ ಬಂದಿದೆ. ಈ ಸನ್ನಿವೇಶವನ್ನು ಎಲ್ಲ ಭಾರತೀಯರು ಒಕ್ಕೊರಲಿನಿಂದ ಸಂಭ್ರಮಿಸಬೇಕು. ಮುಂದೆಯೂ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಸೌಹಾರ್ದತೆಯ ಪರಂಪರೆ ಮುಂದುವರಿಯಬೇಕು. ಒಗ್ಗಟ್ಟಿನ ಬೆಳವಣಿಗೆ ದೇಶಕ್ಕೆ ವಿಜಯವನ್ನು ತಂದುಕೊಡುತ್ತದೆ ಎಂದು ಅಮೀನ್ ಮೊಹಿಸಿನ್ ಅಭಿಪ್ರಾಯಪಟ್ಟರು.ಬದ್ರಿಯಾ ಮಸೀದಿಯ ಉಪಾಧ್ಯಕ್ಷ ಇಸ್ಮಾಯಿಲ್, ಮದ್ರಸ ಪ್ರಾಂಶುಪಾಲ ಹನೀಫ್ ಧಾರಿಮಿ, ನಗರಸಭಾ ಸದಸ್ಯ ಮನ್ಸೂರ್ ಮತ್ತಿತರರು ಉಪಸ್ಥಿತರಿದರು.