ಮಡಿವಾಳ ಮಾಚಿದೇವರು ಬಸವಣ್ಣನವರ ತತ್ವಗಳಿಂದ ಪ್ರೇರಿತರಾದರು. ಸಮಾಜದಲ್ಲಿ ಸಮಾನತೆಗಾಗಿ ತಮ್ಮ ವಚನಗಳ ಮೂಲಕ ಹೋರಾಡಿದರು.
ಗದಗ: ಮಡಿವಾಳ ಮಾಚಿದೇವರು 12ನೇ ಶತಮಾನದ ಪ್ರಸಿದ್ಧ ವಚನಕಾರರು. ತಮ್ಮ ಕಾಯಕ ನಿಷ್ಠೆಯಿಂದ ಹಾಗೂ ವಚನಗಳ ಮೂಲಕ ಸಮಾಜದಲ್ಲಿ ತಾರತಮ್ಯ, ಅಂಕುಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಗಾಗಿ ಶ್ರಮಿಸಿದರು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಡಿವಾಳ ಮಾಚಿದೇವರು ಬಸವಣ್ಣನವರ ತತ್ವಗಳಿಂದ ಪ್ರೇರಿತರಾದರು. ಸಮಾಜದಲ್ಲಿ ಸಮಾನತೆಗಾಗಿ ತಮ್ಮ ವಚನಗಳ ಮೂಲಕ ಹೋರಾಡಿದರು. ಶರಣರ ಬಟ್ಟೆಗಳನ್ನು ಮಡಿ ಮಾಡುವುದು ಅವರ ಕಾಯಕವಾಗಿತ್ತು. ಕಾಯಕನಿಷ್ಠುರ, ಸದಾಚಾರವುಳ್ಳವರ ಶಿವಶರಣರ ಬಟ್ಟೆಗಳನ್ನು ಮಾತ್ರ ಮಡಿ ಮಾಡುವ ನಿಷ್ಠುರ ವಚನಕಾರರಾಗಿದ್ದರು. ಇವರ ವಚನಗಳಲ್ಲಿನ ಸಂದೇಶಗಳು ಸಾರ್ವಕಾಲಿಕವಾಗಿವೆ ಎಂದರು.
ಶಿರಗುಂಪಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುಜಾತಾ ಮಡಿವಾಳರ ಉಪನ್ಯಾಸ ನೀಡಿ, ಮಡಿವಾಳ ಮಾಚಿದೇವರು ವೀರನಿಷ್ಠೆಯ ಶರಣರಾಗಿದ್ದರು. ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಜನಿಸಿದರು. ಪರುವತಯ್ಯ- ಸುಜ್ಞಾನವ್ವ ದಂಪತಿಗಳ ಪುತ್ರರಾಗಿದ್ದರು.ಕಲ್ಯಾಣ ಅವರ ಕಾರ್ಯಕ್ಷೇತ್ರವಾಗಿತ್ತು. ಆರಾಧ್ಯದೈವ ಕಲ್ಲಿನಾಥವಾಗಿದ್ದು, ಕಾವ್ಯ ಪುರಾಣಗಳಲ್ಲಿ ಅವರನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶರಣರ ಬಟ್ಟೆಗಳನ್ನು ಶುಚಿ ಮಾಡುವುದು ಅವರ ಕಾಯಕವಾಗಿತ್ತು. ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಅಸ್ಪೃಶ್ಯತೆ, ಅಂಧಕಾರ, ಮೂಢನಂಬಿಕೆ, ಅನಾಚಾರಗಳನ್ನು ಹೋಗಲಾಡಿಸಿ ಸಮಾಜ ಸುಧಾರಣೆಗಾಗಿ ಶ್ರಮಿಸಿದರು ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಡಿವೈಎಸ್‌ಪಿ ವಿದ್ಯಾಧರ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ರಾಜು ಕಂಠಿಗೊಣ್ಣವರ, ಶ್ರೀಧರ ಚಿನಗುಂಡಿ ಸೇರಿದಂತೆ ಸಮಾಜದ ಗಣ್ಯರು, ಹಿರಿಯರು ಇದ್ದರು. ಪ್ರೊ. ಬಾಹುಬಲಿ ಜೈನರ ನಿರೂಪಿಸಿ, ವಂದಿಸಿದರು.