ಮಾಗಳ ವಿಎಸ್‌ಎಸ್‌ಎನ್‌ ನೂತನ ಕಟ್ಟಡ ಉದ್ಘಾಟನೆ

| Published : Oct 28 2024, 12:52 AM IST

ಸಾರಾಂಶ

ಮಾಗಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಗೋದಾಮು ಉದ್ಘಾಟನೆ ಸಮಾರಂಭ ಜರುಗಿತು.

ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಗೋದಾಮು ಉದ್ಘಾಟನೆ ಸಮಾರಂಭ ಜರುಗಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ.ವಿಜಯಕುಮಾರ, ಮಾಗಳ ಗ್ರಾಮ ಅತಿಹೆಚ್ಚು ಕಂದಾಯ ಜಮೀನು ಹೊಂದಿದೆ. ಇದರಿಂದ ಭಾಗದಲ್ಲಿ ಪ್ರಗತಿ ಪರ ರೈತರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಕೃಷಿ ವಲಯ ಅಭಿವೃದ್ಧಿಗಾಗಿ ಸಹಕಾರ ಸಂಘದಿಂದ ರೈತರಿಗೆ ₹3 ಲಕ್ಷದವರೆಗೂ ಶೂನ್ಯ ಬಡ್ಡಿ ದರಲ್ಲಿ ಕೃಷಿ ಸಾಲ ನೀಡಲಾಗುತ್ತಿದೆ. ಈ ಗ್ರಾಮದ ರೈತರಿಗೆ ಅನುಕೂಲವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಆಗಬಾರದು ಎಂದರು.

ಗ್ರಾಮದಲ್ಲಿರುವ ಸಹಕಾರ ಸಂಘದ ಕಟ್ಟಡ ಮತ್ತು ಗೋದಾಮು ಬಹಳ ಚಿಕ್ಕದಾಗಿದ್ದು, ಇದರಿಂದ ರೈತರಿಗೆ ಮತ್ತು ಆಹಾರ ಧಾನ್ಯ ವಿತರಣೆ ಮಾಡುವ ಸಂದರ್ಭದಲ್ಲಿ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಮೀನು ಖರೀದಿ ಮಾಡಿ, ಸಂಘ ಸದಸ್ಯರ ಬಂಡವಾಳ ಠೇವಣಿ ಲಾಭಾಂಶದಲ್ಲಿ ಬಂದ ಬಡ್ಡಿ ಹಣದ ₹25 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ಹಾಗೂ ಗೋದಾಮು ನಿರ್ಮಾಣ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಈಟಿ ಕೋಟೆಪ್ಪ ಮಾತನಾಡಿ, ಮಾಗಳ ಸೊಸೈಟಿಯು 1976 ರಲ್ಲಿ ಸ್ಥಾಪನೆಯಾಗಿದ್ದು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. ಈವರೆಗೂ 2100 ಸದಸ್ಯರನ್ನು ಹೊಂದಿದೆ. ಈ ಭಾಗದ ರೈತರ ಅನುಕೂಲವಾಗಲೆಂದು ಸಂಘದ ಎಲ್ಲ ಸದಸ್ಯರ ಸಹಕಾರದೊಂದಿಗೆ ಸರ್ಕಾರಿ ಜಮೀನು ಖರೀದಿ ಮಾಡಿದ್ದೇವೆ. ಗ್ರಾಮದಲ್ಲಿ ಕಟ್ಟಡದ ಕೊರತೆಯಿಂದಾಗಿ, ಹೊಸ ಕಟ್ಟಡ ಮತ್ತು ಗೋದಾಮು ನಿರ್ಮಾಣ ಅಭಿವೃದ್ಧಿಯ ಸಂಕೇತವಾಗಿದೆ ಎಂದರು.

ಸಹಕಾರ ಸಂಘದ ಕಾರ್ಯದರ್ಶಿ ನಂದಿಹಳ್ಳಿ ಬಸವಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿ, ಮಾಗಳ ಸಹಕಾರ ಸಂಘವು 2100 ಸದಸ್ಯರನ್ನು ಹೊಂದಿದ್ದು, ₹74 ಲಕ್ಷ ಷೇರು ಮೊತ್ತ ಹೊಂದಿದೆ. ₹19.78 ಲಕ್ಷ ಹೊಂದಿದೆ, ಈವರೆಗೂ ₹6.43 ಕೋಟಿ ಬೆಳೆ ಸಾಲ ವಿತರಣೆ ಮಾಡಲಾಗಿದೆ. ಮಾಗಳ, ಮಾಗಳ ತಾಂಡ, ರಂಗಾಪುರ ಮತ್ತು 63 ತಿಮ್ಲಾಪುರ ವ್ಯಾಪ್ತಿಯನ್ನು ಹೊಂದಿದೆ. ₹8.34 ಕೋಟಿ ವಾರ್ಷಿಕ ವಹಿವಾಟ ನಡೆದಿದೆ ಎಂದರು.

ಸಹಕಾರ ಸಂಘಗಳ ಸಹಾಯಕ ಶರಣಬಸಪ್ಪ, ಗ್ರಾಪಂ ಉಪಾಧ್ಯಕ್ಷ ಯಳಮಾಲಿ ವಿರೂಪಾಕ್ಷಪ್ಪ ಮಾತನಾಡಿದರು. ಸಂಘದ ಉಪಾಧ್ಯಕ್ಷ ಲಚ್ಚಪ್ಪನವರ್‌ ಮಹೇಶ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಯಶೋಧರಗೌಡ, ರೈತ ಮುಖಂಡರಾದ ತೋಟರ ಮಲ್ಲಿಕಾರ್ಜುನ, ಟಿ.ಧರ್ಮರೆಡ್ಡಿ, ಕೆ.ಸತ್ಯನಾರಾಯಣರೆಡ್ಡಿ ಸೇರಿದಂತೆ ಸಹಕಾರ ಸಂಘದ ಎಲ್ಲ ನಿರ್ದೇಶಕರು, ಗ್ರಾಮಸ್ಥರು ಮತ್ತು ಬಿ.ನಾರಾಯಣಸ್ವಾಮಿ, ಗುಡಿ ರಮೇಶ, ಬಾವಿಕಟ್ಟಿ ಜ್ಯೋತೆಪ್ಪ ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.