ಕಲಬುರಗಿಯಲ್ಲಿ ಇಂದಿನಿಂದ ಎರಡು ದಿನ ಮಹಾದೇವಿಯಕ್ಕ ಸಮ್ಮೇಳನ

| Published : Sep 21 2024, 01:52 AM IST

ಕಲಬುರಗಿಯಲ್ಲಿ ಇಂದಿನಿಂದ ಎರಡು ದಿನ ಮಹಾದೇವಿಯಕ್ಕ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯಲ್ಲಿ ಇಂದಿನಿಂದ ಎರಡು ದಿನ ಮಹಾದೇವಿಯಕ್ಕ ಸಮ್ಮೇಳನ

ಕನ್ನಡಪ್ರಭ ವಾರ್ತೆ ಕಲಬುರಗಿ

ಬಸವ ಸಮಿತಿ ಅಕ್ಕನ ಬಳಗದ ವತಿಯಿಂದ ಸೆ.21ರಿಂದ ಎರಡು ದಿನಗಳ ಕಾಲ 14ನೇ ಮಹಾದೇವಿಯಕ್ಕಳ ಸಮ್ಮೇಳನವು ನಗರದ ಸೇಡಂ ರಸ್ತೆಯಲ್ಲಿರುವ ಜಯನಗರದ ಅನುಭವ ಮಂಟಪದಲ್ಲಿ ಜರುಗಲಿದೆ ಎಂದು ಜಿಲ್ಲಾ ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ ಹಾಗೂ ಸಮ್ಮೇಳನದ ಸಂಚಾಲಕಿ ಡಾ. ಜಯಶ್ರೀ ದಂಡೆ ಹೇಳಿದ್ದಾರೆ.

ಅನುಭವ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರಕಲಾ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಡಾ.ಶಾಂತಲಾ ನಿಷ್ಠಿ ಅವರು ಸಮ್ಮೇಳನಾಧ್ಯಕ್ಷತೆ ವಹಿಸುವರು. ಸಮ್ಮೇಳನವನ್ನು ಮಕ್ಕಳಿಂದ ಉದ್ಘಾಟಿಸಲಾಗುವುದು. ತೇಜಸ್ವಿ, ಖುಷಿ, ನಂದಿನಿ, ತನ್ವಿ, ಭಾಗ್ಯಶ್ರೀ, ಅಮುಕ್ತಮೌಲ್ಯ ಅನಾವರಣಗೊಳಿಸಲಿದ್ದಾರೆ ಎಂದರು.

ಎರಡು ದಿನಗಳಲ್ಲಿ ವಚನ-ನಿರ್ವಚನ, ಶರಣೆಯರ ಅಲೌಕಿಕ ಬದುಕು, ಶರಣೆಯರ ಏಕದೇವೋಪಾಸನೆ, ಶರಣೆಯರ ಧೋರಣೆ ಸೇರಿ 5 ಸಾಹಿತ್ಯಕ ಗೋಷ್ಠಿ, ವಚನ ನೃತ್ಯ, ಕುಟ್ಟುವ ಹಾಡು, ಭಜನೆ, ರೂಪಕ, ಬೀಸುವ ಹಾಡು, ಶರಣರ ಜಾನಪದ ಹಾಡು, ವಚನ ಗಾಯನ ಗಾಯನ-ದರ್ಶನ ಸೇರಿ 6 ಸಾಂಸ್ಕೃತಿಕ ಕಾರ್ಯಕ್ರಮ, ಉದ್ಘಾಟನೆ, ಸಮಾರೋಪ ನಡೆಯಲಿದ್ದು, ಸುಮಾರು 170ಕ್ಕೂ ಹೆಚ್ಚು ಮಹಿಳೆಯರು ವೇದಿಕೆಯಲ್ಲಿ ತಮ್ಮ ಪ್ರತಿಭೆ ಮೆರೆಯಲಿದ್ದಾರೆಂದರು.

ಸೆ. 21ರಂದು ಬೆಳಗ್ಗೆ 8.30ಗಂಟೆಗೆ ಮಹಾದೇವಿಯಕ್ಕಗಳ ಭಾವಚಿತ್ರ ಮೆರವಣಿಗೆ ಜಯನಗರದಲ್ಲಿ ಜರುಗಲಿದೆ. 10ಗಂಟೆಗೆ ಅಕ್ಕನ ಬೆಳಗು ಕಾರ್ಯಕ್ರಮ ನೆರವೇರಲಿದೆ. ಗೋಷ್ಠಿ ಒಂದರಲ್ಲಿ ಸುಮಂಗಲಾ ಬಾಳಿ, ರೋಹಿಣಿ ಭೋಗಶೆಟ್ಟಿ, ಛಾಯಾ ಪಟ್ಟಣಶೆಟ್ಟಿ, ಸಾಕ್ಷಿ ಸತ್ಯಂಪೇಟೆ, ಶೀಲಾ ಕಾಮಶೆಟ್ಟಿ ಪಾಲ್ಗೊಳ್ಳುವರು.

ಮಧ್ಯಾಹ್ನ 2-30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿವೆ. ವಚನ ನೃತ್ಯ, ಭಜನೆ, ಕುಟ್ಟುವ ಹಾಡುಗಳು, ಶರಣರ ಜನಪದ ಹಾಡು, ಜೇಡರ ದಾಸಿಮಯ್ಯ ರೂಪಕ ಮುಂತಾದ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಸಂಜೆ 4-30ರಿಂದ ಬೀಸುವ ಹಾಡುಗಳು, ಶರಣರ ಜಾನಪದ ಹಾಡು, ಬಸವ ಸ್ತುತಿ, ವಚನ ನೃತ್ಯ, ಸಣ್ಣಾಟ ವಚನಗಳ ಹುಡುಕಾಟ, ರಚನೆ, ನಿರ್ದೇಶನ, ಸಂಗೀತ ಮತ್ತು ಹಿನ್ನೆಲೆ ಗಾಯನ ಮುಂತಾದ ಕಾರ್ಯಕ್ರಮಗಳು ಜರುಗಲಿವೆ. ಪ್ರೊ.ಮಹಾನಂದಾ ಹಿರೇಮಠ್ ಅವರು ಡಾ. ಶಾಂತಲಾ ನಿಷ್ಠಿ ಅವರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡುವರು.

ಸೆ. 22ರಂದು ಬೆಳಗ್ಗೆ 10-30ರಿಂದ ಶರಣರ ಜಾನಪದ ಹಾಡುಗಳು, ಭಜನೆ, ವಚನ ನೃತ್ಯ, ಶರಣರ ಜಾನಪದ ಹಾಡು, ವಚನ ಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಗೋಷ್ಠಿ ಮೂರರಲ್ಲಿ ಶರಣೆಯರ ಏಕದೇವೋಪಾಸನೆ ಕುರಿತು ಜರುಗಲಿದೆ. ಇಷ್ಠಲಿಂಗ ನಿಷ್ಠೆ ಕುರಿತು ಡಾ. ಶಿವಲೀಲಾ ಚಟ್ನಳ್ಳಿ, ಅನ್ಯದೈವ ನಿರಾಕರಣೆ ಕುರಿತು ಶ್ರೀಮತಿ ಸುವರ್ಣಾ ಚಿಮಕೋಡೆ ಬೀದರ್, ಡಾ.ಸರ್ವಮಂಗಳಾ ಸಕ್ರಿ ರಾಯಚೂರು ಅವರು ಕ್ಷುದ್ರ ದೈವ ವಿಡಂಬನೆ (ಕೀಳು ದೈವ) ಕುರಿತು ಮಾತನಾಡುವರು. 12-30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.

ಮಧ್ಯಾಹ್ನ 1-30ಕ್ಕೆ ನರರೋಗ ತಜ್ಞೆ ಡಾ. ಶ್ವೇತಾ ಪಾಟೀಲ್ ವಿಶೇಷ ಉಪನ್ಯಾಸ ನೀಡುವರು. ಗೋಷ್ಠಿ 4ರಲ್ಲಿ ಶರಣೆಯರ ತಾತ್ವಿಕ ಚಿಂತನೆಗಳ ಕುರಿತು ನೆರವೇರಲಿದೆ. ಕಾಯಕ ಕುರಿತು ಡಾ. ಕವಿತಾ ಸಂಗೊಳಗಿ, ದಾಸೋಹ ಕುರಿತು ಡಾ. ಶ್ಯಾಮಲಾ ಸ್ವಾಮಿ, ಪ್ರಸಾದ ಕುರಿತು ರಜಿಯಾ ಬಳಬಟ್ಟಿ ಮಾತನಾಡುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಗೋಷ್ಠಿ 5ರಲ್ಲಿ ಶರಣೆಯರ ಬಂಡಾಯ ಧೋರಣೆ ಕುರಿತು ಡಾ. ಸಾರಿಕಾ ಕಾಳಗಿ, ಶರಣೆಯರ ಸಾಮಾಜಿಕ ಧೋರಣೆ ಕುರಿತು ಡಾ. ಸುಜಾತಾ ಪಾಟೀಲ್, ಶರಣೆಯರ ಆರ್ಥಿಕ ಧೋರಣೆ ಕುರಿತು ಡಾ. ಶೈಲಜಾ ಕೊನೆಕ್ ಮಾತನಾಡುವರು. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸಂಜೆ 6-30ಕ್ಕೆ ಸಮಾರೋಪ ಜರುಗಲಿದೆ. ಡಾ.ಗಂಗಾಬಿಕಾ ಪಾಟೀಲ್ ಅವರು ಮಂಗಲ ನುಡಿಗಳನ್ನಾಡುವರು. ಇದೇ ಸಂದರ್ಭದಲ್ಲಿ ಡಾ.ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿಯನ್ನು ಬೀದರ್ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಬಿಕಾ ಪಾಟೀಲ್, ಡಾ.ಸೀಮಾ ಪಾಟೀಲ್, ಡಾ. ಛಾಯಾ ಭರತನೂರ್, ಶ್ರೀಮತಿ ಅಶ್ವಿನಿ ಚಿಟ್ಟಾ, ಡಾ. ಕಲಾವತಿ ದೊರೆ, ಡಾ. ರೇಣುಕಾ ಹಾಗರಗುಂಡಗಿ ಅವರಿಗೆ ಗೌರವ ಸನ್ಮಾನ ಮಾಡಲಾಗುವುದೆಂದು ವಿಲಾಸವತಿ, ಜಯಶ್ರೀ ಹೇಳಿದ್ದಾರೆ.