ಮಹಾಕವಿ ವಾಲ್ಮೀಕಿ ಕೊಡುಗೆ ಅನನ್ಯ: ಶಿವರಾಜ ತಂಗಡಗಿ

| Published : Oct 18 2024, 12:18 AM IST

ಸಾರಾಂಶ

ಮಹರ್ಷಿ ವಾಲ್ಮೀಕಿ ಪ್ರತಿಯೊಬ್ಬ ಪ್ರಜೆಗೂ ಕೂಡಾ ಮಾರ್ಗದರ್ಶನವನ್ನು ಕಾವ್ಯದ ಮೂಲಕ ನೀಡಿದ್ದಾರೆ. ಸಮಾಜದಲ್ಲಿ ಯಾವ ರೀತಿಯಾಗಿ ಬದುಕಬೇಕು ಎಂಬುದನ್ನು ರಾಮಾಯಣದ ಮೂಲಕ ತಿಳಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಅವರ ಕೊಡುಗೆ ಅನನ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಪ್ರತಿಯೊಬ್ಬ ಪ್ರಜೆಗೂ ಕೂಡಾ ಮಾರ್ಗದರ್ಶನವನ್ನು ಕಾವ್ಯದ ಮೂಲಕ ನೀಡಿದ್ದಾರೆ. ಸಮಾಜದಲ್ಲಿ ಯಾವ ರೀತಿಯಾಗಿ ಬದುಕಬೇಕು ಎಂಬುದನ್ನು ರಾಮಾಯಣದ ಮೂಲಕ ತಿಳಿಸಿದ್ದಾರೆ. ಮಹನೀಯರ ವಿಚಾರಗಳನ್ನು ಹಾಗೂ ಅವರ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸಲು ಜಯಂತಿಗಳನ್ನು ಸರ್ಕಾರದಿಂದ ಹಮ್ಮಿಕೊಳ್ಳಲಾಗುತ್ತದೆ. ಎಸ್ಸಿ, ಎಸ್ಟಿ ಜನಾಂದವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ವಾಲ್ಮೀಕಿ ಜನಾಂಗದವರು ರಾಷ್ಟ್ರಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ರಾಮಾಯಣ ದರ್ಶನದ ಮೂಲಕ ಸಮಾಜದ ಅಂಕುಡೊಂಕು ತಿದ್ದುವಂತಹ ಕೆಲಸ ಮಾಡಿದ್ದಾರೆ. ಮನುಕುಲದ ಏಕತೆ ಸೃಷ್ಟಿಸಿದ್ದಾರೆ. ಬಸವಣ್ಣನವರು, ಕನಕದಾಸರು, ಅಂಬೇಡ್ಕರ್, ಮಹರ್ಷಿ ವಾಲ್ಮೀಕಿಯವರಂತಹ ಅನೇಕ ಮಹನೀಯರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದು, ಇಂತಹ ಮಹನೀಯರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಭಾರತೀಯರ ಜೀವನ ಚರಿತ್ರೆ ಹಾಗೂ ಸಂಸ್ಕೃತಿ ಬಿಂಬಿಸುವ ಮಹಾಕಾವ್ಯ ರಾಮಾಯಣ. ಪ್ರಪಂಚದಲ್ಲಿ ರಾಮಾಣವು ಮಹಾ ಕಾವ್ಯವಾಗಿದೆ. ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಮತ್ತು ಅರ್ಹ ವ್ಯಕ್ತಿಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಮಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಪ್ರಭುರಾಜ್ ನಾಯಕ ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ಮಂ ಪಾಂಡೆಯ, ಎಸ್ಪಿ ಡಾ. ರಾಮ ಎಲ್. ಅರಸಿದ್ದಿ, ಉಪ ಅರಣ್ಯಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು ತಳವಾರ, ವಾಲ್ಮಿಕಿ ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ್ ಇದ್ದರು.ರಾಘವೇಂದ್ರ ಹಿಟ್ನಾಳ, ಹೇಮಲತಾ ನಾಯಕ ಪರಸ್ಪರ ವಾಕ್ಸಮರ:

ಒಂದುವರೆ ವರ್ಷದಿಂದ ಅನ್ಯಾಯ- ಹೇಮಲತಾ ನಾಯಕ್:

ಕಳೆದೊಂದುವರೆ ವರ್ಷದಿಂದ ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಒಂದೇ ಒಂದು ಸಾಲಸೌಲಭ್ಯವಿಲ್ಲ, ಯೋಜನೆಯೂ ಇಲ್ಲ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದ್ದಾರೆ.

ಸಾಹಿತ್ಯಭವನದಲ್ಲಿ ಶ್ರೀ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿಯೇ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ತಮ್ಮ ಮಾತಿನ ಮೂಲಕ ತಿವಿದಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಈ ಹಿಂದೆ ಸಾಲ ಸೌಲಭ್ಯ ವಿತರಣೆ, ಯೋಜನೆಗಳ ಫಲಾನುಭವಿಗಳ ಘೋಷಣೆ, ವಾಹನ ವಿತರಣೆ ನಡೆಯುತ್ತಿತ್ತು. ಆದರೆ, ಈಗಿರುವ ಸರ್ಕಾರದಲ್ಲಿ ಒಂದೇ ಒಂದು ಗಾಡಿ ನೀಡಿಲ್ಲ, ಇದರಿಂದ ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ.

ನಾನು ಸಹ ಇದೇ ಸಮಾಜದಿಂದ ಬಂದು ಸುಮ್ಮನೇ ಕುಳಿತುಕೊಳ್ಳಲು ಆಗುವುದಿಲ್ಲ. ಈ ಸಮಾಜದಲ್ಲಿ ಜನಿಸಿರುವುದಕ್ಕೆ ನನಗೆ ಹೆಮ್ಮೆ ಇದೆ. ಆದರೆ, ನಮ್ಮ ಸಮಾಜಕ್ಕೆ ಈ ಸರ್ಕಾರದಲ್ಲಿ ನ್ಯಾಯ ಸಿಗುತ್ತಿಲ್ಲ. ಒಂದೇ ಒಂದು ಸಾಲಸೌಲಭ್ಯ ಸಿಗುತ್ತಿಲ್ಲ. ಫಲಾನುಭವಿಗಳು ಕಚೇರಿ ಸುತ್ತಾಡಿ ಸುತ್ತಾಡಿ ಸಾಕಾಗಿದೆ. ಅವರಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಇನ್ಮುಂದೆ ಇದೆಲ್ಲವನ್ನು ಕೇಳಿಕೊಂಡು, ನೋಡಿಕೊಂಡು ಸುಮ್ಮನೇ ಇರಲು ಸಾಧ್ಯವಿಲ್ಲ ಎಂದರು.ನಿಮ್ಮ ಸರ್ಕಾರದಲ್ಲಿ ಏನು ಕೊಟ್ಟಿದ್ದಿರಿ-ಶಾಸಕ:

ಸಹೋದರಿ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಈ ಸರ್ಕಾರದಲ್ಲಿ ಒಂದೇ ಒಂದು ಗಾಡಿ ನೀಡಿಲ್ಲ ಎನ್ನುತ್ತಾರೆ. ಆದರೆ, ತಮ್ಮ ಸರ್ಕಾರದ ಅವಧಿಯಲ್ಲಿ ಏನು ಕೊಟ್ಟಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನೆ ಮಾಡಿದರು.

ಹೇಮಲತಾ ನಾಯಕ ಮಾತಿಗೆ ತಿರುಗೇಟು ನೀಡಿದ ಶಾಸಕ ರಾಘವೇಂದ್ರ ಹಿಟ್ನಾಳ, ಎಲ್ಲಾ ಜಾತಿಯಲ್ಲಿಯೂ ಬಡವರು ಇದ್ದಾರೆ. ಬಸವಣ್ಣ, ಅಂಬೇಡ್ಕರ್ ಎಲ್ಲರಿಗೂ ಸಮಾನತೆ ಸಿಗುವಂತಾಗಬೇಕು ಎಂದು ಹೋರಾಟ ಮಾಡಿದ್ದಾರೆ. ಅದಾಗಬೇಕು. ಎಲ್ಲ ಸಮುದಾಯದಲ್ಲಿಯೂ ಇರುವ ಬಡವರಿಗೂ ನ್ಯಾಯ ಸಿಗುವಂತೆ ಆಗಬೇಕು ಎಂದರು.

ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ, ಹಿಂದುಳಿದವರಿಗೆ ಸಾಕಷ್ಟು ಅನುಕೂಲವಾಗಿದೆ. ಎಸ್ಟಿ ಸಮುದಾಯಕ್ಕೆ ವಿಶೇಷ ಕಾಳಜಿ ತೋರಿಸಿದ್ದಾರೆ. ಆದರೂ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ಮಾಡಿದರು.

ವಾಲ್ಮೀಕಿ ಸಮಾಜದ ಬಗ್ಗೆ ನನಗೆ ಅಪಾರ ಕಾಳಜಿ ಇದೆ. ನಾನು ಮೂರು ಬಾರಿ ಗೆಲ್ಲಲು ಸಮಾಜದ ಕೊಡುಗೆ ಸಾಕಷ್ಟಿದೆ. ಅದರ ಋಣ ತೀರಿಸುತ್ತೇನೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ವಾಲ್ಮೀಕಿ ಭವನಕ್ಕೆ ಅಗತ್ಯ ಅನುದಾನ ನೀಡುವುದು ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಖಡಕ್ ಆಗಿಯೇ ಹೇಳಿದರು. ಇದಾದ ಮೇಲೆ ಶಿವರಾಜ ತಂಗಡಗಿ ಅವರು ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಏನು ನೀಡಿದೆ, ಅದರಲ್ಲೂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಏನು ಕೊಡಲಾಗಿದೆ ಎಂದು ಎಳೆ ಎಳೆಯಾಗಿ ಬಿಡಿಸಿಟ್ಟರು.