ಸಂಭ್ರಮದ ವರ ಮಹಾಲಕ್ಷ್ಮೀ ಪೂಜೆ

| Published : Aug 17 2024, 12:52 AM IST

ಸಾರಾಂಶ

ತಾಚರಣೆಗೆ ಒಂದು ವಾರ ಮೊದಲಿಂದಲೇ ಸಿದ್ಧತೆ ಮಾಡಿಕೊಂಡ ಮಹಿಳೆಯರು

ಗಜೇಂದ್ರಗಡ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಿಳೆಯರು ಮನೆಯಲ್ಲಿ ಶುಕ್ರಗೌರಿ ವ್ರತ, ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು.

ಬೆಳಗ್ಗೆ ಮನೆ ಶುಚಿಗೊಳಿಸಿ,ತಳಿರು ತೋರಣಗಳಿಂದ ಸಿಂಗರಿಸಿ,ದೇವರ ಮನೆಯಲ್ಲಿ ಲಕ್ಷ್ಮೀದೇವಿ ಪ್ರತಿಷ್ಠಾಪನೆ ಮಾಡಿ ಬಾಳೆದಿಂಡು, ಕಬ್ಬು,ಹಣ್ಣು ಹಾಗೂ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು.

ಈ ಪೂಜೆಯಿಂದ ಸುಖ,ಸಮೃದ್ಧಿ ಸೇರಿದಂತೆ ಇಷ್ಟಾರ್ಥಗಳು ನೆರವೇರುವುದೆಂಬ ನಂಬಿಕೆ. ವರಮಹಾಲಕ್ಷ್ಮೀ ವ್ರತವನ್ನು ಕನ್ಯೆಯರು ಮತ್ತು ವಿವಾಹಿತ ಮಹಿಳೆಯರು ಶ್ರದ್ಧೆಯಿಂದ ಆಚರಿಸುತ್ತಾರೆ. ಈ ವ್ರತಾಚರಣೆಗೆ ಒಂದು ವಾರ ಮೊದಲಿಂದಲೇ ಸಿದ್ಧತೆ ಮಾಡಿಕೊಂಡ ಮಹಿಳೆಯರು, ಬೆಳಗ್ಗೆ ಮಡಿಯುಟ್ಟು, ಮನೆ ಅಂಗಳ ಸಾರಿಸಿ, ರಂಗೋಲಿ ಹಾಕಿ ಬಾಗಿಲುಗಳನ್ನು ಹೂವು, ತಳಿರು ತೋರಣಗಳಿಂದ ಶೃಂಗರಿಸಿದ್ದರು. ಬಳಿಕ ಮನೆಗಳಲ್ಲಿ ಮಹಾಲಕ್ಷ್ಮೀ ಪ್ರತಿಷ್ಠಾಪಿಸಿ ಅರಿಶಿಣ ಕುಂಕುಮ, ಹೊಸ ಸೀರೆ ಕುಪ್ಪಸ, ನಾನಾ ಪುಷ್ಪ, ಚಿನ್ನದ ಒಡವೆಗಳಿಂದ ಅಲಂಕರಿಸಿ, ದೀಪ, ಧೂಪ ಹಾಕಿ ಪೂಜಿಸಿದರು. ಬಗೆ ಬಗೆಯ ಹಣ್ಣು, ಹೋಳಿಗೆ, ಕರ್ಜಿಕಾಯಿ, ಅಡುಗೆ ತಯಾರಿಸಿ ನೈವೇದ್ಯ ಅರ್ಪಿಸಿ ವರ ಮಹಾಲಕ್ಷ್ಮೀ ಪುಸ್ತಕ ಓದಿ ಮಂಗಳಾರತಿ ಮಾಡಿದರು.

ಪೂಜೆ ನಂತರ ಮುತ್ತೈದೆಯರಿಂದ ಮಹಾಲಕ್ಷ್ಮೀಗೆ ಆರತಿ ಬೆಳಗಿಸಿ ಉಡಿತುಂಬಿ,ಸಿಹಿ ಊಟ ಉಣಬಡಿಸಿದರು. ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಪಟ್ಟಣದ ಮಾರುಕಟ್ಟೆಯಲ್ಲಿ ಹಣ್ಣು, ಹೂ ಸೇರಿದಂತೆ ಪೂಜೆಗೆ ಬೇಕಾಗುವ ಸಾಮಗ್ರಿಗಳ ವ್ಯಾಪಾರ ಜೋರಾಗಿತ್ತು.