ಮಹಾಲಯ ಅಮಾವಾಸ್ಯೆ: ಅಗಲಿದ ಹಿರಿಯರಿಗೆ ಪಿತೃಪಕ್ಷದ ಪಿಂಡ ಪ್ರದಾನ

| Published : Oct 03 2024, 01:39 AM IST

ಮಹಾಲಯ ಅಮಾವಾಸ್ಯೆ: ಅಗಲಿದ ಹಿರಿಯರಿಗೆ ಪಿತೃಪಕ್ಷದ ಪಿಂಡ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ಕಾವೇರಿ ನದಿ ತೀರದ ಸ್ನಾನಘಟ್ಟದಲ್ಲಿ ಅಗಲಿದ ಪೂರ್ವಿಕರಿಗೆ ಪಿಂಡಪ್ರದಾನ ಮಾಡಲು ಬಳಿ ಜನರು ನದಿಗಿಳಿದು ಪೂಜೆ ಸಲ್ಲಿಸಿದರು. ಹಿಂದಿನಿಂದಲೂ ಪಶ್ಚಿಮವಾನಿ ಸ್ಥಳ ಪವಿತ್ರ ಸ್ಥಳವೆಂಬ ಖ್ಯಾತಿಗೆ ಪಾತ್ರವಾಗಿರುವುದರಿಂದ ಈ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಾಗಿ ಅಸ್ಥಿ ವಿಸರ್ಜನೆ, ಪಿಂಡ ತರ್ಪಣ ಮಾಡುವುದು ಸಂಪ್ರದಾಯವಾಗಿ ಬೆಳೆದುಕೊಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಹಾಲಯ ಅಮಾವಾಸ್ಯೆ ಅಂಗವಾಗಿ ಪಟ್ಟಣದ ಕಾವೇರಿ ನದಿ ತಟದ ವಿವಿಧೆಡೆಗಳಲ್ಲಿ ಅಗಲಿದ ಹಿರಿಯರಿಗೆ ಪಿತೃಪಕ್ಷದ ಪಿಂಡ ಪ್ರಧಾನದ ಆಚರೆ ಕಾರ್ಯಗಳು ನಡೆದವು.

ಪಟ್ಟಣದ ಕಾವೇರಿ ನದಿ ತೀರಗಳಾದ ಪಶ್ಚಿಮ ವಾಹಿನಿ, ಸ್ನಾನಘಟ್ಟ, ಸಂಗಮ, ಗೋಸಾಯ್ ಘಾಟ್ ಸೇರಿದಂತೆ ಹಲವು ಕಡೆಗಳಲ್ಲಿ ರಾಜ್ಯದ ಹಲವು ಕಡೆಗಳಿಂದ ಬಂದಿದ್ದ ನೂರಾರು ಜನರು, ಅಗಲಿದ ತಮ್ಮ ಪೂರ್ವಿಕರಿಗೆ ಪಿಂಡ ಪ್ರದಾನ ಮಾಡಿ ತಿಲತರ್ಪಣ ಅರ್ಪಿಸಿ ಮೋಕ್ಷ ಸದ್ಗತಿ ಕೋರಿದರು.

ಹಿಂದಿನಿಂದಲೂ ಪಶ್ಚಿಮವಾನಿ ಸ್ಥಳ ಪವಿತ್ರ ಸ್ಥಳವೆಂಬ ಖ್ಯಾತಿಗೆ ಪಾತ್ರವಾಗಿರುವುದರಿಂದ ಈ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಾಗಿ ಅಸ್ಥಿ ವಿಸರ್ಜನೆ, ಪಿಂಡ ತರ್ಪಣ ಮಾಡುವುದು ಸಂಪ್ರದಾಯವಾಗಿ ಬೆಳೆದುಕೊಂಡು ಬಂದಿದೆ.

ಇಂದು ಪಶ್ಚಿಮವಾನಿ ಹೆದ್ದಾರಿ, ಕಾವೇರಿ ಸಂಘಮ, ಗೊಸಾಯಿಘಾಟ್ ಹಾಗೂ ಶ್ರೀರಂಗನಾಥ ದೇವಾಲಯದ ಬಳಿಯ ಸ್ನಾನಘಟ್ಟದ ಬಳಿಯಲ್ಲಿ ವಾಹನಗಳು ಆಗಮಿಸಿ ವಾಹನಗಳ ದಟ್ಟಣೆ ಕೂಡ ಪಟ್ಟಣದಲ್ಲಿ ಹೆಚ್ಚಾಗಿತ್ತು. ಜನ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿತ್ತು. ಸಾಲುಗಟ್ಟಿ ವಾಹನಗಳ ರಸ್ತೆಯುದ್ದಕ್ಕೂ ನಿಂತಿದ್ದವು.

ಮಹಾಲಯ ಅಮವಾಸ್ಯೆ ಆರಂಭವಾದ ದಿನದಿಂದಲೂ ಆಯುಧ ಪೂಜೆಯವರೆಗೂ ಈ ಸ್ಥಳಗಳಲ್ಲಿ ಪಿತೃಪಕ್ಷದ ಪಿಂಡ ಪ್ರದಾನ, ಪಿತೃ ದರ್ಪಣ ಕಾರ್ಯ ನಡೆಯುವುದರಿಂದ ಅಧಿಕವಾಗಿ ಕಾವೇರಿ ತಟಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿವೆ.ಎಲ್ಲೆಡೆ ಪಿತೃಪಕ್ಷ ಹಬ್ಬ ಆಚರಣೆ

ಬುಧವಾರ ಬೆಳಗ್ಗೆಯಿಂದಲೇ ಎಲ್ಲರ ಮನೆಗಳಲ್ಲಿ ಹಬ್ಬದ ಸಡಗರವಿತ್ತು. ಎಡೆ ಇಡುವ ಸಲುವಾಗಿ ತಿಂಡಿ-ತಿನಿಸುಗಳ ತಯಾರಿ ಬಿರುಸಿನಿಂದ ನಡೆದಿತ್ತು. ಎಲ್ಲಾ ಮಾಂಸದಂಗಡಿಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತುಂಬಿಕೊಂಡಿದ್ದರು. ಮಂಗಳವಾರ ರಾತ್ರಿಯಿಂದಲೇ ಅಂಗಡಿಯವರು ಕುರಿ, ಮೇಕೆ, ಕೋಳಿಗಳನ್ನು ಕಡಿಯಲು ಆರಂಭಿಸಿದರೂ ಬುಧವಾರ ಸಂಜೆಯಾದರೂ ಮಾಂಸಕ್ಕೆ ಬೇಡಿಕೆ ಬರುತ್ತಲೇ ಇತ್ತು. ಜಿಲ್ಲೆಯಲ್ಲಿ ಯಾವುದೇ ಹಬ್ಬದ ವೇಳೆ ಕುರಿ, ಮೇಕೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದ್ದರೂ ಮಹಾಲಯ ಅಮಾವಾಸ್ಯೆಯಲ್ಲಿ ಅದು ದುಪ್ಪಟ್ಟಾಗುತ್ತದೆ. ಹಬ್ಬದ ಪ್ರಯುಕ್ತ ನಗರ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಮಾಂಸದ ಅಂಗಡಿಗಳಲ್ಲಿ ನೂರಾರು ಕುರಿ-ಮೇಕೆಗಳನ್ನು ಕಡಿದು ನೇತುಹಾಕಿದ್ದರೂ ಮಾಂಸ ಕೆಲವೇ ಸಮಯದಲ್ಲಿ ಖರೀದಿಯಾಗಿ ಹೋಗುತ್ತಿತ್ತು. ಜನರಿಂದ ಮಾಂಸಕ್ಕೆ ಬೇಡಿಕೆ ಬರುತ್ತಿದ್ದರೂ ಅದಕ್ಕೆ ತಕ್ಕಂತೆ ಪೂರೈಸಲು ಸಾಧ್ಯವಾಗದೆ ಅಂಗಡಿಯವರೇ ಸುಸ್ತಾಗಿಹೋಗಿದ್ದರು.ಮಾರ್ಲಮಿ ಹಬ್ಬದ ಪ್ರಧಾನ ಭಕ್ಷ್ಯವೇ ಬಾಡೂಟ. ಹೀಗಾಗಿ ಹಬ್ಬದ ನೆಪದಲ್ಲಿ ಎಲ್ಲೆಡೆ ಬಾಡೂಟದ ಘಮಲು ತುಂಬಿತ್ತು. ಪ್ರತಿ ಮನೆಯಲ್ಲೂ ಅದ್ಧೂರಿಯಾಗಿ ಈ ಹಬ್ಬ ಆಚರಿಸಿ ಸಂಭ್ರಮಿಸಿದರು. ಮನೆಗೊಂದರಂತೆ ಮೇಕೆ-ಕುರಿಯನ್ನು ಬಲಿಕೊಟ್ಟು ಅತಿಥಿಗಳು, ನೆಂಟರಿಷ್ಟರಿಗೆ ಬಾಡೂಟ ಬಡಿಸಲಾಯಿತು.