ಮಹಾಲಿಂಗಪುರಮಹಾಲಿಂಗಪುರ ತಾಲೂಕಿಗಾಗಿ ಕಳೆದ ೧೪೩೧ ದಿನಗಳಿಂದ ನಡೆಯುತ್ತಿರುವ ಹೋರಾಟ ಕೇವಲ ಭರವಸೆಗೆ ಸೀಮಿತವಾಗಿದೆ. ಪ್ರತಿ ಬಾರಿಯೂ ಚಳಿಗಾಲದ ಅಧಿವೇಶನದ ವೇಳೆ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡುತ್ತಾ ಬಂದಿರುವ ಉಭಯ ಪಕ್ಷಗಳ (ಬಿಜೆಪಿ, ಕಾಂಗ್ರೆಸ್) ಸರ್ಕಾರಗಳು ಈ ಬಾರಿಯ ಬಜೆಟ್‌ನಲ್ಲೂ ನಿರಾಸೆ ಮೂಡಿಸಿದೆ.

ರಾಜೇಂದ್ರ ನಾವಿ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮಹಾಲಿಂಗಪುರ ತಾಲೂಕಿಗಾಗಿ ಕಳೆದ ೧೪೩೧ ದಿನಗಳಿಂದ ನಡೆಯುತ್ತಿರುವ ಹೋರಾಟ ಕೇವಲ ಭರವಸೆಗೆ ಸೀಮಿತವಾಗಿದೆ. ಪ್ರತಿ ಬಾರಿಯೂ ಚಳಿಗಾಲದ ಅಧಿವೇಶನದ ವೇಳೆ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡುತ್ತಾ ಬಂದಿರುವ ಉಭಯ ಪಕ್ಷಗಳ (ಬಿಜೆಪಿ, ಕಾಂಗ್ರೆಸ್) ಸರ್ಕಾರಗಳು ಈ ಬಾರಿಯ ಬಜೆಟ್‌ನಲ್ಲೂ ನಿರಾಸೆ ಮೂಡಿಸಿದೆ. ಒಂದು ಕಡೆ ಅಸಂಘಟಿತ ಹೋರಾಟ, ರಾಜಕೀಯ ಹಿತಾಸಕ್ತಿಯ ಕೊರತೆಯಿಂದ ತಾಲೂಕು ಹೋರಾಟಕ್ಕೆ ಹಿನ್ನಡೆಯಾಗಿದೆ ಎಂಬುವುದು ಹಲವರ ಮಾತು.

ಹಲವು ದಶಕಗಳ ಹಿಂದೆ ಆರಂಭವಾದ ತಾಲೂಕು ಹೋರಾಟ ಮಧ್ಯೆ ಮೌನವಾಗಿತ್ತು. ಮಹಾಲಿಂಗಪುರ ಸುತ್ತಲಿನ ಹತ್ತಾರು ಹಳ್ಳಿಗಳನ್ನು ತೇರದಾಳ ತಾಲೂಕು ವ್ಯಾಪ್ತಿಗೆ ಸೇರಿಸುವ ನಿರ್ಧಾರ ಮಾಡಿದಾಗ ಅದನ್ನು ವಿರೋಧಿಸಲು ಮತ್ತೆ ತಾಲೂಕು ಹೋರಾಟದ ಕಿಡಿ ಕಿಚ್ಚಾಗಿ ಬೆಳೆಯಿತು. ಪರಿಣಾಮ ತೇರದಾಳ ತಾಲೂಕು ವ್ಯಾಪ್ತಿಗೆ ಸೇರಲಿದ್ದ ಮಹಾಲಿಂಗಪುರ ಭಾಗದ ಹಳ್ಳಿಗಳನ್ನು ಕೈಬಿಡಲಾಯಿತು. ಆದರೆ ಜನ ಮಹಾಲಿಂಗಪುರ ತಾಲೂಕಿನ ಹೋರಾಟವನ್ನು ಮಾತ್ರ ಕೈ ಬಿಡಲಿಲ್ಲ.

ಸರ್ಕಾರ ಮತ್ತು ಜನಪ್ರತಿನಿಧಿಗಳು ತಾಲೂಕು ಬೇಡಿದವರಿಗೆ ಹೋಬಳಿ ಮಂಜೂರು ಮಾಡುವುದಾಗಿ ಭರವಸೆ ನೀಡಿ ಹೋರಾಟ ಹಿಂಪಡೆಯುವಂತೆ ಮನವಿ ಮಾಡಿದರೂ ಹೋರಾಟಗಾರರು ಪಟ್ಟು ಸಡಿಸಲಿಲ್ಲ. ೨೦೨೬ರಲ್ಲಿ ಹೊಸ ಕ್ಷೇತ್ರಗಳ ವಿಂಗಡಣೆಯಾಗುವವರೆಗೂ, ಹೊಸ ಜನಗಣತಿ ಆಗುವವರೆಗೂ ಹೊಸ ತಾಲೂಕು ರಚನೆಯಾಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತ ಹೋರಾಟಗಾರರು, ಜನಪ್ರತಿನಿಧಿಗಳು ಸಭೆ ನಡೆಸಿ ಹೋಬಳಿ ಬೇಡ, ತಾಲೂಕು ಕೇಂದ್ರವೇ ಬೇಕು ಎಂದು ಪಟ್ಟು ಹಿಡಿದು ಧರಣಿ ಮುಂದುವರೆಸಿದ್ದಾರೆ. ಹಲವು ಸಲ ಮಹಾಲಿಂಗಪುರ ಬಂದ್ ಮಾಡಿದಾಗಲೂ ಸಚಿವರು ಅಥವಾ ಅಧಿಕಾರಿ ಸ್ಥಳಕ್ಕೆ ಆಗಮಿಸಿ ಸಿಎಂಗೆ ಭೇಟಿ ಮಾಡಿಸಿ ಭರವಸೆ ನೀಡಿ ಬಂದ್ ಹಿಂಪಡೆಯುವಂತೆ ಮಾಡುತ್ತಲೇ ಬಂದಿದ್ದಾರೆ.

೩೬ ವರ್ಷಗಳ ಬೇಡಿಕೆಗಾಗಿ ೧೪೩೧ ದಿನಗಳವರೆಗೆ ಹೋರಾಟ ನಿರಂತರ ಮುಂದುವರೆದಿದೆ. ಈ ಅವಧಿಯಲ್ಲಿ ನಾಲ್ಕಾರು ಬಜೆಟ್ ಮಂಡನೆಯಾಗಿವೆ. ಈ ವರ್ಷದ ಬಜೆಟ್‌ನಲ್ಲಾದರೂ ಮಹಾಲಿಂಗಪುರ ತಾಲೂಕು ಘೋಷಣೆಯಾಗಲಿದೆ ಎಂಬುದು ಎಲ್ಲರ ಆಶಯವಾಗಿತ್ತು. ಆದರೆ ಪ್ರಸಕ್ತ ಬಜೆಟ್‌ನಲ್ಲಿ ಹೊಸ ತಾಲೂಕು ರಚನೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಹೋರಾಟಗಾರರಿಗೆ ನಿರಾಸೆ ಉಂಟು ಮಾಡಿದೆ. ತಾಲೂಕು ಹೋರಾಟ ಸಮಿತಿ ಉಗ್ರ ಹೋರಾಟಕ್ಕೆ ಕೈ ಹಾಕುತ್ತದೆಯೋ ಅಥವಾ ಮುಂಬರುವ ಚುನಾವಣೆಯಲ್ಲಿ ಹೊಡೆತ ಕೊಡುವ ನಿರ್ಧಾರ ಮಾಡುತ್ತದೆಯೋ ಕಾದು ನೋಡಬೇಕಿದೆ. ಅಷ್ಟರಲ್ಲಿ ತಾಲೂಕು ಘೋಷಣೆಯಾದರೆ ಇವೆಲ್ಲ ಸಮಸ್ಯೆಗಳು ಬಗೆಹರಿಯಲಿದೆ ಎಂಬ ಆಶಾವಾದವೂ ಕಡೆ ಇದೆ.------

ಸುತ್ತಲೂ 15 ಗ್ರಾಮ ಮತ್ತು 2011ರ ಜನಗಣತಿಯಂತೆ 2 ಲಕ್ಷ ಜನಸಂಖ್ಯೆ ಹೊಂದಿರುವ ಮಹಾಲಿಂಗಪುರ ಪಟ್ಟಣ ತಾಲೂಕು ಕೇಂದ್ರವಾಗಲು ಯೋಗ್ಯವಿದೆ ಎಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ಮಾಹಿತಿಯನ್ನೂ ರವಾನೆ ಮಾಡಿದ್ದಾರೆ. ತಾಲೂಕು ಕೇಂದ್ರವಾಗಿ ಘೋಷಿಸುವಂತೆ ಉತ್ತರ ಕರ್ನಾಟಕದ ಬಹುತೇಕ ಶಾಸಕ, ಸಚಿವರಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇತ್ತೀಚೆಗೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ ಅವರು ಸರ್ಕಾರದ ಅಪರ ಮುಖ್ಯಮಂತ್ರಿ ಕಾರ್ಯದರ್ಶಿ ಅವರಿಗೆ ಆಗ್ರಹಿಸಿ ಪತ್ರ ನೀಡಿದ್ದರು. ಈ ವರ್ಷದ ಬಜೆಟ್‌ನಲ್ಲಿ ತಾಲೂಕು ಘೋಷಣೆಯ ಭರವಸೆಯಿತ್ತು, ಆದರೆ ಅದು ನಿರಾಸೆಯಾಗಿದೆ.

-ಸಂಗಪ್ಪ ಹಲ್ಲಿ, ಅಧ್ಯಕ್ಷರು ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ.

------

ತಾಲೂಕು ಹೋರಾಟಕ್ಕೆ ಮಹಾಲಿಂಗಪುರ ಹಾಗೂ ಸುತ್ತಲಿನ ೧೫ ಗ್ರಾಮಗಳ ಜನತೆ ಪಕ್ಷಾತೀತ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಕ್ಷಗಳ ಹಾಲಿ, ಮಾಜಿ ಶಾಸಕರು, ಸಚಿವರು, ಪಕ್ಷದ ಮುಖಂಡರು ಹೋರಾಟ ವೇದಿಕೆಗೆ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ತಾಲೂಕು ಹಾರಾಟ ವೇದಿಕೆ ಹಾಗೂ ಸರ್ವಪಕ್ಷಗಳ ನಿಯೋಗದಿಂದ ಹಲವು ಬಾರಿ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆದರೂ ನಿರಾಶೆ ಏಕೆ ಎಂಬುದು ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಖಚಿತ.

-ಗಂಗಾಧರ ಮೇಟಿ, ತಾಲೂಕು ಹೋರಾಟಗಾರ ಹಾಗೂ ರೈತ ಸಂಘ ಹಸಿರು ಸೇನೆಯ ರಾಜ್ಯ ಸಂಚಾಲಕ

----

ಸರಕಾರ, ಸಚಿವರು, ಹೋರಾಟ ಸಮಿತಿ ಅಧ್ಯಕ್ಷ, ಕಾರ್ಯದರ್ಶಿ, ಹೋರಾಟ ವೇದಿಕೆಯ ಸ್ಥಳ ಬದಲಾದರೂ ಸರಕಾರಗಳ ಜಡತ್ವ ಅಥವಾ ಬಿಗಿ ನಿಲುವು ಬದಲಾಗಿಲ್ಲ. ಹೋರಾಟಕ್ಕೆ ಬರೀ ಭರವಸೆಯಷ್ಟೇ ಸಿಗುತ್ತಿದೆ ಹೊರತು ಬೇಡಿಕೆ ಈಡೇರುತ್ತಿಲ್ಲ. ನಮ್ಮ ಪಟ್ಟಣ ಸರ್ವ ರೀತಿಯಲ್ಲೂ ತಾಲೂಕು ಘೋಷಣೆಗೆ ಯೋಗ್ಯವಾಗಿದೆ. ಸರ್ಕಾರ ತಾಲೂಕು ಹೋರಾಟಗಾರರ ಮನವಿಗೆ ಇದುವರೆಗೂ ಸ್ಪಂದಿಸದಿರುವುದು ವಿಷಾದನೀಯ ಸಂಗತಿ.

- ನಿಂಗಪ್ಪ ಬಾಳಿಕಾಯಿ, ತಾಲೂಕು ಹೋರಾಟಗಾರ