ಕನ್ನಡಪ್ರಭ ವಾರ್ತೆ ಹಿರಿಯೂರು

ಮೊದಲ ಬಾರಿಗೆ ಸಂಗೀತಕ್ಕೆ ಹೊಸ ರಾಗ, ತಾಳ ನೀಡಿದಂತಹ ಕೀರ್ತಿ ಮಹರ್ಷಿ ಮಾತಂಗ ಮುನಿಯವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಅಭಿಪ್ರಾಯಪಟ್ಟರು.

ನಗರದ ನೆಹರೂ ಮೈದಾನದಲ್ಲಿರುವ ರೋಟರಿ ಸಭಾ ಭವನದಲ್ಲಿ ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಪುರಂದರದಾಸರು, ಕನಕದಾಸರು, ತ್ಯಾಗರಾಜ ಮಹಾಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಜಿಲ್ಲಾಮಟ್ಟದ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತಕ್ಕೆ ಮೊದಲು ಯಾವುದೇ ರಾಗ,ತಾಳ ಇರಲಿಲ್ಲ. ಹಕ್ಕಿಗಳ ಚಿಲಿಪಿಲಿ ಗಾನ, ಹರಿಯುವ ನೀರಿನ ಜುಳು ಜುಳುನಾದ, ಸುಯ್ ಎಂದು ಬೀಸುವ ತಣ್ಣನೆಯ ಗಾಳಿಯ ಸುನಾದ ಇವುಗಳನ್ನು ಆದರಿಸಿ ಮೊದಲಿಗೆ ಕ್ರಿ.ಶ 8ನೇ ಶತಮಾನದಲ್ಲಿ ಬದುಕಿದ್ದ ಮಹರ್ಷಿ ಮಾತಂಗ ಮುನಿಗಳು ಸಂಗೀತಕ್ಕೆ ಹೊಸ ರಾಗ ತಾಳ ನೀಡಿದರು.

ಇವುಗಳನ್ನು ಆಧರಿಸಿ ಇಂದು ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಪಾಶ್ಚಿಮಾತ್ಯ ಸಂಗೀತ ರೂಪುಗೊಂಡಿದೆ. ಆದ ಕಾರಣ ಮಹರ್ಷಿ ಮಾತಂಗ ಮುನಿಯವರನ್ನು ಸಂಗೀತದ ಪಿತಾಮಹ ಎಂದು ಕರೆಯಲಾಗುತ್ತಿದ್ದು ಸಂಗೀತಕ್ಕೆ ಮಹರ್ಷಿ ಮಾತಂಗ ಮುನಿಯವರ ಕೊಡುಗೆ ಅಪಾರವಾಗಿದೆ. ಹಾಗೆಯೇ ಸಂಗೀತಕ್ಕೆ ಗದುಗಿನ ಪುಟ್ಟರಾಜ ಗವಾಯಿಗಳು, ಪಂಚಾಕ್ಷರಿ ಗವಾಯಿಗಳು, ಭೀಮಸೇನ ಜೋಶಿ, ಮಲ್ಲಿಕಾರ್ಜುನ್ ಮನ್ಸೂರ್, ಗಂಗೂಬಾಯಿ ಹಾನಗಲ್, ಬಿಸ್ಮಿಲ್ಲಾ ಖಾನ್, ಹುಬ್ಬಳ್ಳಿಯ ಮೂರು ಸಾವಿರ ಮಠ,ಸುತ್ತೂರು ಮಠ,ಬಾಳೆಹೊನ್ನೂರಿನ ರಂಭಾಪುರಿ ಪೀಠ, ತುಮಕೂರಿನ ಸಿದ್ಧಗಂಗಾ ಮಠ, ಚಿತ್ರದುರ್ಗದ ಮುರುಘಾಮಠ, ಸಿರಿಗೆರೆ ಮಠ, ಸಾಣಿಹಳ್ಳಿ ಮಠ ಹಾಗೂ ಇತರೆ ಸಂಘ-ಸಂಸ್ಥೆಗಳು ಸಂಗೀತಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ ಎಂದರು.


ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆಲೂರು ಹನುಮಂತ ರಾಯಪ್ಪ ಮಾತನಾಡಿ, ಸಂಗೀತ ಒಂದು ತಪಸ್ಸು, ಸಂಗೀತ ಹೇಳುವುದರಿಂದ ಮತ್ತು ಕೇಳುವುದರಿಂದ ಮಾನಸಿಕ ನೆಮ್ಮದಿ ಏಕಾಗ್ರತೆ ದೊರೆಯುತ್ತದೆ. ಸಂಗೀತಕ್ಕೆ ರೋಗ ರುಜಿನ ದೂರ ಮಾಡುವ ಶಕ್ತಿ ಇದೆ. ಆದರಿಂದ ಸಂಗೀತ ಒಂದು ದಿವ್ಯ ಔಷಧಿಯಾಗಿದೆ ಎಂದರು.

ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಪ್ರಾಂಶುಪಾಲ ವಿದ್ವಾನ್ ಆರ್.ತಿಪ್ಪೇಸ್ವಾಮಿ ಮಾತನಾಡಿ, ಒತ್ತಡ ಮುಕ್ತ ಬದುಕಿಗೆ ಸಂಗೀತ ಸಹಕಾರಿಯಾಗಿದ್ದು ಮನಸ್ಸನ್ನು ಹಗುರಗೊಳಿಸಿ ಹತೋಟಿಯಲ್ಲಿಡಲು ಪ್ರೇರಣೆ ನೀಡುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಸ್ತು ಸಂಯಮ ಕಲಿಸಿ ಭಾವೈಕ್ಯತೆ ಬೆಳೆಸಲು ಸಂಗೀತ ಸ್ಪೂರ್ತಿಯಾಗುತ್ತದೆ ಎಂದರು.

ಇದೇ ವೇಳೆ ಎನ್. ಜಗದಾಂಬ, ಟಿ.ಸುಲೋಚನ, ಶಶಿಪ್ರಕಾಶ್, ರಮಾ, ಕವಿತಾ, ಎಚ್.ವೇದ ಪುಷ್ಪ, ಅಶ್ವಿನಿ ಸುರೇಂದ್ರ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಮಹಿಳಾ ಸಾಧಕರಾದ ಪಾರ್ವತಮ್ಮ, ಸೀತಮ್ಮ, ಮಂಜುಳಾ, ಸೌಮ್ಯ, ಎಂ.ವಿ.ನಾಗರತ್ನಮ್ಮ, ಎಂ.ಸಿದ್ದಗಂಗಮ್ಮ. ವೇದ ಪುಷ್ಪ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಧ್ಯಕ್ಷ ಎಲ್.ಆನಂದ ಶೆಟ್ಟಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ರಾಧ ಎಚ್.ಎಸ್. ಸುಂದರ್ ರಾಜ್, ರೋಟರಿ ಅಧ್ಯಕ್ಷ ವರುಣ್, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ. ನಿಜಲಿಂಗಪ್ಪ, ಕಾರ್ಯದರ್ಶಿ ಬಿ.ಟಿ. ಶಂಕರ್ ಲಿಂಗಯ್ಯ, ಶಿಕ್ಷಕ ಗೌರೀಶ್, ಮಲ್ಲೇಶಪ್ಪ, ಜೋಗಪ್ಪ,ಹೆಚ್.ಆರ್. ರಂಗನಾಥ್,ದೇವರಾಜ್ ಮೂರ್ತಿ,ನಾಗಸುoದ್ರಮ್ಮ, ಸುಬ್ಬಣ್ಣ ಶೆಟ್ಟಿ, ಎನ್. ಶಿವಲಿಂಗಪ್ಪ, ರಂಗಸ್ವಾಮಿ, ಎಸ್. ಅಭಿಷೇಕ್,ನವೀನ್ ಏನ್. ಜಗದಾಂಬ, ಎನ್ ಬಸವರಾಜ್, ಎಂ.ಬಿ.ಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.