ಮಹಾತ್ಮಾ ಗಾಂಧಿಜೀ ಹುತಾತ್ಮ ದಿನ: ಸೌಹಾರ್ದತಾ ಮಾನವ ಸರಪಳಿ

| Published : Jan 31 2024, 02:18 AM IST

ಸಾರಾಂಶ

ಮಹಾತ್ಮಾ ಗಾಂಧಿಜೀ ಹುತಾತ್ಮ ದಿನದ ಅಂಗವಾಗಿ ಸೌಹಾರ್ದ ಕರ್ನಾಟಕ, ಧಾರವಾಡ ವೇದಿಕೆ ಧಾರವಾಡದ ಕರ್ನಾಟಕ ಕಾಲೇಜು ವೃತ್ತದಿಂದ ಜುಬ್ಲಿ ವೃತ್ತದ ವರೆಗೆ ಬೃಹತ್ ಮಾನವ ಸರಪಳಿ ನಿರ್ಮಿಸಲಾಯಿತು.

ಧಾರವಾಡ: ದೇಶದ ಭಾವೈಕ್ಯತೆಗಾಗಿ ನೂರಾರು ಮಹಾನ್ ವ್ಯಕ್ತಿಗಳು ಹುತಾತ್ಮರಾಗಿದ್ದಾರೆ. ಈ ಮಹಾನ್ ಹುತಾತ್ಮರಿಗೆ ನಿಜವಾದ ಗೌರವ ಸಲ್ಲಿಸಬೇಕಾದರೆ ದೇಶದ ಪ್ರಜಾಪ್ರಭುತ್ವ, ಭಾವೈಕ್ಯತೆ, ಸಹಬಾಳ್ವೆ, ಸಂವಿಧಾನದ ಆಶಯಗಳನ್ನು ಕಾಪಾವುದು, ಫ್ಯಾಸಿಸ್ಟ್ ಹಾಗೂ ವಿಛಿದ್ರಕಾರಿ ಶಕ್ತಿಗಳನ್ನು ಹಿಮ್ಮೆಟ್ಟಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಬೇಕು ಎಂದು ಹಿರಿಯ ಸಾಹಿತಿ, ಪತ್ರಕರ್ತ ಡಾ. ರಂಜಾನ್ ದರ್ಗಾ ಹೇಳಿದರು.

ಮಹಾತ್ಮಾ ಗಾಂಧಿಜೀ ಹುತಾತ್ಮ ದಿನದ ಅಂಗವಾಗಿ ಸೌಹಾರ್ದ ಕರ್ನಾಟಕ, ಧಾರವಾಡ ವೇದಿಕೆ ಧಾರವಾಡದ ಕರ್ನಾಟಕ ಕಾಲೇಜು ವೃತ್ತದಿಂದ ಜುಬ್ಲಿ ವೃತ್ತದ ವರೆಗೆ ಸಂಘಟಿಸಿದ್ದ ಬೃಹತ್ ಮಾನವ ಸರಪಳಿಗೆ ಚಾಲನೆ ನೀಡಿ ಮಾತನಾಡಿದರು.

ಚಿಂತಕ ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ ಮಾತನಾಡಿ, ಕೋಮುವಾದಿ ಕಾರ್ಪೋರೇಟ್ ವ್ಯವಸ್ಥೆ, ಅನೈತಿಕ ರಾಜಕಾರಣ ದೇಶದ ಮೌಲ್ಯಗಳನ್ನು ನಾಶಮಾಡುತ್ತಿದೆ. ಸತ್ಯವನ್ನು ಮರೆಮಾಚಿ ಅಸತ್ಯವನ್ನು ಬಿಂಬಿಸಲಾಗುತ್ತಿದೆ. ವಿಜ್ಞಾನದ ಬದಲಾಗಿ ಅಜ್ಞಾನ ತಾಂಡವವಾಡುತ್ತಿದೆ. ಕೌರ್ಯವನ್ನು ಸೌರ್ಯವೆಂದು ಬಿಂಭಿಸಲಾಗುತ್ತಿದೆ. ನೂರಾರು ಮಹಾನ್ ವ್ಯಕ್ತಿಗಳು ದೇಶಕ್ಕಾಗಿ ಹೋರಾಟ, ತ್ಯಾಗ ಮಾಡಿರುವುದನ್ನು ಮರೆಮಾಚಿ ದೇಶದ್ರೋಹಿಗಳನ್ನು ದೇಶಪ್ರೇಮಿಗಳು ಎಂದು ಬಿಂಬಿಸಲಾಗುತ್ತಿದೆ. ಈ ಹಿನ್ನೆಯಲ್ಲಿ ಜನರ ಕೂಡುಬಾಳ್ವೆ, ಸೌಹಾರ್ದತೆಯ ಪರಂಪರೆಯನ್ನು ಕಾಪಾಡಲು ಜಾಗೃತಿ ಮೂಡಿಸಲು ಮಾನವ ಸರಪಳಿಯಂತ ಸೌಹಾರ್ದ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಸೌಹಾರ್ದ ಕರ್ನಾಟಕದ ಸಂಚಾಲಕ ಮಹೇಶ ಪತ್ತಾರ, ಸಾಹಿತಿಗಳಾದ ಡಾ. ಸದಾಶಿವ ಮರ್ಜಿ, ಬಸವರಾಜ ಸೂಳಿಭಾವಿ ಮಾತನಾಡಿದರು.

ಬಿ.ಎನ್. ಪೂಜಾರಿ, ಎ.ಎಂ. ಖಾನ್, ಎಸ್.ಎಂ. ಬುಡನಖಾನ್, ಬಿ.ಐ. ಈಳಿಗೇರ, ಅತೀಕ್ ಸಂಗ್ರೇಶಕೊಪ್ಪ, ಜೋಷಫ್ ಮಲ್ಲಾಡಿ, ಗಂಗಾಧರ ಗಾಡದ, ಮುಸ್ತಾಕ ಹಾವೇರಿಪೇಟ, ಡಾ, ಲಿಂಗರಾಜ ಅಂಗಡಿ, ಪ್ರೊ. ಕೆ.ಎಸ್. ಕೌಜಲಗಿ, ಡಾ. ಅಫಜಲ್ ಭಾವಿಕಟ್ಟಿ, ಅನ್ನಪೂರ್ಣ ಮಡಿವಾಳರ, ಕೆ.ಎಚ್. ಪಾಟೀಲ, ಗಾಯತ್ರಿ ಹಡಪದ ವಿವಿಧ ಸಂಘಟನೆಗಳ ಮುಖಂಡರು, ಶಿಕ್ಷಕರು ಇದ್ದರು.