ಮಹಾವೀರರ ಅಂಹಿಸಾ ಮಾರ್ಗ ಬದುಕಿಗೆ ದಾರಿದೀಪ: ಡಾ.ವಿದ್ಯಾಕುಮಾರಿ

| Published : Apr 11 2025, 12:32 AM IST

ಸಾರಾಂಶ

ಗುರುವಾರ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜೈನ್ ಮಿಲನ್ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಭಗವಾನ್ ಮಹಾವೀರರ ಆದರ್ಶಗಳು ಇಂದಿನ ಕಾಲಘಟ್ಟಕ್ಕೆ ಅತೀ ಅವಶ್ಯವಾಗಿದ್ದು, ಅವರ ಮುಖ್ಯ ತತ್ವವಾದ ಅಹಿಂಸಾ ಮಾರ್ಗವನ್ನು ಪ್ರತಿಯೊಬ್ಬರು ಪಾಲಿಸಬೇಕು. ಮನುಷ್ಯ ತಾನು ಹೊಂದಿರುವ ಬದುಕಿನ ಬಗೆಗೆ ತೃಪ್ತಿ ಹೊಂದಬೇಕು ಎಂಬುದನ್ನು ಜಗತ್ತಿಗೆ ಸಾರಿದ ಅವರ ಚಿಂತನೆಗಳು ನಮ್ಮೆಲರಿಗೂ ದಾರಿದೀಪ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಗುರುವಾರ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜೈನ್ ಮಿಲನ್ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಭಗವಾನ್ ಮಹಾವೀರರ ಭಾವ ಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಪ್ರಸ್ತುತ ಸಮಯದಲ್ಲಿ ಮಹಾವೀರರ ಅಹಿಂಸ ತತ್ವಗಳು ಇನ್ನಷ್ಟು ಪ್ರಚಾರಗೊಳಿಸುವುದರಿಂದ ಜನರ ಶಾಂತಿಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.

ಪ್ರೊ. ವೃಷಭರಾಜ್ ಜೈನ್ ಉಪನ್ಯಾಸ ನೀಡಿ ಮಾತನಾಡಿ, ಸಾಮಾನ್ಯ ಜೀವನವನ್ನು ತೊರೆದು ಆಧ್ಯಾತ್ಮಿಕತೆ ಅಳವಡಿಸಿಕೊಂಡ ಮಹಾವೀರರು ಅಹಿಂಸೆಯೇ ಪರಮ ಧರ್ಮ ಎಂಬುದನ್ನು ನಂಬಿದವರು. ಅವರ 5 ತತ್ವಗಳಾದ ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ ಹಾಗೂ ಬ್ರಹ್ಮಚಾರ್ಯವನ್ನು ಅನುಸರಿಸುವುದರಿಂದ ಉತ್ತಮ ಜೀವನ ನಿರ್ಮಾಣ ಸಾಧ್ಯ ಎಂದು ತಮ್ಮ ತತ್ವಗಳಲ್ಲಿ ಸಾರಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜೈನ್ ಮಿಲನ್ ಅಧ್ಯಕ್ಷ ಡಾ.ನಿತಿನ್ ಪಾಟೇಲ್, ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್, ಜೈನ್ ಮಿಲನ್ ಪದಾಧಿಕಾರಿಗಳು, ಜಿಲ್ಲಾಡಳಿತದ ಸಿಬ್ಬಂದಿ ಮತ್ತು ಅಧಿಕಾರಿಗಳು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಇಲಾಖೆಯ ವರ್ಷಾ ಬಿ. ಕೋಟ್ಯಾನ್ ನಿರೂಪಿಸಿದರು. ಜೈನ್ ಮಿಲನ್ ನ ಕಾರ್ಯದರ್ಶಿ ಡಾ. ನಿತಿನ್ ಕುಮಾರ್ ವಂದಿಸಿದರು.