ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿ ಹೆಲೋಜನ್ ಕಾರ್ಪೊರೇಷನ್‌ಗಳು ‘ಬಾಹ್ಯಾಕಾಶ ಆಧರಿತ ಜೀವ ವೈದ್ಯಕೀಯ ಸಂಶೋಧನೆ’ಗಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿ ಹೆಲೋಜನ್ ಕಾರ್ಪೊರೇಷನ್‌ಗಳು ‘ಬಾಹ್ಯಾಕಾಶ ಆಧರಿತ ಜೀವ ವೈದ್ಯಕೀಯ ಸಂಶೋಧನೆ’ಗಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಸಂಸ್ಥೆಗಳು ಜಂಟಿಯಾಗಿ ಸುಧಾರಿತ ಬಯೋಮೆಟೀರಿಯಲ್‌ ಕುರಿತು ಸಂಶೋಧನೆ ನಡೆಸಲು, ಕಾರ್‍ಯಾಚರಣೆ ಸಿದ್ಧಪಡಿಸಲು ಮತ್ತು ಹೊಸ ಪ್ರಯೋಗಗಳನ್ನು ಕೈಗೊಳ್ಳಲು ಈ ಪಾಲುದಾರಿಕೆ ಸಹಕಾರಿಯಾಗಲಿದೆ. ಈ ಒಪ್ಪಂದದಡಿ ಮಾಹೆಯು ಬಾಹ್ಯಾಕಾಶ ಜೀವಶಾಸ್ತ್ರದ ಸಂಶೋಧನೆಯ ನೇತೃತ್ವ ವಹಿಸಲಿದ್ದು, ಹಂತ ಹಂತವಾಗಿ ಬಾಹ್ಯಾಕಾಶದಲ್ಲಿ ಜೀವಕೋಶಗಳ ಮಾದರಿ ಅಭಿವೃದ್ಧಿ ಮತ್ತು ಮೂಳೆ ಸವೆತದ ಅಧ್ಯಯನದ ಬಗ್ಗೆ ಈ ಸಹಯೋಗವು ಗಮನ ಹರಿಸಲಿದೆ. ಮಾಹೆಯು ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಪೂರಕವಾದ ಹೊಸ ಪ್ರಯೋಗಗಳನ್ನು ಸಿದ್ಧಪಡಿಸುವ ಗುರಿ ಹೊಂದಿದೆ. ಮುಖ್ಯವಾಗಿ ಭವಿಷ್ಯದಲ್ಲಿ ಸ್ಥಾಪನೆಯಾಗಲಿರುವ ‘ಭಾರತೀಯ ಅಂತರಿಕ್ಷ ನಿಲ್ದಾಣ’ದ ಮೂಲಕ ಶೂನ್ಯ ಗುರುತ್ವಾಕರ್ಷಣೆಯಲ್ಲಿ ದೀರ್ಘಕಾಲದವರೆಗೆ ಮತ್ತು ಶಾಶ್ವತವಾಗಿ ಸಂಶೋಧನೆಗಳನ್ನು ನಡೆಸಲು ಇದು ಸಹಾಯ ಮಾಡಲಿದೆ ಎಂದು ಮಾಹೆ ಪ್ರಕಟಣೆ ತಿಳಿಸಿದೆ.

ಮಾಹೆಯು ತನ್ನದೇ ಆದ ‘ಆರ್ಗನಾಯ್ಡ್’ (ಅಂಗಾಂಶ ಮಾದರಿ) ಸಂಶೋಧನೆಯನ್ನು ಹೆಲೋಜನ್ ಸಂಸ್ಥೆಯ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಲಿದೆ. ಇದು ಬಾಹ್ಯಾಕಾಶದಲ್ಲಿ ಬಯೋಮೆಟೀರಿಯಲ್‌ ಅಭಿವೃದ್ಧಿ, ಅವುಗಳ ವೈಜ್ಞಾನಿಕ ಅಧ್ಯಯನಕ್ಕೆ ನೆರವಾಗಲಿದೆ. ಮಾಹೆಯ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನ ಸಹ ಪ್ರಾಧ್ಯಾಪಕ ಡಾ. ಮಾನಶ್ ಕೆ. ಪಾಲ್ ಅವರು ಈ ಕಾರ್‍ಯಕ್ರಮದ ಮುಖ್ಯ ಸಂಶೋಧಕರಾಗಿ ಮಾರ್ಗದರ್ಶನ ನೀಡುವರು. ಇವರು ಮಾಹೆಯ ಸೆಂಟರ್ ಫಾರ್ ಆರ್ಗನಾಯ್ಡ್ ಬಯೋ ಎಂಜಿನಿಯರಿಂಗ್, ಬಯೋಪ್ರಿಂಟಿಂಗ್, ಬಯೋ ಬ್ಯಾಂಕಿಂಗ್ ಮತ್ತು ಬಯೋಮೆಡಿಕಲ್ ಸೈನ್ಸಸ್‌ನ ಸಂಯೋಜಕರೂ ಆಗಿದ್ದಾರೆ. ಈ ಒಪ್ಪಂದದ ಬಗ್ಗೆ ಮಾಹೆ ಕುಲಪತಿ ಲೆಜ (ಡಾ.) ಎಂ.ಡಿ. ವೆಂಕಟೇಶ್, ಜೀವ ವೈದ್ಯಕೀಯ ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಸಂದಿಸುವ ಕ್ಷೇತ್ರದಲ್ಲಿ, ಭವಿಷ್ಯಕ್ಕೆ ಪೂರಕವಾದ ಸಂಶೋಧನೆಗಳನ್ನು ನಡೆಸಲು ಮಾಹೆ ಸಿದ್ಧವಾಗಿದೆ ಎಂಬುದನ್ನು ಈ ಸಹಯೋಗವು ಸಾಬೀತುಪಡಿಸಿದೆ.

ಶೈಕ್ಷಣಿಕ ಜ್ಞಾನ ಮತ್ತು ವೈದ್ಯಕೀಯ ಅನುಭವವನ್ನು ಬಾಹ್ಯಾಕಾಶ ತಂತ್ರಜ್ಞಾನದೊಂದಿಗೆ ಬಳಸಿಕೊಳ್ಳುವ ಮೂಲಕ, ವಿಜ್ಞಾನದ ದೃಷ್ಟಿಯಿಂದ ನಿಖರವಾದ ಹಾಗೂ ಸಮಾಜಕ್ಕೆ ಉಪಯುಕ್ತವಾದ ಹೊಸ ಮಾಹಿತಿಯನ್ನು ಪಡೆಯುವುದು ಇದರಿಂದ ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಹೆಲೋಜನ್ ಕಾರ್ಪೊರೇಶನ್‌ನ ಸಿಇಒ ಶಿಶಿರ್ ಬಂಕಾಪುರ, ಮುಂದಿನ ತಲೆಮಾರಿನ ಜೀವ ವೈದ್ಯಕೀಯ ಸಂಶೋಧನೆಯಲ್ಲಿ ಮಹತ್ತರ ಸಾಧನೆ ಮಾಡಲು ಬಾಹ್ಯಾಕಾಶದ ‘ಶೂನ್ಯ ಗುರುತ್ವಾಕರ್ಷಣೆ’ ಬಳಸಿಕೊಳ್ಳಲು ಈ ಒಪ್ಪಂದ ಪ್ರಮುಖ ಹೆಜ್ಜೆಯಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗ ನಡೆಸಿದ ಅನುಭವವಿರುವ ಮಾಹೆಯ ಪರಿಣಿತ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ನಮಗೆ ಸಂತಸ ತಂದಿದೆ. ಇದು ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾದ ಸಹಯೋಗಗಳಲ್ಲಿ ಒಂದಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.