ಸಾರಾಂಶ
2023ರಲ್ಲಿ ಮಾಹೆಯ 19 ಸಂಶೋಧಕರು ಈ ಗೌರವ ಪಡೆದಿದ್ದರು. ಈ ವರ್ಷ 36 ಸಂಶೋಧಕರು ಗುರುತಿಸಲ್ಪಟ್ಟಿರುವುದು ಮಾಹೆಯ ಸಂಶೋಧಕರ ಉತ್ಕೃಷ್ಟತೆಯನ್ನು ತೋರಿಸುತ್ತದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ವಿಶ್ವಾದ್ಯಂತದ ಅಗ್ರ ವಿಜ್ಞಾನಿಗಳಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ )ನ 36 ಪ್ರಸಿದ್ಧ ಸಂಶೋಧಕರು ಗುರುತಿಸಲ್ಪಟ್ಟಿದ್ದಾರೆ.ಹಿಂದಿನ ವರ್ಷದಲ್ಲಿ ಜಾಗತಿಕ ಸಂಶೋಧನೆಗೆ ಈ ಸಂಶೋಧಕರು ನೀಡಿದ ಕೊಡುಗೆಗಳಿಗಾಗಿ ಖ್ಯಾತ ವಿದ್ವಾಂಸ ಪ್ರೊ. ಜಾನ್ ಪಿ.ಎ. ಐಯೋನಿಡಿಸ್ ಅವರು ಸೆ.16ರಂದು ಬಿಡುಗಡೆ ಮಾಡಿರುವ ‘ಆಗಸ್ಟ್ 2024 ಡಾಟಾ ಅಪ್‌ಡೇಟ್ ಫಾರ್ ಅಪ್‌ಡೇಟೆಡ್ ಸಾಯನ್ಸ್ - ವೈಡ್ ಆಥರ್ ಡಾಟಾಬೇಸ್ ಸ್ಟ್ಯಾಂಡರ್ಡೈಸ್ಡ್ ಸೈಟೇಶನ್ ಇಂಡಿಕೇಟರ್’ ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಗುರುತಿಸಲಾಗಿದೆ.
ಅಲ್ಲದೇ ಹೆಚ್ಚುವರಿಯಾಗಿ ಮಾಹೆಯ ಇತರ 6 ಸಂಶೋಧಕರು ಕೂಡ ಗಮನಾರ್ಹವಾಗಿ ತಮ್ಮ ವೃತ್ತಿಜೀವನದ ಕೊಡುಗೆಗಳಿಗಾಗಿ ಶ್ಲಾಘನೆಯನ್ನೂ ಪಡೆದಿದ್ದಾರೆ.2023ರಲ್ಲಿ ಮಾಹೆಯ 19 ಸಂಶೋಧಕರು ಈ ಗೌರವ ಪಡೆದಿದ್ದರು. ಈ ವರ್ಷ 36 ಸಂಶೋಧಕರು ಗುರುತಿಸಲ್ಪಟ್ಟಿರುವುದು ಮಾಹೆಯ ಸಂಶೋಧಕರ ಉತ್ಕೃಷ್ಟತೆಯನ್ನು ತೋರಿಸುತ್ತದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ಮಾಹೆಯ ಈ ಸಂಶೋಧಕರ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಹೆ ಉಪ ಕುಲಪತಿ ಲೆ.ಜ. (ಡಾ.) ಎಂ. ಡಿ. ವೆಂಕಟೇಶ್, ಇದು ಮಾಹೆಯ ಗಮನಾರ್ಹ ಸಾಧನೆಯಾಗಿದೆ ಮತ್ತು ನಮ್ಮ ಸಂಶೋಧಕರ ನಿರಂತರ ಜ್ಞಾನದ ಅನ್ವೇಷಣೆಯ ಪ್ರತಿಬಿಂಬವಾಗಿದೆ. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ವಿಶ್ವವಿದ್ಯಾನಿಲಯದ ಸ್ಥಾನವನ್ನು ಹೆಚ್ಚಿಸುವುದಲ್ಲದೆ ಜಾಗತಿಕ ಸಂಶೋಧನೆ ಮತ್ತು ನಾವೀನ್ಯತೆಯ ಗಡಿಗಳನ್ನು ಮೀರಿ ನಿಲ್ಲುತ್ತದೆ. ನಾವೀನ್ಯ ಸಂಶೋಧನೆಯನ್ನು ಬೆಂಬಲಿಸಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ಶೈಕ್ಷಣಿಕ ವಾತಾವರಣವನ್ನು ಉತ್ತೇಜಿಸಲು ನಾವು ಸದಾ ಬದ್ಧರಾಗಿದ್ದೇವೆ ಎಂದಿದ್ದಾರೆ.