ಸಾರಾಂಶ
ಮಣಿಪಾಲ ಮಾಹೆಯ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರ ಮತ್ತು ಭಾಷಾ ವಿಭಾಗಗಳ ವತಿಯಿಂದ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ‘ಕನ್ನಡ ಶಾಸ್ತ್ರೀಯ ಪಠ್ಯಗಳ ಹೊಸ ಓದು’ ಎಂಬ 2 ದಿನಗಳ ವಿಚಾರಸಂಕಿರಣ ಮಾಹೆಯ ಸರ್ವೋದಯ ಸಭಾಂಗಣದಲ್ಲಿ ಜರಗಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಾಹೆಯ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರ ಮತ್ತು ಭಾಷಾ ವಿಭಾಗಗಳ ವತಿಯಿಂದ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ‘ಕನ್ನಡ ಶಾಸ್ತ್ರೀಯ ಪಠ್ಯಗಳ ಹೊಸ ಓದು’ ಎಂಬ 2 ದಿನಗಳ ವಿಚಾರಸಂಕಿರಣ ಮಾಹೆಯ ಸರ್ವೋದಯ ಸಭಾಂಗಣದಲ್ಲಿ ಜರಗಿತು.ಈ ವಿಚಾರಸಂಕಿರಣದ ಪ್ರಧಾನ ಭಾಷಣ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು, ಕನ್ನಡ ಶಾಸ್ತ್ರೀಯ ಪಠ್ಯಗಳ ಹೊಸ ಅರಿವಿನ ಸಾಧ್ಯತೆಯನ್ನು ತೆರೆದಿಟ್ಟರು. ಶಾಸ್ತ್ರೀಯ ಪಠ್ಯಗಳ ಉಗಮ ಮತ್ತು ಪ್ರಸರಣಕ್ಕೆ ಜನಪದವೇ ಮೂಲವಾಗಿದ್ದು ಹಳೆಗನ್ನಡ ಕಾವ್ಯಗಳು ವಾಚನ, ಪ್ರದರ್ಶನಗಳಂಥ ಮಾಧ್ಯಮಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿವೆ. ಹಾಗಾಗಿ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಶಾಸ್ತ್ರೀಯ ಪಠ್ಯಗಳನ್ನು ಬೋಧನೆ ಮಾಡುವಾಗ ನವೀನ ಮಾದರಿ ಅನುಸರಿಸುವ ಅಗತ್ಯವಿದ್ದು ಜನಪದೀಯ ವಿಧಾನಗಳನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದರು.
ಹಳೆಗನ್ನಡ ಪಠ್ಯಗಳ ಓದಿನ ಆಸಕ್ತಿಯನ್ನು ಹೆಚ್ಚಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಡಾ. ಬಿಳಿಮಲೆ ಅವರು, ಶಾಸ್ತ್ರೀಯ ಪಠ್ಯಗಳು ಮರುನಿರೂಪಣೆ (ರಿ ಟೆಲ್ಲಿಂಗ್) ಗಳ ಮೂಲಕ ಕಾಲದಿಂದ ಕಾಲಕ್ಕೆ ಪಯಣಿಸುತ್ತ ಬಂದಿವೆ. ಪಠ್ಯಗಳು ಜಡವಾಗಿರದೆ, ಪಯಣಿಸುತ್ತಿರುತ್ತವೆ ಎಂಬುದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಹಳಗನ್ನಡ ಕಾವ್ಯಗಳ ಅರ್ಥವನ್ನು ಹೊಸಬಗೆಯಲ್ಲಿ ಗ್ರಹಿಸುವುದಕ್ಕೆ ಸಾಧ್ಯವಿದೆ ಎಂದರು.ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸಾಯನ್ಸಸ್‌ನ ಮುಖ್ಯಸ್ಥ ಡಾ. ವರದೇಶ್ ಹಿರೇಗಂಗೆ, ಭಾಷಾ ವಿಭಾಗದ ಮುಖ್ಯಸ್ಥ ಡಾ. ರಾಹುಲ್ ಪುಟ್ಟಿ ಇದ್ದರು.
ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರದ ಸಂಯೋಜಕ ಡಾ. ಪೃಥ್ವೀರಾಜ ಕವತ್ತಾರು ಸ್ವಾಗತಿಸಿದರು. ವಿದ್ವಾನ್ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಗಮಕವಾಚನದ ಮೂಲಕ ಪಂಪ ಮತ್ತು ರನ್ನರ ಕೃತಿಗಳ ಪದ್ಯಗಳನ್ನು ಪ್ರಸ್ತುತಿಪಡಿಸಿದರು. ಸಂಶೋಧನ ಸಹಾಯಕರಾದ ಅಭಿಲಾಷಾ ಎಸ್. ಕಾರ್ಯಕ್ರಮ ನಿರ್ವಹಿಸಿದರು. ಪದ್ಮಾಸಿನಿ ಉದ್ಯಾವರ ವಂದಿಸಿದರು.