ಸಾರಾಂಶ
- ಎಂಪಿಆರ್ ಕೊಡುಗೆ ಏನೆಂಬುದು ಜನತೆಗೆ ಗೊತ್ತಿದೆ: ಅಧ್ಯಕ್ಷ ನಾಗರಾಜ ಹೇಳಿಕೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಹೊನ್ನಾಳಿ ಕ್ಷೇತ್ರಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕೊಡುಗೆ ಏನೆಂಬುದು ಜನರಿಗೆ ಗೊತ್ತಿದೆ. ಇಂತಹವರ ಬಗ್ಗೆ ಜಿಪಂ ಮಾಜಿ ಸದಸ್ಯ ಎಂ.ಆರ್. ಮಹೇಶ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಬಿಜೆಪಿ ಹೊನ್ನಾಳಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ ತಾಕೀತು ಮಾಡಿದರು.
ಪಕ್ಷದಲ್ಲಿ ಆಂತರಿಕವಾಗಿ ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪರಿಹರಿಸಿಕೊಳ್ಳಿ. ಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸೋದು ಎಂ.ಆರ್.ಮಹೇಶ ನಿಲ್ಲಿಸಲಿ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ರೇಣುಕಾಚಾರ್ಯ ಸಾಕಷ್ಟು ದುಡಿದಿದ್ದಾರೆ. ಮಹೇಶ್ ಮೂಲತಃ ಬಿಜೆಪಿಗರಲ್ಲ. ಜೆಡಿಎಸ್ ಪಕ್ಷದಿಂದ ನಮ್ಮ ಪಕ್ಷಕ್ಕೆ ಬಂದವರು. ಇಂತಹವರನ್ನು ಜಿಪಂ ಸದಸ್ಯರಾಗಿ ಮಾಡಿದ್ದೇ ರೇಣುಕಾಚಾರ್ಯ. ಇದನ್ನು ಮಹೇಶ ಮರೆಯಬಾರದು ಎಂದು ತಿಳಿಸಿದರು.
ಭಾರತ ಮಾತೆಗೆ, ನರೇಂದ್ರ ಮೋದಿಗೆ ಜೈಕಾರ ಹಾಕುವವರು ನಾವು. ನಮಗೆ ಕಾಂಗ್ರೆಸ್ಸಿನವರಿಗೆ ಜೈಕಾರ ಹಾಕಲು ಬರುವುದಿಲ್ಲ. ಮಹೇಶ ಅವಕಾಶವಾದಿ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನಾಯಕರಿಗೆ ಜೈಕಾರ ಹಾಕುತ್ತಾರೆ. ಬಿಜೆಪಿಗೂ ಬರುತ್ತಾರೆ. ಹೊನ್ನಾಳಿಯಲ್ಲಿ ಬಿಜೆಪಿಯನ್ನು ಹೆಮ್ಮರವಾಗಿ ಬೆಳೆಸಿದ ರೇಣುಕಾಚಾರ್ಯ ಪ್ರತಿ ಹಳ್ಳಿಯಲ್ಲೂ ಅಭಿವೃದ್ಧಿ ಕೈಗೊಂಡಿದ್ದಾರೆ. ಅವರ ತೇಜೋವಧೆ ನಾವ್ಯಾರೂ ಸಹಿಸಲ್ಲ ಎಂದು ಎಚ್ಚರಿಸಿದರು.ಪಕ್ಷದ ತಾಲೂಕು ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ ಮಾತನಾಡಿ, ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನಲ್ಲಿ ಸಕ್ರಿಯ ಸದಸ್ಯತ್ವ ಅಭಿಯಾನ ಮಾಡಲಾದೆ. ಬೂತ್ ಮಟ್ಟದಲ್ಲೂ ನಾವೆಲ್ಲರೂ ಕೆಲಸ ಮಾಡಿದ್ದೇವೆ. ಜಿಲ್ಲಾ ಸಮಿತಿ ಸೂಚನೆಯಂತೆ ನೂತನ ಮಂಡಲ ಅಧ್ಯಕ್ಷರ ನೇಮಕವಾಗಿದೆ. ಎಂ.ಆರ್.ಮಹೇಶ ನೂತನ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದಾರೆ. ಬೂತ್ ಮಟ್ಟದಲ್ಲಿ ಕೆಲಸ ಮಾಡದ, ಪಕ್ಷ ಸಂಘಟಿಸದ ಮಹೇಶರ ಅಧ್ಯಕ್ಷರಾಗಿ ಘೋಷಣೆ ಮಾಡಿದ್ದು, ಇದು ಅಧಿಕೃತವೂ ಅಲ್ಲ ಎಂದರು.
ಸಹ ಚುನಾವಣಾಧಿಕಾರಿಗೆ ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾಡುವ ಅನುಭವ ಇಲ್ಲ. ನೂತನ ಮಂಡಲ ಅಧ್ಯಕ್ಷರ ಪಟ್ಟಿ ಮಾಡಿ, ಅರಕೆರೆ ನಾಗರಾಜ ಅವರನ್ನು ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಎಂ.ಆರ್.ಮಹೇಶ ಆಯ್ಕೆ ಗೊಂದಲ ಹುಟ್ಟುಹಾಕಿದ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದೇವೆ. ನಮ್ಮ ರಾಜ್ಯ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಸಹ ಯಶವಂತ ರಾವ್ ಮಾಡಿರುವ ಆಯ್ಕೆಗಳು ಅಸಿಂಧು ಎಂದು ಘೋಷಿಸಿದ್ದಾರೆ ಎಂದು ತಿಳಿಸಿದರು.ರಾಜಕೀಯ ನಿರಾಶ್ರಿತರಾದ ಎಂ.ಆರ್.ಮಹೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನಲ್ಲಿದ್ದವು. ಇಂತಹವರು ಯಾವಾಗ ಬಿಜೆಪಿಗೆ ಬಂದಿದ್ದಾರೆ? ಮಹೇಶ್‌ಗೆ ಬಿಜೆಪಿಯಲ್ಲಿ ಅವಕಾಶ ಕೊಟ್ಟು, ಗೆಲ್ಲಿಸಿದ್ದೇ ರೇಣುಕಾಚಾರ್ಯರು ಎಂಬುದನ್ನೂ ಮರೆಯಬಾರದು. ಬೆಳಗುತ್ತಿ ಕ್ಷೇತ್ರದ ಜಿಪಂ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿದ್ದು ಯಾರು? ಹೊನ್ನಾಳಿ ಕ್ಷೇತ್ರದಲ್ಲಿ ರೇಣುಕಾಚಾರ್ಯ ದೊಡ್ಡ ಶಕ್ತಿ ಇದ್ದಂತೆ. 4-5 ಸಾವಿರ ಕೋಟಿ ಅನುದಾನ ತಂದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಂಡಿದ್ದಾರೆ. ಮಹೇಶ್ ಹೇಳಿಕೆಗೆ ಹೊನ್ನಾಳಿ ಜನತೆ ಸಹ ಮನ್ನಣೆ ಕೊಡಬಾರದು ಎಂದು ಅವರು ಮನವಿ ಮಾಡಿದರು.
ಪಕ್ಷದ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಪಿ.ಕುಬೇಂದ್ರಪ್ಪ, ಟಿ.ಕೆ.ಸುರೇಶ, ನೆಲಹೊನ್ನೆ ಮಂಜುನಾಥ, ಬೀರಪ್ಪ, ಸಿ.ಆರ್.ಶಿವಾನಂದ, ಎಸ್.ಬಿ.ರವಿಕುಮಾರ, ಶಿವು ಹುಡೇದ್, ಅನಿಲಕುಮಾರ, ಮಾರುತಿ ನಾಯ್ಕ, ಸಿದ್ದಲಿಂಗಪ್ಪ, ವಕೀಲ ಗೋವಿಂದಪ್ಪ ಇತರರು ಇದ್ದರು.- - - -27ಕೆಡಿವಿಜಿ4.ಜೆಪಿಜಿ:
ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಹೊನ್ನಾಳಿ ಮಂಡಲ ಅಧ್ಯಕ್ಷ ಅರಕೆರೆ ನಾಗರಾಜ ಇತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.