ಕನ್ನಡಪ್ರಭ ವಾರ್ತೆ ವಿಜಯಪುರ ಯೋಗ ಸಾಧನೆಯ ಮೂಲಕ ಸಾಧನೆಗೈದ ಹಾಗೂ ದಾಸ ಸಾಹಿತ್ಯವನ್ನು ಪ್ರಚುರಪಡಿಸಿದ ಮಹಾತ್ಮರಾದ ಹಾಗೂ ವಿಜಯಪುರದ ಕಾಖಂಡಕಿಯ ಮಹಿಪತಿ ದಾಸರ ಕುರಿತು ಮಹಿಪತಿ ದಾಸರು ಎಂಬ ಚಲನಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ಈ ಚಿತ್ರ ಇದೇ ಡಿಸೆಂಬರ್ 27ರಂದು ರಾಜ್ಯಾದ್ಯಂತ 30 ಚಿತ್ರಮಂದಿರಗಳಲ್ಲಿ ತೆರೆ ಕಾರಣಲಿದೆ ಎಂದು ಚಿತ್ರದ ನಿರ್ದೇಶಕ ಮಧುಸೂದನ ಹವಾಲ್ದಾರ ತಿಳಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಯೋಗ ಸಾಧನೆಯ ಮೂಲಕ ಸಾಧನೆಗೈದ ಹಾಗೂ ದಾಸ ಸಾಹಿತ್ಯವನ್ನು ಪ್ರಚುರಪಡಿಸಿದ ಮಹಾತ್ಮರಾದ ಹಾಗೂ ವಿಜಯಪುರದ ಕಾಖಂಡಕಿಯ ಮಹಿಪತಿ ದಾಸರ ಕುರಿತು ಮಹಿಪತಿ ದಾಸರು ಎಂಬ ಚಲನಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ಈ ಚಿತ್ರ ಇದೇ ಡಿಸೆಂಬರ್ 27ರಂದು ರಾಜ್ಯಾದ್ಯಂತ 30 ಚಿತ್ರಮಂದಿರಗಳಲ್ಲಿ ತೆರೆ ಕಾರಣಲಿದೆ ಎಂದು ಚಿತ್ರದ ನಿರ್ದೇಶಕ ಮಧುಸೂದನ ಹವಾಲ್ದಾರ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಪತಿ ದಾಸರ ಅವರ ವಂಶಸ್ಥರನ್ನೆಲ್ಲ ಭೇಟಿಯಾಗಿ ಅವರ ಬಗ್ಗೆ ಕುಟುಂಬದವರಿಂದ ಮಾಹಿತಿ ಪಡೆದು ಈ ಚಿತ್ರವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಾಗಿದೆ. ಮಹಿಪತಿ ದಾಸರ ಚರಿತ್ರೆಗೆ ಧಕ್ಕೆ ಬಾರದಂತೆ ನಿರ್ಮಿಸಿದ ಈ ಚಿತ್ರ ನಾಡಿನ ಎಲ್ಲರ ಮನಸ್ಸನ್ನು ಮುಟ್ಟಲಿದೆ. ಅವರ ಕುಟುಂಬಸ್ಥರ ಪಾತ್ರಗಳೆಲ್ಲವನ್ನೂ ಜವಾಬ್ದಾರಿಯಿಂದ ನಿರ್ವಹಿಸಲಾಗಿದೆ. ಚಿತ್ರದ ಮುಖ್ಯಪಾತ್ರದಲ್ಲಿ ವಿಜಯಾನಂದ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಮಹಿಪತಿ ದಾಸರ ತಂದೆಯ ಪಾತ್ರವನ್ನು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ನಿರ್ವಹಿಸಿದ್ದಾರೆ. ದೇವಿಕಾ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಟ್ಟು 9 ಹಾಡುಗಳಿದ್ದು, ಸಿನಿಮಾ ಮೂಲಕ ಜನರನ್ನು ತಲುಪುವ ಕೆಲಸವನ್ನು ಮಾಡಲಾಗಿದೆ. ಕಥೆ ಹಾಗೂ ಸಂಭಾಷಣೆ ಸಾಹಿತಿ, ಸಂಶೋಧಕ ಕೃಷ್ಣಕೊಲ್ಹಾರ ಕುಲಕರ್ಣಿಯವರು ಬರೆದಿದ್ದಾರೆ ಎಂದು ತಿಳಿಸಿದರು.ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆ ಅನೇಕ ಸಾಧು ಸಂತರಿಗೆ ಮಹಾತ್ಮರಿಗೆ ಜನ್ಮ ನೀಡಿದ ಪುಣ್ಯಭೂಮಿಯಾಗಿದೆ. ಅದರಂತೆ ಮಹಿಪತಿ ದಾಸರು ಆದಿಲಶಾಹಿ ಕಾಲದಲ್ಲಿ ದಾಸ ಸಾಹಿತ್ಯವನ್ನು ಪ್ರಚುರಪಡಿಸಿದವರು. ಅಂತಹ ದಾಸರ, ಶರಣರ ಚಿತ್ರಗಳನ್ನು ಮಾಡುವ ಮೂಲಕ ನಿರ್ದೇಶಕರು ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮಹಿಪತಿ ದಾಸರು ಬರೆದ ಹಾಡುಗಳನ್ನೇ ನಿರ್ದೇಶಕರು ಈ ಚಿತ್ರದಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಹಿಪತಿ ದಾಸರ ತಂದೆಯ ಪಾತ್ರವನ್ನು ನಾನು ಮಾಡಿದ್ದೇನೆ. ಮಾತಾಂಬುಜಾ ಮೂವೀಸ್ ನವರು ನಿಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಹರಿದಾಸ ಸಾಹಿತ್ಯ ಉಳಿಯಲಿ, ಹರಿದಾಸ ಸಾಹಿತ್ಯ ಮೆರೆಯಲಿ ಎಂಬ ಉದ್ದೇಶದಿಂದ ಈ ಚಿತ್ರವನ್ನು ತಯಾರಿಸಲಾಗಿದೆ ಎಂದು ಹೇಳಿದರು.ದಾಸರ ವಂಶಸ್ಥ ಶ್ರೀಧರ ಹರಿದಾಸ ಮಾತನಾಡಿ, ಮಹಾನ ಯೋಗಿಗಳು ಸಂತರು ಆಗಿದ್ದ ಮಹಿಪತಿ ದಾಸರ ಸಿನಿಮಾ ಮಾಡಿದ್ದು, ಚಿತ್ರ ಯಶಸ್ವಿಯಾಗಲಿ. ರಾನಡೆ ಮಹಾರಾಜರು ಮಹಿಪತಿ ದಾಸರ ದಾಸ ಸಾಹಿತ್ಯದ ಪದಗಳನ್ನು ಕೇಳುತ್ತಿದ್ದು, ಅವರ ಬಗ್ಗೆ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ ಎಂದರು.
ಟ್ರಸ್ಟ್ ಅಧ್ಯಕ್ಷ ಮಹಿಪತಿ ಹರಿದಾಸ ಮಾತನಾಡಿ, ಮಹಿಪತಿ ದಾಸರು ಚಲನಚಿತ್ರ ಯಶಸ್ವಿಯಾಗಲಿ ಜೊತೆಗೆ ಇದರ ಎರಡನೇ ಭಾಗವು ಮುಂದೆ ಮೂಡಿಬರುವಂತಾಗಲಿ. ಸಾಕಷ್ಟು ಶ್ರಮಿಸಿದ ಚಿತ್ರ ತಂಡದ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.ಸುದ್ದಿಗೋಷ್ಠಿಯಲ್ಲಿ ಮೀನಾಕ್ಷಿ ಸಾವಳಗಿ, ನಾರಾಯಣ ಬಾಬಾನಗರ, ಪ್ರಿಯಾ ಹರಿದಾಸ, ಶ್ರೀರಂಗ ಪುರಾಣಿಕ, ವಿವೇಕ ಕುಲಕರ್ಣಿ, ಪರಶುರಾಮ ಗಣಿ, ಗೋವಿಂದ ಜೋಶಿ ಮುಂತಾದವರು ಹಾಜರಿದ್ದರು.