ಗುರು-ಶಿಷ್ಯರ ಸಂಬಂಧ ಕಾಪಾಡಿಕೊಳ್ಳಿ: ಶಾಸಕ ಇಕ್ಬಾಲ್‌

| Published : Sep 13 2024, 01:38 AM IST

ಸಾರಾಂಶ

ರಾಮನಗರ: ಗುರು-ಶಿಷ್ಯರ ಸಂಬಂಧ ಭಕ್ತ-ಭಗವಂತ ಹಾಗೂ ತಂದೆ-ಮಗನ ಸಂಬಂಧ ಇದ್ದಂತೆ. ಈ ಪವಿತ್ರ ಸಂಬಂಧವನ್ನು ಕಾಪಾಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ರಾಮನಗರ: ಗುರು-ಶಿಷ್ಯರ ಸಂಬಂಧ ಭಕ್ತ-ಭಗವಂತ ಹಾಗೂ ತಂದೆ-ಮಗನ ಸಂಬಂಧ ಇದ್ದಂತೆ. ಈ ಪವಿತ್ರ ಸಂಬಂಧವನ್ನು ಕಾಪಾಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರಪಂಚದ ಯಾವ ಭಾಗದಲ್ಲೂ ಕಂಡು ಬರದಂತಹ ಗುರು-ಶಿಷ್ಯರ ಪರಂಪರೆ ನಮ್ಮ ದೇಶದಲ್ಲಿ ಮಾತ್ರ ಇದೆ. ಆ ಪವಿತ್ರ ಪರಂಪರೆಯನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರಂತಹ ಮಹನೀಯರು ಮುಂದುವರಿಸಿಕೊಂಡು ಬಂದಿದ್ದಾರೆ. ಅದನ್ನು ನೀವುಗಳೂ ಅನುಸರಿಸಬೇಕು ಎಂದರು.

ಸದೃಢ ಸಮಾಜ ಕಟ್ಟುವ ಜವಾಬ್ದಾರಿ ಶಿಕ್ಷಕರ ಮೇಲೂ ಇದೆ. ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ಅದರ ರೂವಾರಿಗಳು ನೀವೇ ಆಗಿರುತ್ತೀರಿ. ಗುರು ಇಲ್ಲದಿದ್ದರೆ ಯಾವುದೇ ಸಾಧನೆ ಅಸಾಧ್ಯ. ಜ್ಞಾನ ಸಂಪಾದನೆ ಮಾಡಿದಾಗ ಮಾತ್ರ ನಾವು ನಿಜವಾದ ಮನುಷ್ಯರಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿಯೇ ನಮ್ಮ ದೇಶದಲ್ಲಿ ತಂದೆ-ತಾಯಿಗಿಂತಲೂ ಮಿಗಿಲಾದ ಸ್ಥಾನವನ್ನು ಗುರು ಪಡೆದಿದ್ದಾರೆ ಎಂದು ತಿಳಿಸಿದರು.

ತಮಿಳುನಾಡಿನ ಸಾಧಾರಣ ಕುಟುಂಬದಲ್ಲಿ ಜನಿಸಿದಂತಹ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರು ಇಡೀ ದೇಶದಲ್ಲಿಯೇ ಅತ್ಯುತ್ತಮ ಶಿಕ್ಷಕ ಎಂದು ಗುರುತಿಸಿಕೊಂಡರು. ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಸ್ಥಾನವನ್ನೂ ಅಲಂಕರಿಸಿದ್ದವರು. ಪರಿಶ್ರಮ, ಶ್ರದ್ಧೆ ಇದ್ದರೆ ಎಲ್ಲವೂ ಸಾಧ್ಯ. ಶಿಕ್ಷಣ ಇಲಾಖೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣ ಅವರು ಹಲವಾರು ಸುಧಾರಣೆಗಳನ್ನು ತಂದವರು. ಶಿಕ್ಷಣ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿದ್ದವರು. ಸಮಾಜ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ನಿಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಕುಮಾರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಇತರರಿದ್ದರು.

ಬಾಕ್ಸ್ ...............

ಪಂಚಾಯಿತಿಗೊಂದು ಕೆಪಿಎಸ್ ಶಾಲೆ ಪ್ರಾರಂಭ

ರಾಮನಗರ: ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಜಿಲ್ಲೆಯ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕೆಪಿಎಸ್ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ವರ್ಷ ತಲಾ 15 ಕೋಟಿ ವೆಚ್ಚದಲ್ಲಿ 5 ಶಾಲೆಗಳನ್ನು ಪ್ರಾರಂಭವಾಗುತ್ತಿದ್ದು ಈಗಾಗಲೇ ಚಾಲನೆ ಕೂಡ ದೊರೆತಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಕೆಲವೊಂದು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. 3 ಮಕ್ಕಳಿಗೆ 2 ಶಿಕ್ಷಕರು ಪಾಠ ಮಾಡಬೇಕಾದ ಸ್ಥಿತಿ ಇದೆ. ಅಂತೆಯೇ ಮಕ್ಕಳು ಹೆಚ್ಚಿರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಸಣ್ಣಪುಟ್ಟ ಶಾಲೆಗಳನ್ನು ಮುಚ್ಚಿ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆಯನ್ನು ಪ್ರಾರಂಭಿಸಿ ಎಲ್ಲಾ ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದರು.

ಶಿಥಿಲಗೊಂಡಿರುವ ಗುರುಭವನ ಕಟ್ಟಡವನ್ನು ನೆಲಸಮಗೊಳಿಸಿ, 2-3 ಕೋಟಿ ಅನುದಾನ ತಂದು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅದೇ ಕಟ್ಟಡದಲ್ಲಿ ಆಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೋಟ್ ................

2016ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿತ್ತು. ಅದೇ ಶಾಲೆ, ಅದೇ ಶಿಕ್ಷಕರು. ಆದರೆ, ಕಳೆದ ಸಾಲಿನಲ್ಲಿ ನಮ್ಮ ಜಿಲ್ಲೆ 26ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ಕಾರಣ ಏನು ಎಂಬುದು ನಿಮಗೇ ಗೊತ್ತಿದೆ. ಪ್ರಸಕ್ತ ಸಾಲಿನ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕು.

- ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ

12ಕೆಆರ್ ಎಂಎನ್ 8.ಜೆಪಿಜಿ

ರಾಮನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಅಭಿನಂದಿಸಲಾಯಿತು.