ಸಾರಾಂಶ
ಖಾದಿ ಚೀಲಗಳನ್ನು ಉಪಯೋಗಿಸುವ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ತಡೆಯಬೇಕು.
ಸಂಡೂರು: ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸ್ವಚ್ಛತೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಖಾದಿ ಚೀಲಗಳನ್ನು ಉಪಯೋಗಿಸುವ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ತಡೆಯಬೇಕು ಎಂದು ಬಿಕೆಜಿ ಗಣಿ ಕಂಪನಿಯ ನಿರ್ದೇಶಕ ಬಿ. ನಾಗನಗೌಡ ಅಭಿಪ್ರಾಯಪಟ್ಟರು.
ಬಿಕೆಜಿ ಗಣಿ ಆವರಣದಲ್ಲಿ ಗುರುವಾರ ಬಿಕೆಜಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಬಿಕೆಜಿ ಸಂಸ್ಥೆಯು ಮೊದಲಿನಿಂದಲೂ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಸಂಸ್ಥೆ ವತಿಯಿಂದ ಸೆ.೧೪ರಿಂದ ಅ.೧ರವರೆಗೆ ಸ್ವಚ್ಛತೆಯನ್ನು ಕಾಪಾಡುವ ಕುರಿತಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾವು ನಮ್ಮ ಮನೆ ಮತ್ತು ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚು ಗಮನ ನೀಡಬೇಕು ಎಂದರು.ಐಬಿಎಂ (ಇಂಡಿಯನ್ ಬ್ಯುರೋ ಆಫ್ ಮೈನ್ಸ್) ಬೆಂಗಳೂರು ವಿಭಾಗದ ಪ್ರಾದೇಶಿಕ ಗಣಿ ನಿಯಂತ್ರಕ ಡಾ. ಸುರೇಶ್ ಪ್ರಸಾದ್ ಹಾಗೂ ಗಣಿ ಭೂವಿಜ್ಞಾನಿ ಡಾ. ಸುಧಾಕರ್ ಅವರು ಬಿಕೆಜಿ ಸಂಸ್ಥೆ ವತಿಯಿಂದ ಕೈಗೊಳ್ಳಲಾದ ವಿವಿಧ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಶ್ಲಾಘಿಸಿದರು.
ಬಿಕೆಜಿ ಗ್ಲೋಬಲ್ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಖಾದಿ ಚೀಲ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.ಬಿಕೆಜಿ ಗಣಿ ಕಂಪನಿಯ ಹಿರಿಯ ಅಧಿಕಾರಿಗಳಾದ ಪಿ. ಶ್ರೀನಿವಾಸರಾವ್, ಪ್ರಮೋದ್ ರಿತ್ತಿ, ರಾಜಶೇಖರ್ ಬೆಲ್ಲದ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಡೂರಿನ ಬಿಕೆಜಿ ಗಣಿ ಆವರಣದಲ್ಲಿ ಗುರುವಾರ ಬಿಕೆಜಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಬಿಕೆಜಿ ಗಣಿ ಕಂಪನಿಯ ನಿರ್ದೇಶಕ ನಾಗನಗೌಡ ಚಾಲನೆ ನೀಡಿದರು.