ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಹುಮತದ ಗೆಲುವು ಲಭಿಸಿದೆ: ಆರ್.ವಿ. ದೇಶಪಾಂಡೆ

| Published : Aug 17 2024, 12:51 AM IST

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಹುಮತದ ಗೆಲುವು ಲಭಿಸಿದೆ: ಆರ್.ವಿ. ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬಹುಮತದ ಗೆಲುವು ಲಭಿಸಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹರ್ಷ ವ್ಯಕ್ತಪಡಿಸಿದರು.

ಹಳಿಯಾಳ: ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬಹುಮತದ ಗೆಲುವು ಲಭಿಸಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹರ್ಷ ವ್ಯಕ್ತಪಡಿಸಿದರು.

ಶುಕ್ರವಾರ ಪುರಸಭೆಯಲ್ಲಿ ನಡೆದ ಚುನಾವಣೆಯ ಆನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾರನ್ನೂ ಆಯ್ಕೆ ಮಾಡಬೇಕೆಂಬ ವಿಷಯದಲ್ಲಿ ಗುರುವಾರ ಸಂಜೆ ಮತ್ತು ಶುಕ್ರವಾರ ನಾನು ಕಾಂಗ್ರೆಸ್ ಸದಸ್ಯರೊಂದಿಗೆ ಸಭೆ ನಡೆಸಿ, ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಚರ್ಚಿಸಿ, ಕೈಗೊಂಡ ತೀರ್ಮಾನಕ್ಕೆ ಪಕ್ಷದ ಸರ್ವ ಸದಸ್ಯರು ಬೆಂಬಲಿಸಿ ಮತ ಚಲಾಯಿಸಿದಕ್ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಹಳಿಯಾಳ ಬೆಳೆದಿದೆ ಮತ್ತು ಬೆಳೆಯುತ್ತಿದೆ, ಮೂಲಭೂತ ಸೌಲಭ್ಯಗಳು ಇಲ್ಲಿರುವುದರಿಂದ ಹೊರಗಿನ ಜನ ಹಳಿಯಾಳಕ್ಕೆ ವಲಸೆ ಬರುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪ, ಒಳ್ಳೆಯ ಪರಿಸರ, ಕಾನೂನು ಸುವ್ಯವಸ್ಥೆಯ ಮೆಚ್ಚಿಕೊಂಡು ನಗರ ಪ್ರದೇಶ ಜನ ಹಳಿಯಾಳದಲ್ಲಿ ನೆಲೆಸಲು ಆರಂಭಿಸಿದ್ದಾರೆ ಎಂದರು.

ಮೂಲಭೂತ ಸೌಲಭ್ಯಗಳನ್ನು ಕೊಡುವುದು ನಮ್ಮ ಜವಾಬ್ದಾರಿಯೂ ಆಗಿದೆ. ಹಳಿಯಾಳ ಪುರಸಭೆಗೆ ನೂತನವಾಗಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದವರು ಈ ಮೂಲಭೂತ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಕಾಳಜಿಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ವಿಶ್ವಾಸ ತಮಗಿದೆ ಎಂದರು.

ರಾಜಕೀಯವನ್ನು ಚುನಾವಣೆಗೆ ಮಾತ್ರ ಮಾಡಬೇಕು. ಚುನಾವಣೆಯ ನಂತರ ಅಭಿವೃದ್ಧಿ ನಮ್ಮ ಮೂಲ ಉದ್ದೇಶವಾಗಿರಬೇಕು. ಆರೋಪ, ವಿವಾದಗಳಿಗೆ ಅವಕಾಶ ಕೊಡಬೇಡಿ ಎಂದ ಅವರು, ಪುರಸಭೆಗೆ ಬರುವ ಯಾವುದೇ ವ್ಯಕ್ತಿಯಾಗಲಿ, ಪಕ್ಷದ ಸದಸ್ಯರಾಗಲಿ ಅವರನ್ನು ಗೌರವದಿಂದ ಕುರ್ಚಿ ಕೊಟ್ಟು ಸಮಸ್ಯೆಯನ್ನು ಆಲಿಸಿ, ಪರಿಹಾರ ಕಂಡುಕೊಳ್ಳಲು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸೂಚಿಸಿದ್ದೇನೆ. ಹಾಗೆಯೇ ಪುರಸಭೆಯ ಮುಖ್ಯಾಧಿಕಾರಿಯಾಗಲಿ ಅಥವಾ ಸಿಬ್ಬಂದಿಯಾಗಲಿ, ಅಧ್ಯಕ್ಷ ಉಪಾಧ್ಯಕ್ಷರಾದವರು ಮಹಿಳೆಯರೆಂದು ತಾತ್ಸಾರ ಅಸಡ್ಡೆ ತೋರದೇ ಗೌರವದಿಂದ ಕಾಣಬೇಕು ಎಂದರು.

ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಮಾಜಿ ಉಪಾಧ್ಯಕ್ಷೆ ಸುವರ್ಣಾ ಮಾದರ, ಫಯಾಜ್ ಶೇಖ್, ಉಮೇಶ ಬೊಳಶೆಟ್ಟಿ, ರೆಹಾನಾಬಾನು ಜಂಬೂವಾಲೆ, ನುಸ್ರತ ಬಸ್ಸಾಪುರ ಹಾಗೂ ಇತರರು ಇದ್ದರು.