ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ, ಸಮಾಜದ ಬಡವರಿಗಾಗಿ ಕೆಲಸ ಮಾಡುವಂತಹ ಒಳ್ಳೆಯ ವ್ಯಕ್ತಿಯನ್ನು ರಾಜ್ಯ ವಕ್ಫ್ ಬೋರ್ಡ್ ಚೇರಮನ್ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಎಲ್.ಎಲ್.ಉಸ್ತಾದ ಆಗ್ರಹಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ವಕ್ಫ್ ಬೋರ್ಡ್‌ಗೆ ನಿರ್ದೇಶಕರನ್ನು ಆಯ್ಕೆ ಮಾಡುವಾಗ ಯಾರನ್ನೂ ಲೆಕ್ಕಿಸದೆ ಏಕಚಕ್ರಾಧಿಪತ್ಯದಂತೆ ಸಚಿವ ಜಮೀರ್ ಅಹ್ಮದ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಚೇರಮನ್ ನೇಮಕ ಮಾಡುವಾಗಲಾದರೂ ಸಮುದಾಯದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಕ್ಫ್ ಸಚಿವ ಜಮೀರ್ ಅಹ್ಮದ, ಸಿಎಂ ಸಿದ್ಧರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದರು.
ಸಚಿವ ಅಹ್ಮದ ಅವರು ತಮ್ಮ ಮನಸಿಗೆ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈಗ ಅವರು ನೇಮಕ ಮಾಡಲು ಹೊರಟಿರುವ ಚೇರಮನ್ ಹುದ್ದೆಯ ಆಕಾಂಕ್ಷಿಯ ಮೇಲೆ ಹಾಗೂ ವಕ್ಫ್ ಬೋರ್ಡ್ ಕೆಲವು ಸದಸ್ಯರ ಮೇಲೆ ಕ್ರಿಮಿನಲ್ ಕೇಸ್‌ಗಳಿವೆ. ಇದನ್ನು ಗಮನಿಸಬೇಕು. ಯಾವಾಗಲೂ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಚಿಂತನೆ ಮಾಡಬೇಕು. ರಾಜ್ಯ ವಕ್ಫ್ ಬೋರ್ಡ್‌ಗೆ ಒಳ್ಳೆಯ ಚಿಂತನೆಯುಳ್ಳವರನ್ನು ಅಧ್ಯಕ್ಷರನ್ನು ಮಾಡಬೇಕು ಎಂದು ಒತ್ತಾಯಿಸಿದರು.ಬಡವರ ಬಗ್ಗೆ ಕಾಳಜಿ ಮಾಡದೆ ಶ್ರೀಮಂತರಿಗೆ ಫಂಡ್ ಕೊಡುತ್ತಿದ್ದೀರಿ. ಕಳೆದ ಹತ್ತು ವರ್ಷಗಳಿಂದ ವಿಜಯಪುರದಲ್ಲಿದ್ದಾನೆ. ಎಂ.ಎಲ್.ಉಸ್ತಾದ ಅವರು ವಕ್ಫ್ ಬೋರ್ಡ್ ಸಚಿವರಿದ್ದಾಗ ಮೊಹಸಿನ ಜಮಖಂಡಿ ಅವರು ಸೇರಿದ್ದು, ಅಕ್ರಮ ಎಸಗಿ ಲೋಕಾಯುಕ್ತರ ಟ್ರ್ಯಾಪ್ ಆಗಿದ್ದಾರೆ. ನಾಮನಿರ್ದೇಶಿತ ಸದಸ್ಯರ ಮೇಲೆ ಕ್ರಿಮಿನಲ್ ಕೇಸ್‌ಗಳಿವೆ. ಅಂತಹವರಿಗೆ ರಾಜ್ಯ ವಕ್ಫ್ ಬೋರ್ಡ್‌ನ ಸದಸ್ಯರನ್ನಾಗಿ ಮಾಡಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರಕ್ಕಿಲ್ಲ ರೈತರ ಕಾಳಜಿ:ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಕಳೆದ ಐದಾರು ವರ್ಷಗಳಿಂದ ಆಲಮಟ್ಟಿ ಕಾಲುವೆ ಕಾಮಗಾರಿ ಆಗಿವೆ. ಆ ವೇಳೆ ಲಕ್ಷಾಂತರ ಎಕರೆ ಜಮೀನನ್ನು ಸರ್ಕಾರ ಭೂ ಸ್ವಾಧೀನ ಮಾಡಿದೆ. ಆದರೆ ಅವರಿಗೆ ಐದಾರು ವರ್ಷಗಳು ಕಳೆದರೂ ಪರಿಹಾರ ಒದಗಿಸಿಲ್ಲ. ನಾನು ವಕೀಲನಾಗಿದ್ದು, ನೂರಾರು ಪ್ರಕರಣಗಳು ನನ್ನ ಬಳಿ ಇವೆ. ತೀರ್ಪು ಆಗಿ ನಾಲ್ಕು ವರ್ಷಗಳು ಕಳೆದರೂ ರೈತರಿಗೆ ಪರಿಹಾರ ಕೊಡಲು ಸರ್ಕಾರದಲ್ಲಿ ಹಣವಿಲ್ಲ ಎಂದು ಎಲ್.ಎಲ್.ಉಸ್ತಾದ ಆರೋಪಿಸಿದರು.
ಮುಸ್ಲಿಂ ಮುಖಂಡ ಬಂದೇನವಾಜ್ ಮಹಾಬರಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮಾಜಕ್ಕೆ ಶೋಷಣೆ ಆಗುತ್ತಿದೆ. ಮುಸ್ಲಿಂ ಸಮಾಜದ ಕೆಲವು ರಾಜಕೀಯ, ಧಾರ್ಮಿಕ ನಾಯಕರು ಅನ್ಯಾಯ ಮಾಡುತ್ತಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ಸಾಕಷ್ಟು ವಕ್ಫ್ ಆಸ್ತಿಗಳು ಭೂ ಮಾಫಿಯಾ ಮಾಡಿದ್ದಾರೆ. ಶ್ರೀಮಂತರು ಕೊಳ್ಳೆ ಹೊಡೆದಿದ್ದಾರೆ, ಸಾಮಾನ್ಯ ಬಡವರು ಬಡವರಾಗಿಯೇ ಉಳಿದಿದ್ದಾರೆ. ವಕ್ಫ್‌ನಿಂದ ಕೈಗೊಂಡ ಕಾಮಗಾರಿಗಳಲ್ಲಿ ಕೂಡ ಅವ್ಯವಹಾರ ಆಗಿವೆ. ಕಾಂಗ್ರೆಸ್ ಸರ್ಕಾರ ನಮ್ಮ ಓಟು ಪಡೆದು, ನಮ್ಮ ಜನಾಂಗಕ್ಕೆ ಮೋಸ ಮಾಡುತ್ತಿದೆ. ಕೆಲವರು ಹೈ ಲೆವೆಲ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಶೋಷಣೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜೈನುಲಾಬ್ದಿನ್ ಹಾಸ್ಮಿ, ಅನೀಸ್ ಪಂಥೋಜಿ, ರಫೀಕ್ ಸೌದಾಗರ, ಇರ್ಫಾನ ಶೇಖ ಉಪಸ್ಥಿತರಿದ್ದರು.
----20BIJ01