ಬಿಸಿಯೂಟ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ

| Published : Jul 09 2025, 12:18 AM IST

ಸಾರಾಂಶ

ಮೊಟ್ಟೆ ಖರೀದಿ ಬಹುದೊಡ್ಡ ಸಮಸ್ಯೆಯಾಗಿದೆ, ಅನೇಕ ಸಂದರ್ಭದಲ್ಲಿ ಇಲಾಖೆ ನೀಡುವ ಅನುದಾನ ಮೊಟ್ಟೆ ಖರೀದಿಗೆ ಸಾಕಾಗುವುದಿಲ್ಲ, ಶಿಕ್ಷಕರು ತಮ್ಮ ಜೇಬಿನಿಂದ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಕಡಿಮೆ ಸಂಖ್ಯೆ ಮಕ್ಕಳಿರುವ ಶಾಲೆಗಳಲ್ಲಿ ಬಿಸಿಯೂಟ ನಿರ್ವಹಣೆ ಬಹುದೊಡ್ಡ ಸವಾಲಾಗಿದೆ. ಇಂದಿನ ಬೆಲೆ ಏರಿಕೆ ಸಂದರ್ಭದಲ್ಲಿ ಅನುದಾನ ಹೆಚ್ಚಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರಬಿಸಿಯೂಟ ಸಿದ್ಧತೆ, ಮೊಟ್ಟೆ ಖರೀದಿ, ಸಾಗಾಣೆ ಮತ್ತಿತರ ಸಮಸ್ಯೆಗಳಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದ್ದು, ಈ ಸಂಕಷ್ಟದಿಂದ ಶಿಕ್ಷಕರಿಗೆ ಮುಕ್ತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಪ್ರಧಾನಮಂತ್ರಿ ಪೋಷಣ್‌ ಸಮ್ಮಾನ್ ಯೋಜನೆ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಪದಾಧಿಕಾರಿಗಳು, ಶೈಕ್ಷಣಿಕ ಚಟುವಟಿಕೆಗಳು ಮತ್ತು ದಾಖಲೆಗಳ ನಿರ್ವಹಣೆ ಇಂದು ಮಕ್ಕಳ ಕಲಿಕಾ ಅಭಿವೃದ್ದಿ ದೃಷ್ಟಿಯಿಂದ ಅತಿ ಮುಖ್ಯವಾಗಿದ್ದು, ನಿತ್ಯವೂ ತರಕಾರಿ, ಮೊಟ್ಟೆ ಖರೀದಿಗಾಗಿ ಸಮಯ ವ್ಯರ್ಥ, ಸಾಗಾಣೆಕೆಯ ಸಂಕಷ್ಟ ಅನುಭವಿಸುತ್ತಿದ್ದು, ಇದು ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿದೆ ಎಂದರು.ಮೊಟ್ಟೆ, ತರಕಾರಿಗೆ ಹಣದ ಕೊರತೆ

ಮೊಟ್ಟೆ ಖರೀದಿ ಬಹುದೊಡ್ಡ ಸಮಸ್ಯೆಯಾಗಿದೆ, ಅನೇಕ ಸಂದರ್ಭದಲ್ಲಿ ಇಲಾಖೆ ನೀಡುವ ಅನುದಾನ ಮೊಟ್ಟೆ ಖರೀದಿಗೆ ಸಾಕಾಗುವುದಿಲ್ಲ, ಶಿಕ್ಷಕರು ತಮ್ಮ ಜೇಬಿನಿಂದ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಕಡಿಮೆ ಸಂಖ್ಯೆ ಮಕ್ಕಳಿರುವ ಶಾಲೆಗಳಲ್ಲಿ ಬಿಸಿಯೂಟ ನಿರ್ವಹಣೆ ಬಹುದೊಡ್ಡ ಸವಾಲಾಗಿದೆ. ಇಂದಿನ ಬೆಲೆ ಏರಿಕೆ ಸಂದರ್ಭದಲ್ಲಿ ಅಷ್ಟೊಂದು ಕಡಿಮೆ ಅನುದಾನದಲ್ಲಿ ತರಕಾರಿ, ಸಾಂಬಾರು ಪುಡಿ ಮತ್ತಿತರ ವಸ್ತುಗಳ ಖರೀದಿ ದುಸ್ತರವಾಗಿದೆ ಎಂದು ತಿಳಿಸಿದರು.

ಈ ನಡುವೆ ಶಿಕ್ಷಕರು, ಚುನಾವಣೆ, ಗಣತಿ, ಮತಪಟ್ಟಿ ತಯಾರಿಕೆ ಮತ್ತಿತರ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇದ್ದು, ಇದರೊಂದಿಗೆ ಮಕ್ಕಳಿಗೆ ಬಿಸಿಯೂಟ, ಮೊಟ್ಟೆ ನಿರ್ವಹಣೆಯೂ ಕಷ್ಟವಾಗಿದೆ, ಮಕ್ಕಳಿಗೆ ಅಕ್ಷರ ಕಲಿಸಬೇಕಾದ ಸಮಯದಲ್ಲಿ ಶಿಕ್ಷಕರು ಇತರೆ ಕೆಲಸಗಳ ಒತ್ತಡ ಅನುಭವಿಸುತ್ತಿದ್ದು, ಇದರಿಂದ ಮುಕ್ತಿ ನೀಡಲು ಕೋರಿದರು.ಪ್ರತ್ಯೇಕ ವ್ಯವಸ್ಥೆಗೆ ಒತ್ತಾಯ

ಬಿಸಿಯೂಟ ನಿರ್ವಹಣೆಗೆ ಪ್ರತ್ಯೇಕ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿಯ ಸದುದ್ದೇಶ ಹೊಂದಿರುವ ನಮ್ಮ ಮನವಿಯನ್ನು ಪರಿಗಣಿಸುವ ಮೂಲಕ ಶಿಕ್ಷಕರು ಶೈಕ್ಷಣಿಕ ಚಟುವಟಿಕೆಯತ್ತ ಗಮನಹರಿಸಲು ಅನುವು ಮಾಡಿಕೊಡುವಂತೆ ಕೋರಿದರು.ಈ ಸಂದರ್ಭದಲ್ಲಿ ಜಿಲ್ಲಾ ನೌಕರ ಸಂಘದ ನಿರ್ದೇಶಕ ಎಸ್.ಬಿ.ವೆಂಕಟಚಲಪತಿಗೌಡ, ತಾಲೂಕು ಸಂಘದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ.ಸೋಮಶೇಖರ್, ಗೌರವಾಧ್ಯಕ್ಷ ಎನ್.ನಾಗರಾಜ್ ಖಜಾಂಚಿ ಪಿ.ಎನ್.ಅಶ್ವತಪ್ಪ, ಉಪಾಧ್ಯಕ್ಷ ಸಿ ನಾರಾಯಣಸ್ವಾಮಿ, ಮಹಿಳಾ ಉಪಾಧ್ಯಕ್ಷೆ ವಿ.ಮಂಜುಳಾ ಸಹಕಾರ್ಯದರ್ಶಿಗಳಾದ ಬಿ.ಎನ್.ಭಾಗ್ಯಮ್ಮ,ಎನ್.ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಬಿ.ಮುನಿರಾಜು, ಭಾಗ್ಯಲಕ್ಷ್ಮಮ್ಮ, ಲೆಕ್ಕಪರಿಶೋಧಕಿ ಶ್ರೀಮತಿ ರುದ್ರಮ್ಮ, ಸಂಘದ ಹಿತೈಷಿಗಳಾದ ಇಬ್ರಾಹಿಂ ಖಾನ್ ಶಾಂತಮ್ಮ ಇದ್ದರು.