ಸಾರಾಂಶ
ಗದಗ: ಜಿಲ್ಲೆಯಲ್ಲಿ ಆ. 27 ರಂದು ಕರ್ನಾಟಕ ಲೋಕಸೇವಾ ಆಯೋಗದಿಂದ 2023-24ನೇ ಸಾಲಿನ ಗೆಜೆಟೆಡ್ ಪ್ರೋಬೇಷನರ್ಸ ಗ್ರುಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪೂರ್ವಭಾವಿ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷೆಗಳನ್ನು ಪಾರದರ್ಶಕವಾಗಿ ಯಾವುದೇ ಅವ್ಯವಹಾರಗಳಿಗೆ ಆಸ್ಪದ ನೀಡದೇ ಸುವ್ಯವಸ್ಥಿತವಾಗಿ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರೋಬೇಷನರ್ಸ ಗ್ರುಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪೂರ್ವಭಾವಿ ಪರೀಕ್ಷೆಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಆ. 27 ರಂದು ಪರೀಕ್ಷೆಗಳು ಜರುಗಲಿದ್ದು, ಮೊದಲನೇ ಪತ್ರಿಕೆ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರ ವರೆಗೆ ಹಾಗೂ 2ನೇ ಪತ್ರಿಕೆ ಮಧ್ಯಾಹ್ನ 2 ರಿಂದ 4ರ ವರೆಗೆ ಪರೀಕ್ಷೆ ಜರುಗಲಿವೆ. ಈ ಪರೀಕ್ಷಾ ಪ್ರಕ್ರಿಯೆ ಸುಗಮವಾಗಿ, ಯಾವುದೇ ಲೋಪದೋಷಗಳಿಲ್ಲದಂತೆ ನ್ಯಾಯಸಮ್ಮತವಾಗಿ ಹಾಗೂ ನಿಷ್ಪಕ್ಷಪಾತವಾಗಿ ಪರೀಕ್ಷೆ ನಡೆಸಬೇಕು ಆಯೋಗವು ನೀಡಿರುವ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.
ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆಯಲು ಜಿಲ್ಲಾಮಟ್ಟದ ತ್ರಿ-ಸದಸ್ಯ ಸಮಿತಿ ವೀಕ್ಷಕರನ್ನು, ಸ್ಥಳೀಯ ನಿರೀಕ್ಷಣಾಧಿಕಾರಿ ಹಾಗೂ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧಿಕಾರಿಗಳು ತಮಗೆ ನಿಗದಿಪಡಿಸಿದ ಕರ್ತವ್ಯ ನಿರ್ವಹಿಸತಕ್ಕದ್ದು. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಕೊಂಡೊಯ್ಯುವ ಸಮಯದಲ್ಲಿ ಉಸ್ತುವಾರಿ ತಂಡಕ್ಕೆ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.ಪರೀಕ್ಷೆಗಳು ಸುಗಮವಾಗಿ ಜರುಗುವ ಮತ್ತು ಶಿಸ್ತು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸುವ ಸಮಯ ಮತ್ತು ಹೊರಹೋಗುವ ಸಮಯದಲ್ಲಿ ಮಾತ್ರ ಚಿತ್ರೀಕರಿಸಲು ಮಾಧ್ಯಮದವರಿಗೆ ಅವಕಾಶವಿದ್ದು, ಪರೀಕ್ಷಾ ಗೌಪ್ಯತೆ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ, ಚಿತ್ರೀಕರಣ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿದರು. ಸಭೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಜಾಮರ್‌ಗಳ ಅಳವಡಿಕೆ, ಸಿಸಿ ಕ್ಯಾಮೆರಾ ಅಳವಡಿಕೆ, ಗೋಡೆ ಗಡಿಯಾರಗಳ ಅಳವಡಿಕೆ, ಪರೀಕ್ಷಾ ಸಮಿತಿಯ ಸದಸ್ಯರುಗಳ ನಿರ್ವಹಿಸಬೇಕಾದ ವಿವಿಧ ಕರ್ತವ್ಯಗಳ ಕುರಿತು ಚರ್ಚಿಸಲಾಯಿತು.ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ.,ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಲ್.ಬಾರಾಟಕ್ಕೆ, ಅಧಿಕಾರಿಗಳು, ಮೇಲ್ವಿಚಾರಕರು, ಸಮನ್ವಯ ಅಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.