ಮೆಡಿಕಲ್ ತಂತ್ರಜ್ಞಾನ ಹಾಗೂ ಕಡಿಮೆ ಬೆಲೆಗೆ ಗುಣಮಟ್ಟದ ಚಿಕಿತ್ಸೆ ನೀಡಲು ಬೆಂಗಳೂರನ್ನು ಮೆಡಿಕಲ್ ಹಬ್ ಮಾಡಿ: ಶಾಸಕ ಶರತ್‌

| Published : Sep 20 2024, 01:37 AM IST / Updated: Sep 20 2024, 12:05 PM IST

ಮೆಡಿಕಲ್ ತಂತ್ರಜ್ಞಾನ ಹಾಗೂ ಕಡಿಮೆ ಬೆಲೆಗೆ ಗುಣಮಟ್ಟದ ಚಿಕಿತ್ಸೆ ನೀಡಲು ಬೆಂಗಳೂರನ್ನು ಮೆಡಿಕಲ್ ಹಬ್ ಮಾಡಿ: ಶಾಸಕ ಶರತ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಐಟಿಬಿಟಿ ನಗರವಾಗಿ ಗುರುತಿಸಿಕೊಂಡಂತೆ ಮೆಡಿಕಲ್ ಹಬ್ ಆಗಿ ಬೆಳೆಯಬೇಕೆಂದು ಶಾಸಕ ಶರತ್ ಬಚ್ಚೇಗೌಡ ಅಭಿಪ್ರಾಯಪಟ್ಟಿದ್ದಾರೆ. ಎಂವಿಜೆ ಆಸ್ಪತ್ರೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ವೈದ್ಯರ ಪಾತ್ರ ಮಹತ್ವದ್ದೆಂದು ಹೇಳಿದರು.

ಹೊಸಕೋಟೆ: ಇಡೀ ವಿಶ್ವದಲ್ಲಿ ಐಟಿಬಿಟಿ ನಗರ ಎಂದರೆ ಅದು ಬೆಂಗಳೂರು. ಅದೇ ರೀತಿ ಮೆಡಿಕಲ್ ತಂತ್ರಜ್ಞಾನದಲ್ಲಿ ಹಾಗೂ ಕಡಿಮೆ ಬೆಲೆಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಬೆಂಗಳೂರು ಮೆಡಿಕಲ್ ಹಬ್ ಎಂಬ ಹೆಗ್ಗಳಿಗೆಕೆ ಪಾತ್ರವಾಗಬೇಕು ಎಂದು ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಎಂವಿಜೆ ಮೆಡಿಕಲ್ ರಿಸರ್ಚ್ ಸೆಂಟರ್ ಹಾಗೂ ಸ್ಕೂಲ್ ಆಫ್‌ ನರ್ಸಿಂಗ್ ಕಾಲೇಜಿನ 25ನೇ ವಾರ್ಷಿಕೋತ್ಸವ ಪ್ರಯುಕ್ತ ಆಸ್ಪತ್ರೆಯ ನೂತನ ಲಾಂಛನ ಅನಾವರಣ ಮಾಡಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಪ್ರತಿ ಸಾವಿರ ಸಾರ್ವಜನಿಕರಿಗೆ ಒಬ್ಬ ವೈದ್ಯ ಮಾತ್ರ ಇದ್ದು ಪ್ರತಿ ಸಾವಿರ ಜನರಿಗೆ ಕನಿಷ್ಠ ಮೂರರಿಂದ ನಾಲ್ವರು ವೈದ್ಯರು ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ದೊರೆಯಲು ಸಾಧ್ಯ ಎಂದು ಹೇಳಿದರು. ಕೊರೋನಾ ಸಂದರ್ಭದಲ್ಲಿ ವೈದ್ಯರು ನೀಡಿದ ಸೇವೆ ಎಂದೂ ಮರೆಯಲಾಗದು. 

ದೇಶದಲ್ಲಿ ಲಕ್ಷಾಂತರ ವೈದ್ಯರು ಕೊರೋನಾ ಸಂದರ್ಭದಲ್ಲಿ ಮನೆಗಳಿಗೂ ತೆರಳದೆ ರೋಗಿಗಳಿಗೋಸ್ಕರ ಕರ್ತವ್ಯ ನಿರ್ವಹಿಸಿ ಕೋಟ್ಯಂತರ ಜೀವಗಳನ್ನು ಉಳಿಸಿದ್ದಾರೆ. ಅದೇ ರೀತಿ ನಗರದ ಹೆದ್ದಾರಿಯಲ್ಲಿರುವ ಎಂವಿಜೆ ಆಸ್ಪತ್ರೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್‌ರವರು ಖಾಸಗಿ ಆಸ್ಪತ್ರೆಗಳಿಗಿಂತ ಭಿನ್ನವಾಗಿ ಆಸ್ಪತ್ರೆ ನವೀಕರಿಸಲು ನೀಲನಕ್ಷೆ ಸಿದ್ದಪಡಿಸಿದ್ದು, ಮುಂದಿನ ಪೀಳಿಗೆಗೆ ಗುಣಮಟ್ಟದ ಸೇವೆ ಒದಗಿಸುವ ನಂಬಿಕೆ ಇದೆ ಎಂದರು.

ಎಂವಿಜೆ ಆಸ್ಪತ್ರೆಯ ಚೇರ್ಮನ್ ಎಂ.ಜೆ.ಮೋಹನ್ ಮಾತನಾಡಿ, ಈ ಭಾಗದಲ್ಲಿ ಆಸ್ಪತ್ರೆ ಪ್ರಾರಂಭಿಸಿ ಎರಡು ದಶಕಗಳಿಗೂ ಸೇವೆ ಸಲ್ಲಿಸುತ್ತಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಜಿಲ್ಲೆಯ ಲಕ್ಷಾಂತರ ರೋಗಿಗಳಿಗೆ ಉಚಿತ ಆರೋಗ್ಯ ಸೇವೆ ಸಲ್ಲಿಸುತ್ತಿದ್ದೇವೆ. ವೈದ್ಯರು ತಮ್ಮ ವೃತ್ತಿ ಧರ್ಮ ಪಾಲಿಸಬೇಕು. 31 ವರ್ಷಗಳ ಹಿಂದೆ ಅಂದಿನ ಶಾಸಕರಾಗಿದ್ದ ಬಿ.ಎನ್.ಬಚ್ಚೇಗೌಡರು ನಮ್ಮ ತಂದೆ ಜಯರಾಂ ಅವರಿಗೆ ಸ್ಥಳ ದೊರಕಿಸಿಕೊಟ್ಟ ಹಿನ್ನೆಲೆ ಇಂತಹ ದೊಡ್ಡ ಆಸ್ಪತ್ರೆ ನಿರ್ಮಿಸಿ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಎಂವಿಜೆ ಮೆಡಿಕಲ್ ಅಂಡ್ ರಿಸರ್ಚ್ ಸೆಂಟರ್ ನ ಕಾರ್ಯನಿರ್ವಹಣಾಧಿಕಾರಿ ಡಾ.ಧರಣಿ ಮೋಹನ್, ಪ್ರಾಂಶುಪಾಲ ರವೀಂದ್ರನ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರಸಿಲ್ಲಾ ನಿರ್ಮಲಾ, ರೋಟರಿ ಸೆಂಟ್ರಲ್ ಝೋನಲ್ ಛೇರ್ಮನ್ ಡಿ.ಎಸ್.ರಾಜ್ ಕುಮಾರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ ಮೂರ್ತಿ, ಸದಸ್ಯ ಡಾ.ಎಚ್.ಎಂ. ಸುಬ್ಬರಾಜ್, ಮಾಜಿ ಅದ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಬಿ.ವಿ.ಬೈರೇಗೌಡ, ಆರ್‌ಟಿಸಿ ಗೋವಿಂದರಾಜ್, ನವಾಜ್, ನಿಸಾರ್, ಆಸ್ಪತ್ರೆಯ ಮುಖ್ಯ ನಿರ್ವಾಹಕ ಡಾ ಪ್ರಮೋದ್ ಹಾಜರಿದ್ದರು.