ಮಕ್ಕಳು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತನ್ನಿ: ಶೇಖರಗೌಡ ರಾಮತ್ನಾಳ

| Published : Dec 14 2024, 12:47 AM IST

ಮಕ್ಕಳು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತನ್ನಿ: ಶೇಖರಗೌಡ ರಾಮತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ತಾಲೂಕಿನ ಕಲ್ಲತಾವರಗೇರಾ ಗ್ರಾಪಂ ವ್ಯಾಪ್ತಿಯ ದನಕನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಉದ್ಘಾಟಿಸಿದರು.

ಕೊಪ್ಪಳ: ಮಕ್ಕಳು ತಮ್ಮ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಸ್ಥಳೀಯ ಸರ್ಕಾರಕ್ಕೆ ತಿಳಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಹೇಳಿದರು.

ಶುಕ್ರವಾರ ಕೊಪ್ಪಳ ತಾಲೂಕಿನ ಕಲ್ಲತಾವರಗೇರಾ ಗ್ರಾಪಂ ವ್ಯಾಪ್ತಿಯ ದನಕನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಲು ಹಾಗೂ ಮಕ್ಕಳ ಭಾಗವಹಿಸುವ ಹಕ್ಕುಗಳನ್ನು ಪ್ರೇರೇಪಿಸಲು ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಒಂದು ದಿನ ಮಕ್ಕಳ ವಿಶೇಷ ಗ್ರಾಮಸಭೆ ಎಂಬ ವಿನೂತನವಾದ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಜಿಲ್ಲೆಯಲ್ಲಿ ಸುಮಾರು 10 ವರ್ಷಗಳಿಂದಲೂ ನಿರಂತರವಾಗಿ ಮಕ್ಕಳ ಗ್ರಾಮಸಭೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಗ್ರಾಮಸಭೆಗಳಲ್ಲಿ ಮಕ್ಕಳು ಸಲ್ಲಿಸುವ ಸಮಸ್ಯೆಗಳನ್ನು ಪರಿಹರಿಸಲು ಆಯೋಗವು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಅಲ್ಲದೇ ಮಕ್ಕಳು ಸಲ್ಲಿಸುವ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಪಂ ಮಟ್ಟದಲ್ಲಿ ಮಕ್ಕಳ ಆಯ-ವ್ಯಯ ಮಂಡಿಸಬೇಕು. ಗ್ರಾಪಂ ಒಟ್ಟು ಅನುದಾನದಲ್ಲಿ ಮಕ್ಕಳಿಗಾಗಿಯೇ ಶೇ. 5ರಷ್ಟು ಮೀಸಲಿಡಬಹುದಾಗಿದ್ದು, ಈ ಕುರಿತು ಕ್ರಮವಹಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರಕಾಶ ಕಡಗದ ಮಾತನಾಡಿ, ನಮ್ಮ ದೇಶವು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿರುತ್ತದೆ. ಮಕ್ಕಳಸ್ನೇಹಿ ವಾತಾವರಣ ನಿರ್ಮಿಸಲು ಹಾಗೂ ಭಾರತ ಸಂವಿಧಾನವು ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಲು ನೀಡಿರುವ ಅವಕಾಶಗಳನ್ವಯ ಮಕ್ಕಳಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ, ಮಕ್ಕಳ ರಕ್ಷಣೆ, ಮಕ್ಕಳ ಭಾಗವಹಿಸುವಿಕೆಯ ಹಕ್ಕುಗಳನ್ನು ಖಾತ್ರಿಪಡಿಸಲು 2024 ನ. 14ರಿಂದ 2025ರ ಜ. 24ರ ವರೆಗೆ 10 ವಾರಗಳ ಮಕ್ಕಳಸ್ನೇಹಿ ಗ್ರಾಪಂ ಅಭಿಯಾನ ಹಾಗೂ ಒಂದು ದಿನ ಮಕ್ಕಳ ವಿಶೇಷ ಗ್ರಾಮಸಭೆಗಳನ್ನು ಆಯೋಜಿಸಲು ಆದೇಶ ನೀಡಿದೆ. ಅದರನ್ವಯ ಗ್ರಾಮ ಸಭೆ ಆಯೋಜನೆಯೊಂದಿಗೆ 10 ವಾರಗಳ ಕಾಲ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಪಂ ಅಧ್ಯಕ್ಷ ಗಂಗಪ್ಪ ನಾಯಕ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ವೆಂಕೋಬ, ಪ್ರತಿಭಾ ಕಾಶಿಮಠ, ಶಿವಶರಣಪ್ಪ ಹಾಗೂ ಕಲ್ಲತಾವರಗೇರಾ ಗ್ರಾಪಂ ವ್ಯಾಪ್ತಿಯ ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಮನೂರಪ್ಪ ಕಬ್ಬಣ್ಣವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.