ಸಾರಾಂಶ
ಹುಬ್ಬಳ್ಳಿ: ಧಾರವಾಡ ನಗರಕ್ಕೆ ಪ್ರತ್ಯೇಕ ಪಾಲಿಕೆ ರೂಪಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸರ್ವ ಸದಸ್ಯರ ಸಹಮತವಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಈ ಕುರಿತು ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು ಎಂದು ಪಾಲಿಕೆ ನಿರ್ಣಯ ಕೈಗೊಂಡಿದೆ. ಎರಡು ದಿನದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದೆ.
ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಹೆಚ್ಚುವರಿಯಾಗಿ ವಿಷಯವನ್ನು ಕೈಗೆತ್ತಿಕೊಳ್ಳಲಾಯಿತು.ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯಿಂದ ಧಾರವಾಡ ನಗರವನ್ನು ಪ್ರತ್ಯೇಕ ಪಾಲಿಕೆಯನ್ನಾಗಿ ರೂಪಿಸಲು ಪಕ್ಷಬೇದ ಮರೆತು ಸರ್ವ ಸದಸ್ಯರ ಸಹಮತ ವ್ಯಕ್ತಪಡಿಸಿದರು. ಪ್ರತೇಕ ಪಾಲಿಕೆಗೆ ಬೇಕಾದ ಎಲ್ಲ ಕ್ರಮಗಳನ್ನು ಶೀಘ್ರ ಕೈಗೊಳ್ಳಬೇಕು. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರ ಈ ಕುರಿತು ಸ್ಪಷ್ಟ ನಿರ್ಣಯ ಕೈಗೊಳ್ಳಬೇಕೆಂದು ನಿರ್ಣಯ ಅಂಗೀಕರಿಸಿತು.
ಪ್ರತ್ಯೇಕ ಪಾಲಿಕೆ ರಚನೆಗೆ ಸಂಬಂಧಿಸಿ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಚಿವ ಎಚ್.ಕೆ. ಪಾಟೀಲ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಸೇರಿದಂತೆ ಹಲವು ಪ್ರಮುಖರು ಸಹಮತ ವ್ಯಕ್ತಪಡಿಸಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರತ್ಯೇಕ ಪಾಲಿಕೆಗೆ ಬೇಕಾದ ಎಲ್ಲ ಮಾನದಂಡಗಳನ್ನು ಧಾರವಾಡ ಒಳಗೊಂಡಿದೆ. ಹಾಗಾಗಿ, ಇದಕ್ಕೆ ಸಂಬಂಧಿಸಿ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಬೇಕೆಂದು ಬಿಜೆಪಿ-ಕಾಂಗ್ರೆಸ್ ಸದಸ್ಯರು ಪಕ್ಷಾತೀತವಾಗಿ ಒಕ್ಕೊರಲಿನಿಂದ ಒತ್ತಾಯ ಮಾಡಿದರು. ಇದನ್ನು ಮಾನ್ಯ ಮಾಡಿದ ಮೇಯರ್ ರಾಮಣ್ಣ ಬಡಿಗೇರ, ರಾಮಕೃಷ್ಣ ಹೆಗಡೆ ಅವರ ಆಶಯದಂತೆ ಆಡಳಿತ ವಿಕೇಂದ್ರೀಕರಣದಿಂದ ಜನರಿಗೆ ಅನುಕೂಲವಾಗಲಿದೆ. ಸರಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಆದೇಶ ನೀಡುವುದಾಗಿ ರೂಲಿಂಗ್ ನೀಡಿದರು. ಎಲ್ಲ ಸದಸ್ಯರು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿ ಕೇಕೆ ಹಾಕಿದರು. ಈ ನಡುವೆ ಈರೇಶ ಅಂಚಟಗೇರಿ, ಹು-ಧಾ ಅಭಿವೃದ್ಧಿ ಪ್ರಾಧಿಕಾರ (ಹುಡಾ)ವನ್ನೂ ವಿಭಜಿಸಿ ಪ್ರತ್ಯೇಕ ಧಾರವಾಡ ಅಭಿವೃದ್ಧಿ ಪ್ರಾಧಿಕಾರ ರಚನೆಗೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.₹100 ಕೋಟಿ ಬಿಲ್ ಬಾಕಿ
ಮಹಾನಗರ ಪಾಲಿಕೆಯಲ್ಲಿ ಯಾವೊಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆಡಳಿತರೂಢ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಲಸ ಇಲ್ಲವೆಂದು ಕಾಂಟ್ರಾಕ್ಟರ್‌ಗಳು ಗೋಳು ಹೋಯ್ದುಕೊಳ್ಳುತ್ತಿದ್ದಾರೆ. ಹಳೆ ಬಿಲ್ ಕೂಡ ಬರುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಎಂದು ವೀರಣ್ಣ ಸವಡಿ ಗಮನಸೆಳೆದರು.ಗುತ್ತಿಗೆದಾರರಿಗೆ ₹100 ಕೋಟಿ ಬಿಲ್ ಬಾಕಿ ಇದೆ ಎಂದು ಮುಖ್ಯಲೆಕ್ಕಾಧಿಕಾರಿ ವಿಶ್ವನಾಥ ಸಭೆಯಲ್ಲಿ ತಿಳಿಸುವ ಮೂಲಕ ಪಾಲಿಕೆಯ ಅರ್ಥಿಕ ಪರಿಸ್ಥಿತಿಯನ್ನು ಬಹಿರಂಗಗೊಳಿಸಿದರು. ಅಧಿಕಾರಿಗಳ್ಯಾರೂ ಕೆಲಸ ಮಾಡುತ್ತಿಲ್ಲ. ಸಭಾಭವನ ನಿರ್ಮಾಣ ನನೆಗುದಿಗೆ ಬಿದ್ದಿದೆ. ಪಾಲಿಕೆ ವ್ಯಾಪ್ತಿ ವಿಸ್ತರಣಾ ಕಾರ್ಯ ನಿಂತು ಹೋಗಿದೆ. ನಾವೆಲ್ಲ ಮುಂದೆ ಹೋಗೋಣ್ವಾ ಅಥವಾ ಇಲ್ಲೆ ಉಳಿಯೋಣ್ವಾ? ಹೀಗೆ ನಿರ್ಲಕ್ಷ್ಯ ಮುಂದುವರಿದರೆ ಧರಣಿ ನಡೆಸಬೇಕಾಗುತ್ತದೆ ಎಂದರು.
ಸಾಲ ವಸೂಲಾತಿಪಾಲಿಕೆಯ ಬಾಕಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಬಾಕಿ ವಸೂಲಿಗೆ ಮಹಿಳಾ ಸ್ವ ಸಂಘಗಳಿಗೆ ಜವಾಬ್ದಾರಿ ನೀಡುವ ಪ್ರಸ್ತಾವನೆಯನ್ನು ಪಾಲಿಕೆ ಸಾಮಾನ್ಯ ಸಭೆ ತಡೆ ಹಿಡಿದಿದೆ. ನೀರಿನ ಬಾಕಿ ವಸೂಲಿ ಕೆಲಸ ಎಲ್ ಆ್ಯಂಡ್ ಟಿ ಕೆಲಸ. ಇನ್ನು ಪಾಲಿಕೆ ಆಸ್ತಿ ತೆರಿಗೆ ವಸೂಲಿ ಪಾಲಿಕೆಯವರು ಮಾಡುತ್ತಿದ್ದಾರೆ. ಮಹಿಳಾ ಸಂಘಗಳು ಏಕೆ. ಪಾಲಿಕೆ ಅಧಿಕಾರಿಗಳೇ ಹೋದರೂ ಸಂಸ್ಥೆಗಳು ಒಳಗೆ ಕರೆಯುವುದಿಲ್ಲ. ಇನ್ನು ಮಹಿಳೆಯರಿಗೆ ಅವಕಾಶ ಕೊಡುತ್ತಾರೆಯೇ ಎಂಬುದನ್ನು ಪ್ರ್ಯಾಕ್ಟಿಕಲ್ ಆಗಿ ಯೋಚಿಸಬೇಕು. ಬೆಂಗಳೂರಲ್ಲಿ ಕುಳಿತು ಐಎಎಸ್ ಅಧಿಕಾರಿಗಳು ಆದೇಶ ಹೊರಡಿಸಿದರೆ ಸರಿ ಹೊಂದುವುದಿಲ್ಲ ಎಂದರು.
ಅದಕ್ಕೆ ಸುವರ್ಣ ಕಲ್ಲಕುಂಟ್ಲಾ, ಮಹಿಳೆಯರು ಎಲ್ಲ ರಂಗದಲ್ಲೂ ಇದ್ದಾರೆ. ಎಲ್ಲದಕ್ಕೂ ಸಬಲರಾಗಿದ್ದಾರೆ. ಆದಕಾರಣ ಮಹಿಳಾ ಸಂಘಗಳಿಗೆ ವಸೂಲಾತಿಗೆ ಕೊಡಲು ಅಭ್ಯಂತರವಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸವಡಿ, ಹೆಣ್ಮಕ್ಕಳು ಸಾಮರ್ಥ್ಯ ಹೊಂದಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಮಹಿಳೆಯರಿಗೆ ಸರಿಯಾಗಿ ರಕ್ಷಣೆ ಸಿಗಲ್ಲ ಎಂಬ ಕಾರಣಕ್ಕೆ ಆಕ್ಷೇಪಿಸಿದ್ದೇನೆ ಅಷ್ಟೇ ಎಂದರು.