ಸಾರಾಂಶ
ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವು ಪ್ರಕರಣದ ತನಿಖಾ ವರದಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವಾಗಿಲ್ಲ. ಪ್ರಕರಣದಲ್ಲಿ ವೈದ್ಯಾಧಿಕಾರಿಗಳು ಹಾಗೂ ವೈದ್ಯರ ಯಾವುದೇ ಪಾತ್ರವಿಲ್ಲ ಎಂದು ವರದಿಯಲ್ಲಿ ವೈದ್ಯರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನ.9 ರಿಂದ 11ವರೆಗೆ ನಡೆದ ಹೆರಿಗೆ ಹಾಗೂ ಸಿಜರಿನ್ ಬಳಿಕ ಇಬ್ಬರು ಬಾಣಂತಿಯರು ಮೃತಪಟ್ಟಿದ್ದರು. ಅನೇಕರ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಾಣಂತಿರ ಸಾವು ಪ್ರಕರಣಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದರು.ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಮೂರು ಜನರ ತಂಡವನ್ನು ಆರೋಗ್ಯ ಇಲಾಖೆ ರಚಿಸಿತ್ತು. ನ.14ರಂದು ಬಳ್ಳಾರಿಯ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ತನಿಖಾ ತಂಡ, ಕೂಲಕುಂಷವಾಗಿ ಪರಿಶೀಲಿಸಿ, ಬಳಿಕ ವರದಿಯನ್ನು ಇಲಾಖೆಗೆ ಸಲ್ಲಿಸಿದ್ದರು.
ಆಸ್ಪತ್ರೆಯ ಚಿಕಿತ್ಸಾ ವಿಧಾನದಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ತುರ್ತು ಚಿಕಿತ್ಸಾ ಘಟಕದಲ್ಲೂ ಲೋಪವಾಗಿಲ್ಲ. ಗುಣಮಟ್ಟದ ಚಿಕಿತ್ಸೆ ನೀಡಿದ ಹೊರತಾಗಿಯೂ ಸಾವು ಸಂಭವಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.ಈ ಕುರಿತು ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವರು, ಬಾಣಂತಿಯರ ಸಾವಿಗೆ ಕೆಲ ವೈದ್ಯಕೀಯ ಉತ್ಪನ್ನಗಳು ಕಾರಣ ಎಂದು ಕಂಡು ಬರುತ್ತಿದೆ. ಪಶ್ಚಿಮ ಬಂಗಾಳದ ಫರ್ಮಾಸ್ಯುಟಿಕಲ್ಸ್ ಎಂಬ ಸಂಸ್ಥೆ ಸರಬರಾಜು ಮಾಡಿದ ಐವಿ ದ್ರವದ ಉಪಯೋಗ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಕೆಯಿದೆ. ಈ ಸಂಸ್ಥೆ ತಯಾರಿಸಿದ ಎರಡು ಬ್ಯಾಚುಗಳ ದ್ರಾವಣವನ್ನು ಔಷಧ ನಿಯಂತ್ರಣ ಇಲಾಖೆ ಗುಣಮಟ್ಟವಿಲ್ಲ ಎಂದು ಹೇಳಿದ್ದರಿಂದ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಈ ಸಂಸ್ಥೆಯ 192 ಬ್ಯಾಚುಗಳ ಉತ್ಪನ್ನಗಳನ್ನು ತಡೆ ಹಿಡಿದಿತ್ತು. ಬಳಿಕ ಕೇಂದ್ರ ಔಷಧ ಪ್ರಯೋಗಾಲಯ ಪಶ್ಚಿಮ ಬಂಗಾಲ ಫಾರ್ಮಸ್ಯುಟಿಕಲ್ಸ್ ನ 84 ಬ್ಯಾಚುಗಳ ಐವಿ ದ್ರಾವಣವನ್ನು ಬಳಸಲು ಅನುಮತಿ ನೀಡಿತ್ತು. ಆದರೆ, ಬಳ್ಳಾರಿಯಲ್ಲಿ ನಡೆದ ಘಟನೆ ಬಳಿಕ ಸಂಸ್ಥೆಯ ಉತ್ಪನ್ನಗಳನ್ನು ಹಿಂಪಡೆಯಲಾಗಿದೆ. ಐವಿ ದ್ರಾವಣವನ್ನು ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಬಿಮ್ಸ್ ಬಾಣಂತಿಯರ ಸಾವು ಪ್ರಕರಣ ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಬೇಕು ಆಗ್ರಹಿಸಿದ್ದಾರೆ.