ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ/ ಸಿರಿಗೆರೆ
ಮಾಜಿ ಸಚಿವ ಹೆಚ್.ಆಂಜನೇಯ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡುವಂತೆ ಅವರ ಅನುಯಾಯಿಗಳು ಆಗ್ರಹ ಪಡಿಸಿದ್ದಾರೆ. ಈ ಸಂಬಂಧ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ತಮ್ಮ ರಾಜಕೀಯ ಜೀವನುದ್ದಕ್ಕೂ ಆಂಜನೇಯ ಅವರು ಹಿಂದುಳಿದವರು, ಶೋಷಿತರ ಪರವಾಗಿಯೇ ಕಾರ್ಯನಿರ್ವಹಿಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲ ಆಶಯಗಳು ಅವರ ರಾಜಕೀಯ ಬದುಕಿನಲ್ಲಿವೆ. ಪ್ರಸ್ತುತ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಸದಸ್ಯರ ನೇಮಕ ಮಾಡುವ ಸಂದರ್ಭದಲ್ಲಿ ಆಂಜನೇಯ ಅವರನ್ನು ಪರಗಿಣಿಸಬೇಕೆಂದರು.ಆಂಜನೇಯ ಅವರಿಗೆ ರಾಜ್ಯದಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ. ಶೋಷಿತರು ಹಾಗೂ ಅಲ್ಪ ಸಂಖ್ಯಾತರು ಅವರನ್ನು ವಿಶೇಷವಾಗಿ ಇಷ್ಟ ಪಡುತ್ತಾರೆ. ಪೌರ ಕಾರ್ಮಿಕರ ನಾಯಕರಾಗಿ ರಾಜಕೀಯ ಪ್ರವೇಶ ಪಡೆದ ಆಂಜನೇಯ ಇಂದಿಗೂ ಅವರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೆವಾಲ ಇವರು ಹೆಚ್.ಆಂಜನೇಯರವರು ಪಕ್ಷಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ವಿಧಾನ ಪರಿಷತ್‍ಗೆ ನೇಮಕ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ರಾಜ್ಯದ ಪರಿಶಿಷ್ಟರಲ್ಲಿನ ಎಡಗೈ ಸಮುದಾಯಕ್ಕೆ ಸೇರಿರುವ ಆಂಜನೇಯ ಅವರಿಗೆ ಸಮುದಾಯದ ಪ್ರಾತನಿಧ್ಯದ ಭಾಗವಾಗಿ ಅವಕಾಶ ಕಲ್ಪಿಸುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಭಾಗ. ಆಂಜನೇಯ ಅವರಂಥ ನಾಯಕರ ಸೇವೆ ಕಾಂಗ್ರೆಸ್ ಗೆ ಅಗತ್ಯವಿದೆ. ಸಮಾಜ ಕಲ್ಯಾಣ ಸಚಿವರಾಗಿ ಅವರು ಸಲ್ಲಿಸಿರುವ ಸೇವೆ ರಾಜ್ಯಕ್ಕೆ ಮಾದರಿ. ವಿಧಾನ ಪರಿಷತ್‌ನಲ್ಲಿ ಶೋಷತರಿಗೆ ದನಿಯಾಗಲು ಆಂಜನೇಯ ಅವರಂತಹ ನಾಯಕರ ಅಗತ್ಯವಿದೆ. ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸುವಂತೆ ವಿನಂತಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ ಮಾತನಾಡಿ, ಹೆಚ್.ಆಂಜನೇಯರವರು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಶೋಷಿತರ ಪರವಾಗಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿರುವುದರ ಜೊತೆಗೆ ರಾಜ್ಯವನ್ನು ಸುತ್ತಿದ್ದಾರೆ. ಅಂತಹ ನಾಯಕನನ್ನು ವಿಧಾನ ಪರಿಷತ್‍ಗೆ ನಾಮ ನಿರ್ದೇಶನ ಮಾಡಿ ಕೊಳ್ಳಬೇಕೆಂದು ಆಗ್ರಹಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಬಿ.ಪಿ.ಪ್ರಕಾಶ್‍ಮೂರ್ತಿ, ಶಿವಮೂರ್ತಿ ಇದ್ದರು.ಪರಿಷತ್ತಿಗೆ ಮಾಜಿ ಸಚಿವ ಆಂಜನೇಯ ಆಯ್ಕೆ ಆಗಲಿ: ಸೀಗೇಹಳ್ಳಿ ಎಸ್.ಸಿ.ರಾಜುಸಿರಿಗೆರೆ: ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಸಚಿವ ಎಚ್. ಆಂಜನೇಯ ಆಯ್ಕೆ ಆಗುವಂತೆ ಪಕ್ಷದ ಹಿರಿಯ ಮುಖಂಡರು ನಿರ್ಧರಿಸುವಂತೆ ಯುವ ಕಾಂಗ್ರೆಸ್ ಮುಖಂಡ ಸೀಗೇಹಳ್ಳಿ ಎಸ್.ಸಿ.ರಾಜು ಮನವಿ ಮಾಡಿದ್ದಾರೆ.
ಎಚ್.ಆಂಜನೇಯ ದಲಿತರ ಪರವಾದ ಧ್ವನಿ ಎತ್ತುವ ಶಕ್ತಿ. ಹೊಳಲ್ಕೆರೆ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಮತದ ಸೋಲುಂಡರೂ ಲೆಕ್ಕಿಸದೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಕಾರ್ಯಕರ್ತರೊಡನೆ ದುಡಿದಿದ್ದಾರೆ. ಅಂತಹ ವ್ಯಕ್ತಿಯನ್ನು ಪಕ್ಷವು ನಿರ್ಲಕ್ಷ್ಯ ಮಾಡಬಾರದು.ಆಂಜನೇಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇದ್ದಂತೆ. ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುವುದು ಅಪೇಕ್ಷಣೀಯ. ಆಂಜನೇಯರ ವರಂತಹ ನಾಯಕರನ್ನು ಪಕ್ಷವು ಕಡೆಗಣಿಸಬಾರದು ಎಂದು ರಾಜು ಹೇಳಿದರು.ಮುಂದೆ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಬರಲಿವೆ. ಆ ಹಿನ್ನೆಲೆಯಲ್ಲಿ ಪಕ್ಷಕ್ಕೆ ನೆರವಾಗುವಂತಹ ನಾಯಕನ ಆಯ್ಕೆ ಮಾಡಿ ವಿಧಾನ ಪರಿಷತ್ತಿಗೆ ಕಳುಹಿಸಬೇಕಾಗಿದೆ ಎಂದರು.