ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ಯೋಜನೆ (ವಿಬಿ-ಜಿ ರಾಮ್ ಜಿ) ಅನುಷ್ಠಾನಗೊಂಡಿದ್ದು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಾಪಂ ಇಒ ಬಿ.ಎಸ್.ಸತೀಶ್ ತಿಳಿಸಿದರು.

ತಾಲೂಕಿನ ದೇವಲಾಪುರ ಗ್ರಾಪಂ ವ್ಯಾಪ್ತಿಯ ಅರಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾ‌ರ್ ಮತ್ತು ಅಜೀವಿಕಾ ಮಿಷನ್ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರನ್ನು ಆರ್ಥಿಕವಾಗಿ ಸ್ವಾವಲಂಬನೆ ಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ಯೋಜನೆಯು ಜು.1ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಿದೆ. ಈ ಯೋಜನೆಯನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಹಳ್ಳಿಗಾಡಿನ ಜನರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿಯನ್ನು ಕಡಿಮೆ ಮಾಡಿ ಸ್ವಂತ ಊರಿನಲ್ಲಿಯೇ ಉದ್ಯೋಗ ಮತ್ತು ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.


ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ಸರ್ಕಾರವು ಗ್ರಾಮೀಣ ಕುಟುಂಬಗಳಿಗೆ ಒಂದು ವರ್ಷದಲ್ಲಿ 100 ದಿನಗಳಿಂದ 125 ದಿನಗಳ ಉದ್ಯೋಗ ಖಾತ್ರಿ ನೀಡುವ ಮೂಲಕ ಬಡ ಕಾರ್ಮಿಕರ ಬದುಕಿಗೆ ಮತ್ತಷ್ಟು ಭದ್ರತೆ ಒದಗಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಯೋಜನೆಯಡಿ ಈಗಾಗಲೇ ನೀಡಿರುವ ಉದ್ಯೋಗ ಚೀಟಿಗಳು ಚಾಲ್ತಿಯಲ್ಲಿರುತ್ತವೆ. ಕಾರ್ಮಿಕರು ಹೊಸದಾಗಿ ನೋಂದಣಿ ಮಾಡುವ ಅಗತ್ಯವಿಲ್ಲ. ಈ ಯೋಜನೆಯಲ್ಲಿ 318 ಕಾಮಗಾರಿ ಯನ್ನು ಅನುಷ್ಠಾನ ಮಾಡಲು ಅವಕಾಶವಿದೆ ಎಂದರು.

ಈ ವೇಳೆ ತಾಪಂ ಸಹಾಯಕ ನಿರ್ದೇಶಕ ಎಸ್.ಸುರೇಂದ್ರ, ಗ್ರಾಪಂ ಕಾರ್ಯದರ್ಶಿ ನವೀನ್ ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.