ಲಕ್ಕುಂಡಿ ಯುನೆಸ್ಕೋ ಪಟ್ಟಿಗೆ ಸೇರುವಂತೆ ಮಾಡಿ

| Published : Nov 25 2024, 01:03 AM IST

ಸಾರಾಂಶ

ಇಂದು ಜಾಗೃತರಾಗಿ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಶ್ರೀಮಂತಿಕೆ ಜಗತ್ತಿಗೆ ಪರಿಚಯಿಸಿ ಲಕ್ಕುಂಡಿಯು ಜಾಗತಿಕ, ಪಾರಂಪರಿಕ ಪಟ್ಟಿಯಲ್ಲಿ ಸೇರುವುದು ಸನ್ನಿಹಿತ

ಗದಗ: ಇತಿಹಾಸ, ಪರಂಪರೆ, ಸಂಸ್ಕೃತಿ ಶ್ರೀಮಂತಿಕೆ, ಶಿಲ್ಪಕಲೆ, ಶಾಸನಗಳನ್ನು ಹೊಂದಿರುವ ಲಕ್ಕುಂಡಿಯ ಗತಕಾಲದ ವೈಭವ ಮರುಕಳಿಸಿ ಲಕ್ಕುಂಡಿಯ ಮಹತ್ವ ಜಗತ್ತಿಗೆ ತೋರಿಸಿ ಯುನೆಸ್ಕೋ ಪಟ್ಟಿಗೆ ಸೇರಿಸುವಂತೆ ಮಾಡಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಭಾನುವಾರ ಗದಗ ತಾಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.ಲಕ್ಕುಂಡಿ, ಲೊಕ್ಕಿಗುಂಡಿ ಎಂಬ ಹೆಸರಿನಿಂದ ರಾಮಾಯಣ, ಮಹಾಭಾರತದ ಕಾಲದಿಂದಲೂ ಪ್ರಸಿದ್ಧಿ ಹೊಂದಿದೆ. ಇಲ್ಲಿಯವರೆಗೆ ಲಕ್ಕುಂಡಿಯ ಇತಿಹಾಸ, ಶಿಲ್ಪಕಲೆ, ಶಾಸನ ನಿರ್ಲಕ್ಷ್ಯಮಾಡಲಾಗಿತ್ತು. ಇಂದು ಜಾಗೃತರಾಗಿ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಶ್ರೀಮಂತಿಕೆ ಜಗತ್ತಿಗೆ ಪರಿಚಯಿಸಿ ಲಕ್ಕುಂಡಿಯು ಜಾಗತಿಕ, ಪಾರಂಪರಿಕ ಪಟ್ಟಿಯಲ್ಲಿ ಸೇರುವುದು ಸನ್ನಿಹಿತವಾಗಿದೆ. ಯುನೆಸ್ಕೋ ಆ ಸ್ಥಾನಮಾನ ಕೊಡುವುದಕ್ಕೆ ಬಹಳ ದಿನ ಬೇಕಾಗಿಲ್ಲ.

ವಿಶೇಷ ದೇವಸ್ಥಾನಗಳ ಇತಿಹಾಸ ಹೊಂದಿರುವ ಲಕ್ಕುಂಡಿಯಲ್ಲಿ ಪ್ರಾಚ್ಯಾಶೇಷಗಳ ಸಂಗ್ರಹಣೆ ಮೂಲಕ ಹುದುಗಿ ಹೋಗಿರುವ ದೇವಸ್ಥಾನ ಹಾಗೂ ಬಾವಿಗಳ ಅನ್ವೇಷಣೆ ಹಾಗೂ ಮರುಸೃಷ್ಟಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಲಕ್ಕುಂಡಿಯಲ್ಲಿರುವ ಶಾಸನಗಳು ಹಾಗೂ ಶಿಲ್ಪಕಲೆ ಕೆಲವರು ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ, ಕೆಲವರು ಕುರಿ, ಆಕಳು ಕಟ್ಟಿದ್ದಾರೆ. ಅವುಗಳ‌ ಮಹತ್ವ ತಿಳಿಸಿ ಅವುಗಳನ್ನು ಒಂದೆಡೆ ಸಂಗ್ರಹಿಸೋಣ.

ಲಕ್ಕುಂಡಿಯಲ್ಲಿ ಕೈಗೊಂಡಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆ ರಾಜ್ಯಕ್ಕೆ ದಿಕ್ಸೂಚಿ ಯಾಗಬೇಕು. ಇದರ ಪ್ರೇರಣೆ ಕರ್ನಾಟಕದ ತುಂಬೆಲ್ಲ ಹರಡಬೇಕು. ಜೀರ್ಣೋದ್ಧಾರ ಆಗಬೇಕು ಎಂದರು.

ನರಗುಂದ ಶಾಸಕ ಮಾಜಿ ಸಚಿವ ಸಿ.ಸಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಈ ರೀತಿಯ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮ ನಡೆಯುತ್ತಿರುವುದು ಪ್ರಥಮ ಬಾರಿಗೆ ಆಗಿದೆ. ನರಗುಂದ ವಿಧಾನ ಸಭಾ ಕ್ಷೇತ್ರದ ದಾನದ ಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿದ್ದು ತುಂಬಾ ಸಂತೋಷ ತಂದಿದೆ ಎಂದರು.

ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಲಕ್ಕುಂಡಿ ಗ್ರಾಪಂ ಅಧ್ಯಕ್ಷ ಕೆಂಚಪ್ಪ ಪೂಜಾರ್, ಲಕ್ಕುಂಡಿ ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಎಸ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್‌ ಬಬರ್ಚಿ, ವಾಸಣ್ಣ ಕುರಡಗಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಮ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ. ರಾಜೇಂದ್ರ, ಡಿಸಿ ಗೋವಿಂದರೆಡ್ಡಿ, ಎಸ್ಪಿ ಬಿ.ಎಸ್. ನೇಮಗೌಡ, ಮೈಸೂರಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು.ಎ, ಗ್ರಾಮೀಣಾಭಿವೃದ್ಧಿ ವಿವಿ ಕುಲಪತಿ ಸುರೇಶ ನಾಡಗೌಡರ, ಜಾನಪದ ವಿವಿ ಕುಲಪತಿ ಟಿ.ಎಂ. ಬಾಸ್ಕರ್, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ, ರಾವ್, ಅ.ಧ. ಕಟ್ಟಿಮನಿ, ಉಮೇಶಗೌಡ ಪಾಟೀಲ, ಹನುಮಾಕ್ಷಿ ಗೋಗಿ, ಹಂಪಿ ವಿಶ್ವವಿದ್ಯಾಲಯ ಕುಲಪತಿ ಡಿ.ವಿ. ಪರಮಶಿವ ಮೂರ್ತಿ, ದೇವರಕೊಂಡ ರೆಡ್ಡಿ, ಲಕ್ಕುಂಡಿ ಗ್ರಾಪಂ ಸರ್ವ ಸದ್ಯಸರು ಹಾಜರಿದ್ದರು.24ಜಿಡಿಜಿ15

ಕಾರ್ಯಕ್ರಮವನ್ನು ಉದ್ದೇಶಿಸಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು.