ಸಾರಾಂಶ
ರೋಡ್‌ಶೋ ಆಗಮಿಸುವ ಏಳೆಂಟು ಕಡೆಗಳಲ್ಲಿ ತುಸು ಎತ್ತರದ ವೇದಿಕೆಯಲ್ಲಿ ಕರಾವಳಿಯ ಜಾನಪದ ಸೊಗಡನ್ನು ಪ್ರಧಾನಿಗೆ ಪರಿಚಯಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಏ.14ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ಬೃಹತ್ ರೋಡ್‌ಶೋ ನಡೆಸಲಿದ್ದಾರೆ. ಪ್ರಧಾನಿ ಅವರನ್ನು ಸಮೀಪದಿಂದ ಕಾಣುವ ಉತ್ತಮ ಅವಕಾಶ ಇದಾಗಿದ್ದು, ಮಂಗಳೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ರೋಡ್‌ಶೋ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ. ಈಗಾಗಲೇ ಮಂಗಳೂರು ಜನತೆಗೆ ಮೋದಿ ರೋಡ್‌ಶೋನಲ್ಲಿ ಪಾಲ್ಗೊಳ್ಳುವಂತೆ ಮನೆ ಮನೆಗೆ ಆಹ್ವಾನ ನೀಡಲಾಗಿದೆ ಎಂದರು.
ಮಾಲಾರ್ಪಣೆ ಬಳಿಕ ರೋಡ್‌ಶೋ: ಲೇಡಿಹಿಲ್‌ನ ನಾರಾಯಣಗುರು ವೃತ್ತದಿಂದ ಲಾಲ್‌ಬಾಗ್, ಪಿವಿಎಸ್ ಆಗಿ ನವಭಾರತ ವೃತ್ತ ವರೆಗೆ ಮೋದಿ ಅವರ ರೋಡ್‌ಶೋ ನಡೆಯಲಿದೆ. 2.ಕಿ.ಮೀ. ದೂರದ ಈ ದಾರಿಯುದ್ಧಕ್ಕೂ ಕೇಸರಿ, ಬಿಜೆಪಿ ಧ್ವಜ, ಪತಾಕೆಗಳಿಂದ ಅಲಂಕರಿಸಲಾಗಿದೆ. ಮೋದಿ ಅವರು ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್‌ಶೋ ಆರಂಭಿಸಲಿದ್ದಾರೆ ಎಂದರು. ಜಾನಪದ ಸೊಗಡು ಪರಿಚಯ: ರೋಡ್‌ಶೋ ಆಗಮಿಸುವ ಏಳೆಂಟು ಕಡೆಗಳಲ್ಲಿ ತುಸು ಎತ್ತರದ ವೇದಿಕೆಯಲ್ಲಿ ಕರಾವಳಿಯ ಜಾನಪದ ಸೊಗಡನ್ನು ಪ್ರಧಾನಿಗೆ ಪರಿಚಯಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಲ್ಲದೆ ಆಯ್ದ ಸ್ಥಳಗಳಲ್ಲಿ ಪಕ್ಷದ ನಾಯಕರು ನಿಂತು ರೋಡ್‌ಶೋ ವೀಕ್ಷಿಸಲಿದ್ದಾರೆ. ಸುಮಾರು ಐದು ಸಾವಿರ ಕೇಜಿಯ ಪುಷ್ಪಗಳ ವೃಷ್ಟಿಯನ್ನು ಪ್ರಧಾನಿ ರೋಡ್‌ಶೋ ವೇಳೆ ಮಾಡಲಾಗುವುದು. ರೋಡ್‌ಶೋಗೆ ಆಗಮಿಸುವ ಪ್ರಧಾನಿಗೆ ಮಂಗಳೂರಿನ ಜನತೆಯ ಪರವಾಗಿ ನೆನಪಿನ ಕಾಣಿಕೆ ನೀಡಲಾಗುವುದು ಎಂದರು. ರಾತ್ರಿ 7 ಗಂಟೆ ಮೊದಲು ಬನ್ನಿ: ರೋಡ್‌ಶೋ ನಡೆಯುವ ಇಕ್ಕೆಲಗಳಲ್ಲೂ ಭಾರಿ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ನಿಂತು ವೀಕ್ಷಿಸಲಿದ್ದಾರೆ. ರೋಡ್‌ಶೋ ರಾತ್ರಿ 7.45ಕ್ಕೆ ಆರಂಭವಾಗಿದ್ದು, 8.45ಕ್ಕೆ ಮುಕ್ತಾಯವಾಗಲಿದೆ. ಹಾಗಾಗಿ ರೋಡ್‌ಶೋಗೆ ಆಗಮಿಸುವವರು ರಾತ್ರಿ 7 ಗಂಟೆ ಮೊದಲು ಬ್ಯಾರಿಕೇಡ್‌ಗಳ ಬಳಿ ಉಪಸ್ಥಿತರಿರಬೇಕು. ಇದರಿಂದ ಟ್ರಾಫಿಕ್ ಹಾಗೂ ತಪಾಸಣೆ ವಿಳಂಬವನ್ನು ತಪ್ಪಿಸಬಹುದು ಎಂದರು.ಮೋದಿ ರೋಡ್‌ಶೋ ವಿಳಂಬವಾಗಿ 7.45ಕ್ಕೆ ಶುರು: ಶಾಸಕ ಸುನಿಲ್ ಕುಮಾರ್ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ನಡೆಸುವ ಮಂಗಳೂರು ರೋಡ್‌ಶೋ ಸಮಯ ಬದಲಾವಣೆಯಾಗಿದೆ.
ನಿಗದಿತ ರಾತ್ರಿ 7 ಗಂಟೆ ಬದಲು ರಾತ್ರಿ 7.45ಕ್ಕೆ ರೋಡ್‌ಶೋ ನಡೆಸಲಿದ್ದಾರೆ. ಸುಮಾರು ಒಂದು ಗಂಟೆ ಕಾಲ ಅಂದರೆ, 8.45ರ ವರೆಗೆ ರೋಡ್‌ಶೋ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಮಂಗಳೂರಲ್ಲಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.ಲೇಡಿಹಿಲ್ ನಾರಾಯಣಗುರು ವೃತ್ತದಲ್ಲಿ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೋದಿಯವರ ರೋಡ್‌ಶೋಗೆ ಚಾಲನೆ ಸಿಗಲಿದೆ. ಅಲ್ಲಿಂದ ತೆರೆದ ವಿಶೇಷ ವಾಹನದಲ್ಲಿ ಬಿಗು ಭದ್ರತೆಯೊಂದಿಗೆ ಮೋದಿ ರೋಡ್‌ಶೋ ನಡೆಸಲಿದ್ದಾರೆ. ಈ ಸಂದರ್ಭ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಸಾಥ್ ನೀಡಲಿದ್ದಾರೆ ಎಂದರು.