ಸಾರಾಂಶ
ಯಲಬುರ್ಗಾ: ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಈ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಕಾಂಗ್ರೆಸ್ ಪಕ್ಷ ಎಷ್ಟೇ ತಿಪ್ಪರಲಾಗ ಹಾಕಿದರೂ ಅದು ಸಾಧ್ಯವಾಗುವುದಿಲ್ಲ ಎಂದು ನಮೋ ಯುವ ಬ್ರಿಗೇಡ್ ಸಂಸ್ಥಾಪಕ ಸೂಲಿಬೆಲೆ ಚಕ್ರವರ್ತಿ ಹೇಳಿದರು.ಪಟ್ಟಣದ ಬಯಲು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ನಮೋ ಯುವ ಬ್ರಿಗೇಡ್ ತಾಲೂಕು ಘಟಕದಿಂದ ಆಯೋಜಿಸಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸಾಧನೆ ಗುರುತಿಸಿ ದೇಶದ ಜನತೆ ಮತ ನೀಡಲಿದ್ದಾರೆ ಎಂದರು.ನರೇಂದ್ರ ಮೋದಿ ಪ್ರಧಾನಿಯಾಗಿ 10 ವರ್ಷಗಳ ಕಾಲ ಜನಪರ ಆಡಳಿತ ನೀಡುವ ಮೂಲಕ ಯಾವ ನಯಾಪೈಸೆ ಭ್ರಷ್ಟಾಚಾರವಿಲ್ಲದೇ ಇಡೀ ವಿಶ್ವವೇ ಮೆಚ್ಚುವಂಥ ಸುಭದ್ರ ಆಡಳಿತ ನೀಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಕಾಂಗ್ರೆಸ್‌ನವರಿಗೆ ಕನಸಿನಲ್ಲೂ ಮೋದಿ ಬಂದು ನಿದ್ದೆಗೆಡಿಸುತ್ತಿದ್ದಾರೆ. ಹೀಗಾಗಿ ಏನಾದರೂ ಮಾಡಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಷಡ್ಯಂತ್ರ ನಡೆಸಿ ಮೋದಿಯವರು ಈ ಸಾರಿ ಚುನಾವಣೆಯಲ್ಲಿ ಯಾವ ಕಾರಣಕ್ಕೂ ಗೆಲ್ಲಬಾರದೆಂಬ ಕಾರಣ ಇಟ್ಟುಕೊಂಡು ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.ರಾಜ್ಯದಿಂದ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಸಿಗುತ್ತಿಲ್ಲ. ಸಚಿವರನ್ನು ಒತ್ತಾಯವಾಗಿ ನಿಲ್ಲಿಸುತ್ತಿದ್ದಾರೆ ಎಂದರು.ಪ್ರಧಾನಿ ನರೇಂದ್ರ ಮೋದಿ ಹಿಂದೂ ಧರ್ಮದ ಪ್ರತೀಕವಾಗಿದ್ದಾರೆ. ೧೨ ಕೋಟಿ ರೈತರಿಗೆ ವರ್ಷಕ್ಕೆ ₹೬ ಸಾವಿರ ನೀಡುತ್ತಿದ್ದಾರೆ. ೮೦ಕೋಟಿ ಬಡಜನರ ನಾನಾ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ರೈಲ್ವೆ, ರಸ್ತೆ, ಸೇತುವೆ ನಿರ್ಮಾಣ ಸೇರಿದಂತೆ ಮೋದಿಯವರ ಜನಪರ ಯೋಜನೆಗಳಾಗಿವೆ ಎಂದು ಗುಣಗಾನ ಮಾಡಿದರು.ಸ್ಥಳೀಯ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ನಮೋ ಬ್ರಿಗೇಡ್ ರಾಜ್ಯಾಧ್ಯಕ್ಷ ವರ್ಧಮಾನ ತ್ಯಾಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಚಾಲಕ ಶರಣೆಗೌಡ ಕಾರಟಗಿ ನಿರೂಪಿಸಿದರು.