ಚಾಮರಾಜೇಶ್ವರ ಸ್ವಾಮಿ ರಥೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ

| Published : Jul 06 2025, 11:48 PM IST

ಸಾರಾಂಶ

ಇತಿಹಾಸ ಪ್ರಸಿದ್ದ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ ಜುಲೈ ೧೦ರಂದು ನಡೆಯಲಿದ್ದು, ಇದರ ಸುಗಮ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಇತಿಹಾಸ ಪ್ರಸಿದ್ದ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ ಜುಲೈ ೧೦ರಂದು ನಡೆಯಲಿದ್ದು, ಇದರ ಸುಗಮ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚಿಗೆ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವ ಸಂಬಂಧ ನಡೆದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಾಮರಾಜೇಶ್ವರಸ್ವಾಮಿ ರಥೋತ್ಸವ ಸಾಗುವ ಮಾರ್ಗಗಳಲ್ಲಿ ಸುಗಮವಾಗಿ ರಥ ಸಂಚರಿಸಲು ಪೂರಕವಾಗಿರುವ ಮರಳು ಹಾಕುವ ವ್ಯವಸ್ಥೆಯಾಗಬೇಕು. ಮಾರ್ಗಮಧ್ಯದಲ್ಲಿ ವಿದ್ಯುತ್ ತಂತಿಗಳು ಅಡಚಣೆಯಾಗದಂತೆ ಪರಿಶೀಲಿಸಿಕೊಳ್ಳಬೇಕು. ಪೂಜಾ ಕೈಂಕರ್ಯಗಳು ಈ ಹಿಂದಿನಿಂದ ನಡೆದು ಬಂದಿರುವ ಪರಂಪರೆ ಅನುಸಾರ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಜನದಟ್ಟಣೆ ಉಂಟಾಗಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ತೊಂದರೆಯಾಗದಂತೆ ರಥೋತ್ಸವ ವೀಕ್ಷಣೆ, ದೇವಾಲಯ ಪ್ರವೇಶ, ಮತ್ತಿತರ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳಿಗೆ ಅನುವು ಮಾಡಿಕೊಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಕುಡಿಯುವ ನೀರು, ಪ್ರಸಾದ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಶುದ್ದತೆಯ ಬಗ್ಗೆ ಪರೀಕ್ಷಿಸಬೇಕು. ಜಾತ್ರಾ ಸಂದರ್ಭದಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ಮಳಿಗೆಗಳನ್ನು ಸ್ಥಾಪಿಸುವವರಿಗೆ ಅನುಕೂಲ ಮಾಡಿಕೊಡಬೇಕು. ರಥೋತ್ಸವ ನಡೆಯುವ ಸಮೀಪದ ಆವರಣದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಬೇಕು. ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು ನಿಯೋಜನೆಯಾಗಬೇಕು ಎಂದರು.

ರಥೋತ್ಸವ ಸಂದರ್ಭದಲ್ಲಿ ನಗರದಲ್ಲಿ ವಿಶೇಷವಾಗಿ ಸ್ವಚ್ಚತೆ ಕೈಗೊಳ್ಳಬೇಕು. ಆಗಿಂದಾಗ ಸ್ವಚ್ಛತಾ ಕೆಲಸಗಳು ನಡೆಯಬೇಕಿರುವುದರಿಂದ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಬೇಕು. ಶೌಚಾಲಯಗಳ ವ್ಯವಸ್ಥೆಯು ಆಗಬೇಕು. ಭಕ್ತಾಧಿಗಳಿಗೆ ಮಾಹಿತಿ ನೀಡುವ ಫಲಕ ಅಳವಡಿಸಬೇಕು. ರಥೋತ್ಸವ ಸಂಬಂಧಿ ಕಾರ್ಯಗಳಿಗೆ ನಿಯೋಜನೆಯಾಗಿರುವ ಅಧಿಕಾರಿಗಳು ಪೂರ್ವ ಪರಿಶೀಲನೆ ಮಾಡಿ ತ್ವರಿತವಾಗಿ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಜನಸಂದಣಿ ಹೆಚ್ಚು ಇರುವ ಸ್ಥಳಗಳಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಎಸ್.ಒ.ಪಿ ಇದೆ. ಈ ಪ್ರಕಾರ ಎಲ್ಲ ಸಿದ್ದತೆಗೆ ಮುಂದಾಗಿದ್ದೇವೆ. ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ ಪತ್ರ ಬರೆದು ವಹಿಸಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಲಾಗಿದೆ ಎಂದರು.

ರಥೋತ್ಸವ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋ ಬಸ್ತ್ ಮಾಡಲಾಗುತ್ತಿದೆ. ಇಬ್ಬರು ಡಿವೈಎಸ್‌ಪಿ, ೧೦ ಇನ್ಸ್‌ಪೆಕ್ಟರ್ , ೨೦ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ೪೦ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಕಾನ್ಸ್‌ಟೇಬಲ್, ಹೋಂ ಗಾರ್ಡ್, ಇನ್ನಿತರ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ವಾಹನಗಳ ಪಾರ್ಕಿಂಗ್ ಸ್ಥಳವನ್ನು ನಿಗದಿ ಮಾಡಲಾಗಿದೆ. ಸಂಚಾರ ನಿರ್ವಹಣೆಗೆ ಪೂರಕವಾಗಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ತಹಸೀಲ್ದಾರ್ ಬಿ. ಗಿರಿಜಾ, ಶ್ರೀ ಚಾಮರಾಜೇಶ್ವರಸ್ವಾಮಿ ದೇವಾಲಯದ ಅರ್ಚಕರಾದ ರಾಮಕೃಷ್ಣ ಭಾರಧ್ವಜ್, ಎನ್. ದರ್ಶನ್, ಶ್ರೀ ಚಾಮರಾಜೇಶ್ವರ ದೇವಾಲಯದ ಅಭಿವೃದ್ದಿ ಸಲಹಾ ಸಮಿತಿ ಸದಸ್ಯರಾದ ಸುರೇಶ್ ನಾಯಕ, ಚಾ.ರಂ. ಶ್ರೀನಿವಾಸಗೌಡ, ಮಾಧು, ಶ್ರೀ ಚಾಮರಾಜೇಶ್ವರ ದೇವಾಲಯದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಬಿ. ರಾಜಶೇಖರಮೂರ್ತಿ, ಬಂಡಿಗಾರ್ ಮಹೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರದೀಪ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ. ಸುಧಾ, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸಂದೀಪ್ ಬಸರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡಯ್ಯ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.